SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಸೈಟ್ ಕೊಡಿಸುವುದಾಗಿ ವಂಚನೆ: ಹಣ ಕೇಳಿದ ಮಹಿಳೆಗೆ ಅಶ್ಲೀಲ ವಿಡಿಯೋ, ಕೊಲೆ ಬೆದರಿಕೆ

ಸೈಟ್ ಕೊಡಿಸುವುದಾಗಿ ವಂಚನೆ: ಹಣ ಕೇಳಿದ ಮಹಿಳೆಗೆ ಅಶ್ಲೀಲ ವಿಡಿಯೋ, ಕೊಲೆ ಬೆದರಿಕೆ

0
6

ದಾವಣಗೆರೆ: ಸೈಟ್ ಮಾರಾಟ ಮಾಡಿಸಿಕೊಡುವುದಾಗಿ ನಂಬಿಸಿ ₹33 ಲಕ್ಷ ಪಡೆದು, ಬಳಿಕ ಹಣ ವಾಪಸ್ ಕೇಳಿದ ಮಹಿಳೆಗೆ ಅಶ್ಲೀಲ ವಿಡಿಯೋ ಕಳುಹಿಸಿ ಜೀವ ಬೆದರಿಕೆ ಹಾಕಿದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ದಾವಣಗೆರೆ ಸೈಬರ್ ಕ್ರೈಂ (ಸಿಇಎನ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಎಂ.ಸಿ.ಸಿ. ‘ಬಿ’ ಬ್ಲಾಕ್ ನಿವಾಸಿ ಗೃಹಿಣಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಹಾವೇರಿ ಜಿಲ್ಲೆಯ ಹಾವನೂರು ಗ್ರಾಮದ ಸುನಿಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ದೂರಿನ ಪ್ರಕಾರ, ಗೃಹಿಣಿಯ ಪತಿ ಹಾಗೂ ಸುನೀಲ್ ನಡುವೆ ವ್ಯವಹಾರಿಕ ಪರಿಚಯವಿತ್ತು. ಕೊಡಗನೂರು ಗ್ರಾಮದ ನಾಲ್ಕು ಸೈಟ್‌ಗಳನ್ನು ಪರಿಚಯಸ್ಥರಿಗೆ ಮಾರಾಟ ಮಾಡಿಸಿಕೊಡುವುದಾಗಿ ಸುನೀಲ್ ನಂಬಿಕೆ ಮೂಡಿಸಿದ್ದನು. ಈ ಸಂಬಂಧ ಒಟ್ಟು ₹39 ಲಕ್ಷ ಮೊತ್ತಕ್ಕೆ ಒಪ್ಪಂದ ಮಾಡಲಾಗಿದ್ದು, ಮುಂಗಡವಾಗಿ ₹33 ಲಕ್ಷ ನೀಡಲಾಗಿತ್ತು. ಉಳಿದ ಹಣವನ್ನು ನೋಂದಣಿ ವೇಳೆ ಪಾವತಿಸುವುದಾಗಿ ತಿಳಿಸಲಾಗಿತ್ತು.

ಬಳಿಕ ತುರ್ತು ಹಣದ ಅವಶ್ಯಕತೆ ಇದೆ ಎಂದು ಹೇಳಿದ ಸುನೀಲ್, ಸೈಟ್ ಮುಂಗಡ ಹಣವಾಗಿದ್ದ ₹33 ಲಕ್ಷವನ್ನು ತನ್ನ ಬಳಿಗೆ ಪಡೆದುಕೊಂಡಿದ್ದನು. ಸೈಟ್ ನೋಂದಣಿ ವೇಳೆ ಬಡ್ಡಿ ಸಮೇತ ಹಣವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದಲ್ಲದೆ, ಭದ್ರತೆಗಾಗಿ ಚೆಕ್ ಹಾಗೂ ಖಾಲಿ ಹಾಳೆಯಲ್ಲಿ ಬರೆದು ನೀಡಿದ್ದನು ಎನ್ನಲಾಗಿದೆ.

ಇತ್ತೀಚೆಗೆ ಮಹಿಳೆ ಹಣ ವಾಪಸ್ ಕೇಳಿದಾಗ, ಸುನೀಲ್ ಆಕ್ರೋಶಗೊಂಡು ತನ್ನ ಮೊಬೈಲ್‌ನಿಂದ ಮಹಿಳೆಯ ಮೊಬೈಲ್‌ಗೆ ಅಶ್ಲೀಲ ವಿಡಿಯೋ ಕಳುಹಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೆ, “ಹಣ ಕೊಡಲು ಆಗುವುದಿಲ್ಲ. ಏನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ. ಮತ್ತೊಮ್ಮೆ ಹಣ ಕೇಳಲು ಬಂದರೆ ಕೊಲೆ ಮಾಡುತ್ತೇನೆ” ಎಂದು ಮೊಬೈಲ್ ಸಂದೇಶದ ಮೂಲಕ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.