Home Advertisement
Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಕರ್ನಾಟಕದ ಆರ್ಥಿಕ ಶಿಸ್ತು ಹಾಳಾಗಿದೆ: ಸರ್ಕಾರ ಈ ಬಗ್ಗೆ ಉತ್ತರಿಸಲಿ

ಕರ್ನಾಟಕದ ಆರ್ಥಿಕ ಶಿಸ್ತು ಹಾಳಾಗಿದೆ: ಸರ್ಕಾರ ಈ ಬಗ್ಗೆ ಉತ್ತರಿಸಲಿ

0
48

ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಡೋಲಾಯಮಾನ ಸ್ಥಿತಿಗೆ: ಬ್ರಿಜೇಶ್ ಚೌಟ ಆರೋಪ

ಮಂಗಳೂರು: ಕ್ಯಾ. ಬ್ರಿಜೇಶ್ ಚೌಟ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಕರ್ನಾಟಕವನ್ನು ಸಾಲದ ಸುಳಿಗೆ ತಳ್ಳಿರುವುದೇ ಸರ್ಕಾರದ ಮೂರು ವರ್ಷದ ಸಾಧನೆ ಎಂದು ಆರೋಪಿಸಿದ್ದಾರೆ.

ಭಾರತೀಯ ಜನತಾ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಆರ್ಥಿಕ ಶಿಸ್ತಿಗೆ ಹೆಸರುವಾಸಿಯಾಗಿತ್ತು. ಆದರೆ ಈಗ ರಾಜ್ಯ ಆರ್ಥಿಕ ಕೊರತೆಯನ್ನು ಎದುರಿಸುತ್ತಿರುವುದನ್ನು ಸಿಎಜಿ ವರದಿಯೇ ಸ್ಪಷ್ಟಪಡಿಸುತ್ತಿದೆ ಎಂದು ಹೇಳಿದರು.

“ರಾಜ್ಯ ಸರ್ಕಾರ ಸಾಧನಾ ಸಮಾವೇಶಗಳನ್ನು ನಡೆಸುತ್ತಿದೆ. ಆದರೆ ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಜನರಿಗೆ ಉತ್ತರಿಸಬೇಕಾಗಿದೆ” ಎಂದು ಅವರು ಆಗ್ರಹಿಸಿದರು.

ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಜಾರಿಯಲ್ಲೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿದ ಬ್ರಿಜೇಶ್ ಚೌಟ, ಪಿಎಂ ಆವಾಸ್ ಯೋಜನೆ ಅಡಿಯಲ್ಲಿ ಮಂಜೂರಾದ 6.38 ಲಕ್ಷ ಮನೆಗಳಲ್ಲಿ ಸುಮಾರು 2.5 ಲಕ್ಷ ಮನೆಗಳು ಇನ್ನೂ ಅಪೂರ್ಣವಾಗಿವೆ ಎಂದು ಹೇಳಿದರು. ಅದೇ ರೀತಿ ಕ್ಷೀರಧಾರೆ ಯೋಜನೆಯಡಿ ಕಳೆದ ಒಂಬತ್ತು ತಿಂಗಳಿನಿಂದ ಸುಮಾರು ₹800 ಕೋಟಿ ಸಬ್ಸಿಡಿ ಹಣವನ್ನು ಹೈನುಗಾರರಿಗೆ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ಇನ್ನೂ ₹15,000 ಕೋಟಿ ಕಾರ್ಪಸ್ ನಿಧಿಯನ್ನು ಬೇರೆ ಉದ್ದೇಶಗಳಿಗೆ ಬಳಸಲಾಗಿದೆ ಎಂದು ಆರೋಪಿಸಿದ ಅವರು, “ಆ ಹಣವನ್ನು ಯಾವ ಉದ್ದೇಶಕ್ಕೆ ಬಳಸಲಾಗಿದೆ ಎಂಬುದಕ್ಕೆ ಸರ್ಕಾರದ ಬಳಿ ಸ್ಪಷ್ಟ ಉತ್ತರವೇ ಇಲ್ಲ” ಎಂದು ಟೀಕಿಸಿದರು. “ಸಿದ್ದರಾಮಯ್ಯ ಅವರು ಹಲವು ದಶಕಗಳ ರಾಜಕೀಯ ಅನುಭವ ಹೊಂದಿದ್ದರೂ ತಮ್ಮ ಕೊನೆಯ ಅವಧಿಯಲ್ಲಿ ಯಾಕೆ ಈ ರೀತಿಯ ಆಡಳಿತ ನಡೆಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ” ಎಂದು ವ್ಯಂಗ್ಯವಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಪರಿಸ್ಥಿತಿ ಹದಗೆಟ್ಟಿದ್ದು, ಆರೋಗ್ಯ ಇಲಾಖೆ ಸಿಎಸ್‌ಆರ್ ನಿಧಿಗಳ ಮೇಲೆ ಅವಲಂಬಿತವಾಗಿದೆ ಎಂದು ಅವರು ಆರೋಪಿಸಿದರು. “₹25 ಕೋಟಿ ಸಿಎಸ್‌ಆರ್ ಹಣದಲ್ಲಿ ಆರೋಗ್ಯ ಇಲಾಖೆ ಕಾರ್ಯನಿರ್ವಹಿಸುವ ಪರಿಸ್ಥಿತಿ ಬಂದಿದೆ. ಹೊಸ ನೇಮಕಾತಿ ನಡೆಯುತ್ತಿಲ್ಲ, ಸಿಬ್ಬಂದಿಗೆ ವೇತನ ನೀಡುವುದಲ್ಲಿಯೂ ತೊಂದರೆ ಇದೆ” ಎಂದು ಹೇಳಿದರು.

ರಾಜ್ಯ ಸರ್ಕಾರದ ಅಲ್ಪಸಂಖ್ಯಾತ ಕಾಲನಿ ನಿಧಿ ಹಂಚಿಕೆ ಕ್ರಮವನ್ನು ಟೀಕಿಸಿದ ಅವರು, “ಇದು ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವಗಳಿಗೆ ವಿರುದ್ಧವಾದ ಕ್ರಮ” ಎಂದು ಆರೋಪಿಸಿದರು. ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜ್ಯದಾದ್ಯಂತ ಜನಾಭಿಪ್ರಾಯ ನಿರ್ಮಾಣ ಮಾಡುವುದಾಗಿ ಬ್ರಿಜೇಶ್ ಚೌಟ ತಿಳಿಸಿದರು.

ಈ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಉಲ್ಲೇಖಿಸಿದ ಅವರು, “ಪ್ರತಿಯೊಂದು ವಿಷಯಕ್ಕೂ ಟ್ವೀಟ್ ಮಾಡಿ ರಾಜಕೀಯ ಮಾಡುವುದಿಲ್ಲ. ಪ್ರಿಯಾಂಕ್ ಖರ್ಗೆ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಸಾಧನೆ ಅವರ ಕ್ಷೇತ್ರಗಳ ಅಭಿವೃದ್ಧಿಯಿಂದಲೇ ಗೊತ್ತಾಗುತ್ತದೆ” ಎಂದು ಹೇಳಿದರು.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಜಾಗತಿಕ ಪರಿಸ್ಥಿತಿಗಳ ಪರಿಣಾಮದಿಂದ ಈ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು. “ಇದು ಸವಾಲಿನ ಪರಿಸ್ಥಿತಿಯಾದರೂ ಅದನ್ನು ಸರಿದೂಗಿಸುವ ಕೆಲಸ ನಡೆಯುತ್ತಿದೆ” ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಯಾವುದೇ ಜನಪರ ಯೋಜನೆಗಳ ವಿರೋಧಿ ಅಲ್ಲ. ಆದರೆ ರಾಜ್ಯದ ತಪ್ಪು ಆರ್ಥಿಕ ನಿರ್ವಹಣೆಯಿಂದ ಸಮಸ್ಯೆಗಳು ಉಂಟಾಗಿವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶಾಂತಿ ಪ್ರಸಾದ್, ಸುಜಿತ್ ಪ್ರತಾಪ್, ಡಾ. ಮಂಜುಳಾ ರಾವ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.