ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರು ರಾಜ್ಯಾದ್ಯಂತ ಮತ್ತೆ ಬೃಹತ್ ಮುಷ್ಕರ ನಡೆಸಲು ಸಜ್ಜಾಗಿದ್ದಾರೆ. ಇದರಿಂದಾಗಿ ಮೇ 20ರಂದು ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ತಬ್ಧವಾಗಲಿದೆ.
ಸಾರಿಗೆ ನೌಕರರ ಸಂಘಟನೆಯ ಮನವೊಲಿಸಲು ಸರ್ಕಾರ ನಡೆಸಿದ ಪ್ರಯತ್ನಗಳು ಸದ್ಯಕ್ಕೆ ವಿಫಲವಾಗಿವೆ. ಹೀಗಾಗಿ, ನಾಳೆ ಅಂದ್ರೆ ಮಂಗಳವಾರದ ರಾತ್ರಿಯಿಂದಲೇ ರಾಜ್ಯದಾದ್ಯಂತ ಬಸ್ ಸಂಚಾರ ಸಂಪೂರ್ಣ ಬಂದ್ ಆಗುವ ಭೀತಿ ಎದುರಾಗಿದೆ.
ಮುಷ್ಕರವನ್ನು ತಡೆಯಲು ರಾಜ್ಯ ಸರ್ಕಾರ ಮತ್ತು ಸಾರಿಗೆ ಇಲಾಖೆಯ ಉನ್ನತ ಅಧಿಕಾರಿಗಳು, ಸಂಘಟನೆಗಳ ಮುಖಂಡರು ನಡುವೆ ನಡೆದ ಸಂಧಾನ ಸಭೆಯು ಸಂಪೂರ್ಣವಾಗಿ ವಿಫಲಗೊಂಡಿದೆ.
ಸಭೆಯಲ್ಲಿ ನೌಕರರ ಮುಖ್ಯ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಯಾವುದೇ ಸ್ಪಷ್ಟ ಹಾಗೂ ಸಕಾರಾತ್ಮಕ ಭರವಸೆ ದೊರೆತಿಲ್ಲ. ಸರ್ಕಾರ ಕೇವಲ ತಾಂತ್ರಿಕ ಕಾರಣಗಳನ್ನು ಹೇಳುತ್ತಿದೆ ಎಂದು ಸಾರಿಗೆ ನೌಕರರ ಮುಖಂಡರು ಆರೋಪಿಸಿದ್ದಾರೆ.
ಸಭೆಯಲ್ಲಿ ಸ್ಪಷ್ಟ ಉತ್ತರ ದೊರೆಯದ ಕಾರಣ ಮುಖಂಡರುಗಳು ಸಭೆಯಿಂದ ಹೊರನಡೆದಿದ್ದು, ಸಂಧಾನ ಸಭೆ ಯಾವುದೇ ತಾರ್ಕಿಕ ಅಂತ್ಯ ಕಾಣದೆ ಮುಕ್ತಾಯವಾಗಿದೆ ಎಂದು ನಂಬಲರ್ಹ ಮೂಲಗಳು ಸ್ಪಷ್ಟಪಡಿಸಿವೆ.
ಸಾರಿಗೆ ನೌಕರರ ಮುಖ್ಯ ಬೇಡಿಕೆಗಳು: “ಸರ್ಕಾರ ನೀಡುತ್ತಿರುವ ಶೇಕಡಾ 12.5 ರಷ್ಟು ವೇತನ ಹೆಚ್ಚಳವನ್ನು ನಾವು ಒಪ್ಪುವುದಿಲ್ಲ. ನಮಗೆ ಶೇಕಡಾ 25 ರಷ್ಟು ವೇತನ ಪರಿಷ್ಕರಣೆ ಆಗಲೇಬೇಕು” ಎನ್ನುವುದು ನೌಕರರ ಬಿಗಿಪಟ್ಟು. ಇದರೊಂದಿಗೆ, 2024ರ ಜನವರಿ 1ಕ್ಕೆ ಅನ್ವಯವಾಗುವಂತೆ ಶೇ. 25ರಷ್ಟು ವೇತನ ಹೆಚ್ಚಿಸಬೇಕು, 36 ತಿಂಗಳ ಹಿಂಬಾಕಿ ವೇತನವನ್ನು ಏಕಕಾಲಕ್ಕೆ ಬಿಡುಗಡೆ ಮಾಡಬೇಕು ಮತ್ತು ಸರಿಸಮಾನ ವೇತನ ನೀಡಬೇಕು ಎಂಬುದು ಅವರ ಪ್ರಮುಖ ಆಗ್ರಹವಾಗಿದೆ.






















