ನವದೆಹಲಿ: “ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯನ್ನು ಅವಮಾನಿಸುವ ರಾಹುಲ್ ಗಾಂಧಿ ನೈತಿಕ ದಿವಾಳಿತನಕ್ಕೆ ಇಳಿದಿದ್ದಾರೆ” ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಕಿಡಿಕಾರಿದ್ದಾರೆ.
ಪ್ರಧಾನಿ ಮೋದಿ ಅವರ ತಾಯಿಯವರನ್ನು ಅಪಹಾಸ್ಯ ಮಾಡಲು, ಅವಮಾನಿಸಲು ವಿದ್ಯಾರ್ಥಿಗಳೊಂದಿಗಿನ ಸಂವಾದವನ್ನು ಬಳಸಿಕೊಂಡಿರುವುದು ನಿಜಕ್ಕೂ ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ ವಿಪಕ್ಷ ನಾಯಕ ಮತ್ತು ಕಾಂಗ್ರೆಸ್ ಪಕ್ಷ ನೈತಿಕವಾಗಿ ದಿವಾಳಿತನ ಪ್ರದರ್ಶಿಸುತ್ತ ಅದೆಷ್ಟು ಕೆಳಮಟ್ಟಕ್ಕೆ ಇಳಿದಿದೆ ಎಂಬುದನ್ನು ಹೀಗೆ ಪದೇ ಪದೇ ಸಾಬೀತುಪಡಿಸಿಕೊಳ್ಳುತ್ತಲೇ ಇದ್ದಾರೆ ಇವರು ಎಂದು ಜೋಶಿ ಚಾಟಿ ಬೀಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ದಿವಂಗತ ತಾಯಿಯನ್ನು ಹೀಗೆ ಅಪಮಾನಿಸುವ ರಾಹುಲ್ ಗಾಂಧಿ ಸದಾ ತಾವೊಬ್ಬ ʻಜವಾಬ್ದಾರಿಯುತ ವಿಪಕ್ಷ ನಾಯಕʼ ಎಂಬುದನ್ನೇ ಮರೆತು ವರ್ತಿಸುತ್ತಿರುತ್ತಾರೆ ಎಂದು ಟೀಕಿಸಿದ್ದಾರೆ.
ರಾಹುಲ್ ಗಾಂಧಿ ಅವರಂಥ ವಿಪಕ್ಷ ನಾಯಕರಲ್ಲಿ ಮಾನವೀಯ ಸಂವೇದನೆ ಮತ್ತು ರಾಜಕೀಯ ಸಂಸ್ಕೃತಿಯ ಕೊರತೆಯಿದೆ. ಹೀಗಾಗಿ ವಿಪಕ್ಷ ನಾಯಕನ ಘನತೆ-ಗೌರವವನ್ನು ಎತ್ತಿ ಹಿಡಿಯುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಪ್ರಲ್ಹಾದ ಜೋಶಿ ಕುಟುಕಿದ್ದಾರೆ.
ಪೋಷಕರ ಅವಮಾನ ಸಲ್ಲದು: ಸೈದ್ಧಾಂತಿಕವಾಗಿ ರಾಜಕೀಯ ವಿರೋಧ ಸಹಜ. ಆದರೆ ಹೀಗೆ ಪೋಷಕರನ್ನು ಅಪಮಾನಿಸಲು ಸೀಮಿತ ಆಗಬಾರದು. ವಿದ್ಯಾರ್ಥಿ ಸಂವಾದದ ನೆಪದಲ್ಲಿ ಇಂತಹ ಅಗ್ಗದ ಪ್ರದರ್ಶನಗಳಿಗೆ ಅವಕಾಶ ಆಗಬಾರದು, ಹಿರಿಯರ ವಿರುದ್ಧ ಅವಮಾನಕರ ಮಾತುಗಳನ್ನಾಡಲು ವೇದಿಕೆ ಆಗಬಾರದು. ಇದು ನಮ್ಮ ಭಾರತೀಯ ಸಂಸ್ಕೃತಿಯಲ್ಲ ಎಂದು ಜೋಶಿ ಖಂಡಿಸಿದ್ದಾರೆ.
ರಾಹುಲ್ ಗಾಂಧಿ ಪದೇ ಪದೇ ಇಂಥದ್ದರಲ್ಲಿ ಭಾಗಿಯಾಗಿ ಆ ಮೂಲಕ ಸನಾತನ ಸಂಸ್ಕೃತಿಯ ನಮ್ಮ ದೇಶಕ್ಕೇ ಅಪಖ್ಯಾತಿ ತರುತ್ತಿದ್ದಾರೆ ಸಚಿವರು ವಾಗ್ದಾಳಿ ನಡೆಸಿದ್ದಾರೆ.
ಯಾವುದೇ ರಾಜಕೀಯ ಹೋರಾಟಗಳು ನೀತಿ ಮತ್ತು ದೂರದೃಷ್ಟಿಯ ಆಧಾರದ ಮೇಲೆ ನಡೆಯಬೇಕು; ಆದರೆ ಯಾರ ಮೇಲೂ ವೈಯಕ್ತಿಕ ದಾಳಿ ನಡೆಸುವುದು ತರವಲ್ಲ. ಇದು ನಮ್ಮ ನೆಲದ ರಾಜಕೀಯ ಸಂಸ್ಕೃತಿಯಲ್ಲ ಎಂದು ವಿಪಕ್ಷ ನಾಯಕರಿಗೆ ಕಿವಿಮಾತು ಹೇಳಿದ್ದಾರೆ ಜೋಶಿ.
ಇಂಥ ವಿಷಪೂರಿತ ಮತ್ತು ನಿಂದನಾತ್ಮಕ ಮನಸ್ಥಿತಿಯ ಕಾರಣದಿಂದಲೇ ದೇಶದಲ್ಲಿ ಜನತೆ ಕಾಂಗ್ರೆಸ್ ಅನ್ನು ತಿರಸ್ಕರಿಸುತ್ತ ಬಂದಿದ್ದಾರೆ. ಇವರ ಈ ಹೀನಾಯ ವರ್ತನೆ ಹೀಗೇ ಮುಂದುವರಿದರೆ ಕಾಂಗ್ರೆಸ್ ಹೇಳ ಹೆಸರಿಲ್ಲದಂತೆ ಆಗುತ್ತದೆ ಎಂದು ಸಚಿವ ಪ್ರಲ್ಹಾದ ಜೋಶಿ ಎಚ್ಚರಿಸಿದ್ದಾರೆ.





















