SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಜಗಳೂರು ಬಂದ್‌ಗೆ ಭರ್ಜರಿ ಬೆಂಬಲ: ಬರ ಘೋಷಣೆಗೆ ಬಿಜೆಪಿ ಮುಖಂಡರ ಪಟ್ಟು

ಜಗಳೂರು ಬಂದ್‌ಗೆ ಭರ್ಜರಿ ಬೆಂಬಲ: ಬರ ಘೋಷಣೆಗೆ ಬಿಜೆಪಿ ಮುಖಂಡರ ಪಟ್ಟು

0
55

ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸದಿರುವುದನ್ನು ಖಂಡಿಸಿ ಬಿಜೆಪಿ ತಾಲೂಕು ಘಟಕದ ನೇತೃತ್ವದಲ್ಲಿ ಕರೆ ನೀಡಿದ್ದ ಜಗಳೂರು ಬಂದ್‌ಗೆ ವರ್ತಕರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಬೆಂಬಲ ನೀಡಿದ್ದು, ಪಟ್ಟಣ ಬಂದ್ ಶಾಂತಿಯುತವಾಗಿ ನಡೆಯಿತು.

ಜಗಳೂರು ತಾಲೂಕನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ತಕ್ಷಣ ಸೇರಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬೆಳಗ್ಗೆಯಿಂದಲೇ ಪ್ರತಿಭಟನೆ ನಡೆಸಿದರು. ದಾವಣಗೆರೆ, ಚಳ್ಳಕೆರೆ, ಕೊಟ್ಟೂರು ಹಾಗೂ ಬಿದರಕೆರೆ ರಸ್ತೆಗಳ ಪ್ರಮುಖ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಾಹನ ಸಂಚಾರ ತಡೆದು, ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಿದರು. ಬಳಿಕ ವಾಹನಗಳನ್ನು ಕಳುಹಿಸಿಕೊಡುವ ಮೂಲಕ ಪ್ರತಿಭಟನೆ ಶಾಂತಿಯುತವಾಗಿ ಮುಂದುವರಿಸಿದರು.

ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರಪ್ಪ ಹಾಗೂ ಎಚ್.ಪಿ. ರಾಜೇಶ್ ಸೇರಿದಂತೆ ಬಿಜೆಪಿ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪಟ್ಟಣದ ಬಹುತೇಕ ಅಂಗಡಿ-ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಮುಚ್ಚಿದ್ದವು. ಕೆಲ ಗಂಟೆಗಳ ಕಾಲ ಬಸ್ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡಿದರು.

ಹೋರಾಟಕ್ಕೆ ಸ್ಪಂದನೆ: ಮಾಜಿ ಶಾಸಕ ಎಸ್.ವಿ. ರಾಮಚಂದ್ರಪ್ಪ ಮಾತನಾಡಿ, “ಇಂದಿನ ಹೋರಾಟಕ್ಕೆ ರೈತರು, ವಿವಿಧ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಬೆಂಬಲ ನೀಡಿರುವುದು ನಮ್ಮ ಹೋರಾಟಕ್ಕೆ ಸಿಕ್ಕ ಪ್ರತಿಕ್ರಿಯೆ. ಮೇಲಧಿಕಾರಿಗಳಿಂದ ದೂರವಾಣಿ ಮೂಲಕ ಮಾಹಿತಿ ಬಂದಿದ್ದು, ನಾಳೆ ಮಧ್ಯಾಹ್ನ 2 ಗಂಟೆಯ ನಂತರ ರಾಜ್ಯ ಸರ್ಕಾರ ಬರ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಉನ್ನತ ಮಟ್ಟದ ಸಭೆಯ ಬಳಿಕ ಈ ಕುರಿತು ಅಂತಿಮ ನಿರ್ಧಾರವಾಗಲಿದೆ” ಎಂದರು.

ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿ, “ಬೆಳಗ್ಗೆಯಿಂದಲೇ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಗಳೂರು ಬರಪೀಡಿತ ಪಟ್ಟಿಗೆ ಸೇರಬೇಕೆಂಬ ವಿಚಾರದಲ್ಲಿ ರೈತ ಸಂಘಟನೆಗಳೂ ಕೈಜೋಡಿಸಿವೆ. ತಾಲೂಕಿನಲ್ಲಿ ಕೇವಲ ಶೇ. 30ರಷ್ಟು ಬಿತ್ತನೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜಗಳೂರು ಮೊದಲ ಪಟ್ಟಿಯಲ್ಲೇ ಬರಬೇಕಾಗಿತ್ತು. ಜಗಳೂರು ಬರಪೀಡಿತ ಪಟ್ಟಿಗೆ ಸೇರದಿರುವುದಕ್ಕೆ ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ” ಎಂದು ಅವರು ಆರೋಪಿಸಿದರು.

ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೊಕ್ಕೆ ನಾಗರಾಜ್ ಮಾತನಾಡಿ, “ರೈತರ ಹಿತ ಕಾಪಾಡಬೇಕಾದವರು ಜಗಳೂರಿನ ಹೆಸರನ್ನು ಮೊದಲ ಪಟ್ಟಿಯಲ್ಲೇ ಸೇರಿಸಲು ಕ್ರಮ ಕೈಗೊಳ್ಳಬೇಕಿತ್ತು. ಎರಡನೇ, ಮೂರನೇ ಪಟ್ಟಿಗಳಲ್ಲೂ ಹೆಸರು ಇಲ್ಲದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಪಕ್ಷದ ಹೋರಾಟದ ಉದ್ದೇಶ ರೈತರ ಹಿತ ಕಾಪಾಡುವುದೇ ಆಗಿದೆ” ಎಂದರು.

ಪೊಲೀಸರ ನಿಯೋಜನೆ: ಬಂದ್ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ನಿಯೋಜಿತರಾಗಿದ್ದರು. ಬಂದ್ ತೀವ್ರ ಸ್ವರೂಪ ಪಡೆಯುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮಾಜಿ ಶಾಸಕರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.

ಶಾಮಿಯಾನ ತೆರವು, ಬಸ್‌ಗೆ ಕಲ್ಲು ತೂರಾಟದ ಆರೋಪ: ಬಂದ್‌ಗೆ ಬಂದಿದ್ದ ಕಾರ್ಯಕರ್ತರಿಗೆ ಕುಳಿತುಕೊಳ್ಳಲು ಹಾಗೂ ಊಟ-ತಿಂಡಿ ವ್ಯವಸ್ಥೆಗಾಗಿ ಹಾಕಲಾಗಿದ್ದ ಶಾಮಿಯಾನವನ್ನು ಕೆಲವರು ತೆರವುಗೊಳಿಸಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದರು. ಅಲ್ಲದೆ ಸರ್ಕಾರಿ ಬಸ್‌ಗೆ ಕಲ್ಲು ತೂರಿ ಗಾಜು ಒಡೆದಿರುವ ಘಟನೆಯ ಕುರಿತು ಕಿಡಿಕಾರಿದ ಮುಖಂಡರು, ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ಕಾರ್ಯಕರ್ತರ ವಿರುದ್ಧ ಇಂತಹ ಕ್ರಮಗಳು ಏಕೆ ನಡೆಯಬೇಕು ಎಂದು ಪೊಲೀಸರನ್ನು ಪ್ರಶ್ನಿಸಿದರು. ಬಂದ್ ಸಂದರ್ಭದಲ್ಲಿ ಯಾವುದೇ ಗಲಾಟೆ ನಡೆಯದಂತೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಮಂಡಲ ಅಧ್ಯಕ್ಷ ಮರುಳಾರಾಧ್ಯ, ಮಾಜಿ ಮಂಡಲ ಅಧ್ಯಕ್ಷ ಪಲ್ಲಾಗಟ್ಟೆ ಮಹೇಶಣ್ಣ, ಪಣೆಯಾಪುರ ಲಿಂಗರಾಜ್, ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಧರ್ಮನಾಯ್ಕ, ಲ್ಯಾಬ್ ಶಿವು, ಯೋಗಾನಂದ, ರಘು ಜಾಗ್ವರ್, ಮರೇನಹಳ್ಳಿ ಕಾರ್ತಿಕ್, ಸಂದೀಪ್, ಮಾರುತಿ, ದಿನೇಶ್, ಕಿಚ್ಚ ಬಸವರಾಜ್, ಶಿವು, ಏಳುಕೋಟಿ ಕಾಮಗೇತನಹಳ್ಳಿ ಸುರೇಶ್, ರೇವಣ್ಣ, ಮದಕರಿ ಸೇರಿದಂತೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.