SK Home Ad
Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ‘ದರಿದ್ರ ಪಕ್ಷ ಕಾಂಗ್ರೆಸ್ ಹಿಂದೆ ಹೋಗಬೇಡಿ’ ಎಂದು ಮಕ್ಕಳಿಗೆ ಬುದ್ಧಿ ಹೇಳಿದ ಬಿಜೆಪಿ ಶಾಸಕ

‘ದರಿದ್ರ ಪಕ್ಷ ಕಾಂಗ್ರೆಸ್ ಹಿಂದೆ ಹೋಗಬೇಡಿ’ ಎಂದು ಮಕ್ಕಳಿಗೆ ಬುದ್ಧಿ ಹೇಳಿದ ಬಿಜೆಪಿ ಶಾಸಕ

0
46

ಮಂಗಳೂರು: ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಶಾಲಾ ಮಕ್ಕಳ ಎದುರೇ ರಾಜಕೀಯ ಭಾಷಣ ಮಾಡಿದ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ಅವರ ಹೇಳಿಕೆ ಚರ್ಚೆಗೆ ಕಾರಣವಾಗಿದೆ.

ಶಾಲೆಯ ನೂತನ ಸಭಾಭವನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಡುವ ವಿಚಾರ ವಿವಾದಕ್ಕೆ ಕಾರಣವಾಗಿತ್ತು. ಸರಕಾರದ ಅನುಮತಿ ಪಡೆಯದೆ ಹೆಸರು ನಾಮಕರಣ ಮಾಡಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಆಕ್ಷೇಪ ವ್ಯಕ್ತಪಡಿಸಿ, ಕಾರ್ಯಕ್ರಮ ರದ್ದುಗೊಳಿಸುವಂತೆ ಸೂಚಿಸಿತ್ತು ಎನ್ನಲಾಗಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಶಾಸಕ ಹರೀಶ್ ಪೂಂಜ ಅಸಮಾಧಾನ ವ್ಯಕ್ತಪಡಿಸಿದರು.

ಭಾಷಣದ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಕಾಂಗ್ರೆಸ್‌ನಂತಹ ದರಿದ್ರ ಪಕ್ಷದ ಹಿಂದೆ ನೀವು ಯಾವತ್ತೂ ಹೋಗಬೇಡಿ. ಇಂತಹ ಕೆಟ್ಟ ಪಕ್ಷವನ್ನು ನಂಬಿಕೊಂಡು ಹೋಗಬೇಡಿ. ಈ ದೇಶ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿದೆ. ನಿಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ತೊಂದರೆ ನೀಡುವವರ ಹಿಂದೆ ಹೋಗಬೇಡಿ’ ಎಂದು ಮಕ್ಕಳಿಗೆ ಹೇಳಿದರು.

ಶಾಲೆಯ ಅಭಿವೃದ್ಧಿಗಾಗಿ ಎಲ್ಲಿಂದಾದರೂ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ತಿಳಿಸಿದ ಅವರು, ಮುಂದೊಂದು ದಿನ ಉತ್ತಮ ಕಾರ್ಯಕ್ರಮ ಆಯೋಜಿಸಿ ಎಲ್ಲರಿಗೂ ಉತ್ತರ ನೀಡುವುದಾಗಿ ಹೇಳಿದರು.

ಅಲ್ಲದೆ, ಶಾಲೆಯಲ್ಲಿ ರಾಜಕೀಯ ಮಾಡಬಾರದು. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಲು ಬಂದರೆ ಬಸವೇಶ್ವರರು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ ಅವರು, ಭಾಷಣದ ಕೊನೆಯಲ್ಲಿ ಮಕ್ಕಳಿಂದ ಪ್ರಧಾನಿ ನರೇಂದ್ರ ಮೋದಿ ಪರ ಜೈಕಾರ ಹಾಕಿಸಿದರು.

ಶೈಕ್ಷಣಿಕ ಸಂಸ್ಥೆಯ ಕಾರ್ಯಕ್ರಮದಲ್ಲಿ ಮಕ್ಕಳ ಎದುರು ರಾಜಕೀಯ ಪಕ್ಷದ ಪರವಾಗಿ ಹಾಗೂ ವಿರುದ್ಧವಾಗಿ ಶಾಸಕ ಮಾತನಾಡಿರುವುದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.