SK Home Ad
Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಲಕ್ಕಿ ಸ್ಕೀಮ್ ವಿವಾದ – ವಂಚನೆ ಆರೋಪ : ಹಣ ಮರುಪಾವತಿಗೆ ಗ್ರಾಹಕರ ಒತ್ತಾಯ

ಲಕ್ಕಿ ಸ್ಕೀಮ್ ವಿವಾದ – ವಂಚನೆ ಆರೋಪ : ಹಣ ಮರುಪಾವತಿಗೆ ಗ್ರಾಹಕರ ಒತ್ತಾಯ

0
10

ಮಂಗಳೂರು: ಆಕರ್ಷಕ ಬಹುಮಾನಗಳ ಆಮಿಷವೊಡ್ಡಿ ಜನರಿಂದ ಹಣ ಸಂಗ್ರಹಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳೂರಿನ ‘ಅಸ್ತ್ರ’ ಗ್ರೂಪ್‌ನ ಲಕ್ಕಿ ಸ್ಕೀಮ್‌ಗಳು ವಿವಾದಕ್ಕೆ ಕಾರಣವಾಗಿವೆ. ಸ್ಕೀಮ್‌ನಲ್ಲಿ ಹಣ ಹೂಡಿಕೆ ಮಾಡಿದ ಹಲವರಿಗೆ ಹಣ ಮರಳಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಸಂಸ್ಥೆಯ ಪ್ರವರ್ತಕ ಲಂಚುಲಾಲ್ ದುಬೈಗೆ ತೆರಳಿದ್ದಾನೆ ಎಂದು ತಿಳಿದು ಬಂದಿದೆ.

ಸ್ಥಳೀಯರ ಮಾಹಿತಿಯ ಪ್ರಕಾರ, ‘ಅಸ್ತ್ರ ಅಕ್ಷಯ ಪಾತ್ರೆ’ ಸೇರಿದಂತೆ ವಿವಿಧ ಸ್ಕೀಮ್‌ಗಳ ಹೆಸರಿನಲ್ಲಿ ಗ್ರಾಹಕರಿಂದ ಮಾಸಿಕ ಕಂತುಗಳ ಮೂಲಕ ಹಣ ಸಂಗ್ರಹಿಸಲಾಗುತ್ತಿತ್ತು. ಪ್ರತಿ ತಿಂಗಳು ಡ್ರಾ ನಡೆಸಿ ಕಾರು, ಫ್ಲ್ಯಾಟ್‌ಗಳು ಮತ್ತು ಚಿನ್ನಾಭರಣಗಳಂತಹ ದುಬಾರಿ ಬಹುಮಾನಗಳನ್ನು ನೀಡುವುದಾಗಿ ಭರವಸೆ ನೀಡಲಾಗಿತ್ತು ಎನ್ನಲಾಗಿದೆ. ಈ ಆಮಿಷಕ್ಕೆ ಒಳಗಾಗಿ ದಿನಗೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಹೋಟೆಲ್‌ ಉದ್ಯೋಗಿಗಳು ಸೇರಿದಂತೆ ಅನೇಕರು ಹಣ ಹೂಡಿಕೆ ಮಾಡಿದ್ದರು ಎಂಬ ಆರೋಪಗಳಿವೆ.

ಸ್ಕೀಮ್‌ಗಳಲ್ಲಿ ಹಣ ಪಾವತಿಸಿದ್ದರೂ ಭರವಸೆ ನೀಡಿದಂತೆ ಹಣ ಅಥವಾ ಬಹುಮಾನ ಸಿಗಲಿಲ್ಲ ಎಂದು ಕೆಲವು ಗ್ರಾಹಕರು ದೂರಿದ್ದಾರೆ. ಹಣ ಮರುಪಾವತಿಗೆ ಒತ್ತಾಯಿಸಿ ಗ್ರಾಹಕರು ಸಂಸ್ಥೆಯ ಕಚೇರಿಗೆ ತೆರಳಿದ್ದರೂ ಪರಿಹಾರ ಸಿಗಲಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಈ ನಡುವೆ ಮಂಗಳೂರಿನಲ್ಲಿದ್ದ ಸಂಸ್ಥೆಯ ಪ್ರಧಾನ ಕಚೇರಿ, ಎಂಪೈರ್ ಮಾಲ್‌ನಲ್ಲಿದ್ದ ಕಚೇರಿ, ಫಳ್ನೀರ್‌ನ ಚಿನ್ನದ ಅಂಗಡಿ ಮತ್ತು ಬಂಟ್ಸ್ ಹಾಸ್ಟೆಲ್ ಬಳಿಯ ಐಸ್ ಕ್ರೀಮ್ ಪಾರ್ಲರ್‌ ವಾಣಿಜ್ಯ ಮಳಿಗೆಗಳು ಮುಚ್ಚಲ್ಪಟ್ಟಿವೆ.

ಲಂಚುಲಾಲ್ ದುಬೈಗೆ ತೆರಳಿದ್ದು, ಅಲ್ಲಿಂದ ಸಾಮಾಜಿಕ ಜಾಲತಾಣದ ಮೂಲಕ ಹಣ ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದಾನೆ ನಾನು ಯಾರ ಹಣವನ್ನೂ ವಂಚಿಸುವುದಿಲ್ಲ, ದುಬೈಗೆ ಬಿಸಿನೆಸ್ ಕೆಲಸಕ್ಕೆ ಬಂದಿದ್ದೇನೆ, ಆಗಸ್ಟ್-ಸೆಪ್ಟೆಂಬರ್ ಒಳಗೆ ಹಣ ನೀಡುತ್ತೇನೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಪೋಸ್ಟ್‌ ಮಾಡಿದ್ದ. ಆದರೆ ಆತ ಪ್ರಸ್ತುತ ಎಲ್ಲಿದ್ದಾನೆ, ಹಣ ಮರುಪಾವತಿಗೆ ಯಾವ ಕ್ರಮ ಕೈಗೊಂಡಿದ್ದಾನೆ ಮತ್ತು ಪ್ರಕರಣದ ತನಿಖೆ ಯಾವ ಹಂತದಲ್ಲಿದೆ ಎಂಬ ಬಗ್ಗೆ ಅಧಿಕೃತವಾಗಿ ದೃಢೀಕರಿಸಿದ ಸಂಪೂರ್ಣ ಮಾಹಿತಿ ಲಭ್ಯವಿಲ್ಲ.

ಪೊಲೀಸ್ ಕಚೇರಿಯಲ್ಲಿ ₹5 ಕೋಟಿ ಮೊತ್ತದ ಬಾಂಡ್ ಇಟ್ಟಿರುವುದಾಗಿ ಸುಳ್ಳು ಹೇಳಿ ಲಂಚುಲಾಲ್ ದಂಧೆಯನ್ನು ಮಾಡಿದ್ದ ಎನ್ನಲಾಗಿದ್ದು ಜನರು ಈ ಬಾಂಡ್‌ನ ಸ್ವರೂಪ, ಕಾನೂನುಬದ್ಧತೆ ಮತ್ತು ಸಂತ್ರಸ್ತರಿಗೆ ಹಣ ಮರಳಿಸಲು ಅದನ್ನು ಬಳಸಬಹುದೇ ಎಂದು ಕಾಯುತ್ತಿದ್ದಾರೆ.

ಹಣ ಹೂಡಿಕೆ ಮಾಡಿ ನಷ್ಟ ಅನುಭವಿಸಿರುವವರು ಪಾವತಿ ರಸೀದಿಗಳು, ಬ್ಯಾಂಕ್ ವಹಿವಾಟಿನ ದಾಖಲೆಗಳು, ಸ್ಕೀಮ್‌ನ ನಿಯಮಗಳು ಹಾಗೂ ಸಂದೇಶಗಳನ್ನು ಸಂಗ್ರಹಿಸಿಟ್ಟುಕೊಂಡು ಪೊಲೀಸರಿಗೆ ದೂರು ನೀಡುವುದು ಸೂಕ್ತ. ಹಣಕಾಸಿನ ವಂಚನೆ ನಡೆದಿರುವ ಅನುಮಾನವಿದ್ದರೆ ಬ್ಯಾಂಕ್‌ಗೂ ತಕ್ಷಣ ಮಾಹಿತಿ ನೀಡಬೇಕು.