SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಪೋಕ್ಸೋ ಪ್ರಕರಣ: ಮತ್ತೆ ವಿಚಾರಣೆಗೆ ಹಾಜರಾದ ವಚನಾನಂದ ಶ್ರೀ

ಪೋಕ್ಸೋ ಪ್ರಕರಣ: ಮತ್ತೆ ವಿಚಾರಣೆಗೆ ಹಾಜರಾದ ವಚನಾನಂದ ಶ್ರೀ

0
205

ಹರಿಹರ: ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಇಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪದಚ್ಯುತ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ಅವರು ಸೋಮವಾರ 2ನೇ ಬಾರಿಗೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿದರು.

ಭಕ್ತರೊಬ್ಬರ ಕಾರಿನಲ್ಲಿ ಪೊಲೀಸ್ ಠಾಣೆಗೆ ಆಗಮಿಸಿದ ಸ್ವಾಮೀಜಿ ಅವರನ್ನು ಬೆಳಗ್ಗೆ 10 ರಿಂದ ಮಧ್ಯಾಹ್ನ 2.15ರ ವರೆಗೆ ತನಿಖಾಧಿಕಾರಿಯಾದ ಹರಿಹರ ವೃತ್ತ ನಿರೀಕ್ಷಕ ಸುರೇಶ್ ಸಗರಿ ಅವರು ಸತತವಾಗಿ ವಿಚಾರಣೆ ನಡೆಸಿದರು.

ವಿಚಾರಣೆ ಮುಗಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, ಪೊಲೀಸರು ನೋಟಿಸ್ ನೀಡಿದ್ದರಿಂದ 2ನೇ ಬಾರಿಗೆ ತನಿಖೆಗೆ ಹಾಜರಾಗಿದ್ದೇನೆ. ತನಿಖಾ ಪ್ರಕ್ರಿಯೆಯಲ್ಲಿ ಪೊಲೀಸರಿಗೆ ನನ್ನ ಕಡೆಯಿಂದ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಮೇ 14 ರಂದು ಮೊದಲ ಬಾರಿಗೆ ಪೊಲೀಸರು ಶ್ರೀಗಳನ್ನು 5 ಗಂಟೆಗಳ ಕಾಲ ವಿಚಾರಣೆ ನಡೆಸಿ, ಬಳಿಕ ಹರಿಹರ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಇದೀಗ ನಾಲ್ಕೇ ದಿನಗಳ ಅಂತರದಲ್ಲಿ ಶ್ರೀಗಳು ಮತ್ತೆ ವಿಚಾರಣೆ ಎದುರಿಸಿದ್ದಾರೆ.

ಈ ಮಧ್ಯೆ ಶ್ರೀಗಳ ವಿರುದ್ಧ ಮತ್ತೊಂದು ಹೊಸ ಪ್ರಕರಣ ದಾಖಲಾಗುವ ಮುನ್ಸೂಚನೆಗಳು ಲಭ್ಯವಾಗಿವೆ. ಮಠದಲ್ಲಿದ್ದ ತಮ್ಮ ಮಕ್ಕಳ ಮೇಲೆ ಸ್ವಾಮೀಜಿ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಈ ಹಿಂದೆ ಮೂರು ಜನ ಬಾಲಕರ ಪೋಷಕರು ದಾವಣಗೆರೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದರು.

ಈ ದೂರು ದಾಖಲಾದ ಬೆನ್ನಲ್ಲೇ ಮಕ್ಕಳ ಕಲ್ಯಾಣ ಸಮಿತಿಯು ಮಠಕ್ಕೆ ಭೇಟಿ ನೀಡಿ ಅಡುಗೆ ಕೋಣೆ, ಮಕ್ಕಳು ಮಲಗುತ್ತಿದ್ದ ಕೊಠಡಿ, ಭೋಜನಾಲಯ ಸೇರಿದಂತೆ ಇತರೆಡೆ ಸ್ಥಳ ಪರಿಶೀಲನೆ ನಡೆಸಿ, ವಚನಾನಂದ ಶ್ರೀಗಳ ವಿಚಾರಣೆಯನ್ನೂ ನಡೆಸಿತ್ತು.

ಈ ತನಿಖೆಯ ಸಮಗ್ರ ವರದಿಯನ್ನು ಮಕ್ಕಳ ಕಲ್ಯಾಣ ಸಮಿತಿಯು ಮೇ 16 ರಂದು ಹರಿಹರ ಗ್ರಾಮಾಂತರ ಪೊಲೀಸರಿಗೆ ಅಧಿಕೃತವಾಗಿ ಹಸ್ತಾಂತರಿಸಿದೆ. ಸಿಡಬ್ಲ್ಯೂಸಿ ನೀಡಿರುವ ವರದಿಯ ಹಿನ್ನೆಲೆಯಲ್ಲೇ ಶ್ರೀಗಳನ್ನು ಸೋಮವಾರ ತುರ್ತಾಗಿ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದ್ದು, ಶ್ರೀಗಳ ವಿರುದ್ಧ ಶೀಘ್ರದಲ್ಲೇ ಮತ್ತೊಂದು ದೂರು ದಾಖಲಾಗುವ ಸಾಧ್ಯತೆಯಿದೆ.