SK Home Ad
Home ನಮ್ಮ ಜಿಲ್ಲೆ ಚಿತ್ರದುರ್ಗ ದಿವಂಗತ ಡಿ. ಸುಧಾಕರ್‌ರನ್ನು ಸ್ಮರಿಸಿ ಭಾವುಕರಾದ ಸಿಎಂ ಡಿ.ಕೆ. ಶಿವಕುಮಾರ್

ದಿವಂಗತ ಡಿ. ಸುಧಾಕರ್‌ರನ್ನು ಸ್ಮರಿಸಿ ಭಾವುಕರಾದ ಸಿಎಂ ಡಿ.ಕೆ. ಶಿವಕುಮಾರ್

0
62

ಚಿತ್ರದುರ್ಗ: ಹಿರಿಯೂರು ತಾಲೂಕಿನ ಧರ್ಮಪುರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾವುಕವಾಗಿ ಮಾತನಾಡಿದರು. ಬಹಳ ದುಃಖದಿಂದ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಡಿ.ಸುಧಾಕರ್ ಇದ್ದಿದ್ದರೆ ನಾನು ಸಿಎಂ ಆಗಿದ್ದಾಗ ತುಂಬಾ ಸಂತೋಷ ಪಡುತ್ತಿದ್ದರು. ನಾನು ಮಂತ್ರಿ ಆಗದಿದ್ದರೂ ಪರವಾಗಿಲ್ಲ, ನನ್ನ ಮಿತ್ರ ಡಿಕೆಶಿ ಸಿಎಂ ಆಗಬೇಕು ಎಂದು ಸುಧಾಕರ್ ಹೇಳಿದ್ದರು. ಸುಧಾಕರ್‌ಗೆ ಜಾತಿ, ಧರ್ಮ ಇರಲಿಲ್ಲ, ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಪ್ರವೃತ್ತಿ ಅವರದ್ದಾಗಿತ್ತು ಎಂದು ಸ್ಮರಿಸಿದರು.

ಸಚಿವರು ಯಾರೂ ಬರಿಗೈಯಲ್ಲಿ ಬಂದಿಲ್ಲ, ಅಭಿವೃದ್ಧಿಯ ಲಕ್ಷ್ಮಿಯನ್ನು ಕರೆದುಕೊಂಡು ಬಂದಿದ್ದಾರೆ. ಹಿರಿಯೂರು ಕ್ಷೇತ್ರದ ಅಭಿವೃದ್ಧಿಗೆ 2,200 ಕೋಟಿ ರೂ. ಹಣ ಬಿಡುಗಡೆಗೆ ಆದೇಶ ಹೊರಡಿಸಿದ್ದೇವೆ. ಎಂಎಲ್‌ಸಿ ಚುನಾವಣೆ ಕಾರಣ ವಿಳಂಬವಾಯಿತು ಎಂದರು.

ವೇದಿಕೆಯಲ್ಲಿ ಹಿರಿಯೂರು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮತ್ತು ಅವರ ಪತಿ ಎಂಎಲ್‌ಸಿ ಡಿ.ಟಿ. ಶ್ರೀನಿವಾಸ್ ಇದ್ದುದನ್ನು ಪ್ರಸ್ತಾಪಿಸಿದ ಸಿಎಂ, ಈ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿದೆ. ಪೂರ್ಣಿಮಾ ಶ್ರೀನಿವಾಸ್ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಆದ್ಯತೆ ನೀಡಿ ಯೋಜನೆಗೆ ಚಾಲನೆ ನೀಡಿದ್ದೇವೆ” ಎಂದರು.

ರಾಜ್ಯದಲ್ಲಿ ಬಡವರಿಗೆ 5 ಲಕ್ಷ ನಿವೇಶನ ಹಂಚಿಕೆ ಯೋಜನೆ, ಪ್ರಜಾಸೇವೆ ಇಲಾಖೆ ಮೂಲಕ ಮನೆಮನೆಗೆ ಸೇವೆ, 6ನೇ ಗ್ಯಾರಂಟಿಯಾಗಿ ಭೂಮಿ ಗ್ಯಾರಂಟಿ ಯೋಜನೆ ಜಾರಿ ಬಗ್ಗೆ ಪ್ರಸ್ತಾಪಿಸಿದರು.

ನಾನು ಬರಿ ಖಾಲಿ ಮಾತಾಡುವವನು ಅಲ್ಲ. ಹಿರಿಯೂರಲ್ಲಿ 2,200 ಕೋಟಿ ಕಾಮಗಾರಿಗೆ ಮಂಜೂರಾತಿ ನೀಡಿದ್ದೇವೆ. ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಪ್ರಾಯೋಗಿಕವಾಗಿ ನೀರು ಹರಿಸಿದ್ದೇವೆ. ಧರ್ಮಪುರ ಕೆರೆಗೆ ನೀರು ತುಂಬಿಸುವ ಕೆಲಸ ಮಾಡಿದ್ದು ನಮ್ಮ ಸರ್ಕಾರ. ನಮ್ಮ ಸರ್ಕಾರಕ್ಕೆ ಹಣದ ಕೊರತೆ ಏನೂ ಇಲ್ಲ. ಕನಕಪುರದಷ್ಟೇ ಹಿರಿಯೂರು ಕ್ಷೇತ್ರ ನನಗೆ ಮುಖ್ಯ. 2,500 ಕೋಟಿ ಅಲ್ಲ, ಇನ್ನೂ 500 ಕೋಟಿ ಆದರೂ ಅಭಿವೃದ್ಧಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಬಿಜೆಪಿ-ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, ಬಿಜೆಪಿ, ಜೆಡಿಎಸ್‌ನವರು ಯಾಕೆ ಕೆಲಸ ಮಾಡಲಿಲ್ಲ? ಕೇಂದ್ರ ಸರ್ಕಾರ ಭದ್ರಾ ಯೋಜನೆಗೆ 5,300 ಕೋಟಿ ಘೋಷಿಸಿ ಈವರೆಗೆ ಅನುದಾನ ಬಿಡುಗಡೆ ಮಾಡಿಲ್ಲ. ಇದು ಖಾಲಿ ಡಬ್ಬಾ. ಬಿಜೆಪಿಯ ವಿಜಯೇಂದ್ರ, ಅಶೋಕ್
ಬಂದಾಗ ಕೇಳಿ. ಬಿಎಸ್‌ವೈ, ಎಚ್‌ಡಿಕೆ ಕಾಲದಲ್ಲಿ ಅಭಿವೃದ್ಧಿ ಆಗಿದೆಯಾ? ಎಂದು ಪ್ರಶ್ನಿಸಿದರು.

ಬೆಲೆ ಏರಿಕೆ ಗಗನಕ್ಕೆ, ಆದಾಯ ಪತನಕ್ಕೆ ಹೋಗುತ್ತಿದೆ ಎಂದು ಕಳೆದ ಚುನಾವಣೆಯಲ್ಲಿ ಹೇಳಿದ್ದೆವು. ಪಂಚ ಗ್ಯಾರಂಟಿ ಕೊಟ್ಟಾಗ ಪ್ರಧಾನಿ ಮೋದಿ ಟೀಕೆ ಮಾಡಿದರು, ಆದರೆ ನಾವು ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ಇಂತಹ ಕೆಲಸ ಬಿಜೆಪಿಯವರು ಮಾಡಿದ್ದಾರೆಯೇ? ಎಂದು ಪ್ರಶ್ನಿಸಿದರು.

ಬಾಯ್ತಪ್ಪಿ ಈ ಚುನಾವಣೆಗೆ 10 ಸಚಿವರು ಬಂದು ಅಭಿವೃದ್ಧಿ ಕೆಲಸ ಮಾಡಿದ್ದಾರೆ” ಎಂದು ಹೇಳಿದ ಸಿಎಂ, ಅಕ್ಬರ್-ಬೀರಬಲ್ ಕಥೆ ಹೇಳಿ ನಗೆಗಡಲಲ್ಲಿ ತೇಲಿಸಿದರು. ಕಾರ್ಯಕರ್ತರು ಸುಹಾಸ್ ಅಭ್ಯರ್ಥಿ ಘೋಷಿಸಿ ಎಂದು ಕೂಗಿದಾಗ, ನಾನು ಕಾಂಗ್ರೆಸ್ ಅಧ್ಯಕ್ಷನಲ್ಲ, ಇಲ್ಲಿ ನಾನೇ ಅಭ್ಯರ್ಥಿ ಇದ್ದೇನೆ. ನಾಲ್ಕು ಸಲ ಸರ್ವೇ ಮಾಡಿಸಿದ್ದೇನೆ, ಪಕ್ಷ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಚನ್ನಪಟ್ಟಣದಲ್ಲಿ ಏನಾಯ್ತು? ಯೋಗೇಶ್ ಗೆದ್ದರು ತಾನೇ? ಪಾಪ ಕುಮಾರಸ್ವಾಮಿ ಮಗ ಸೋತರು.

ಇಬ್ಬರು ಮುಖ್ಯಮಂತ್ರಿಗಳ ಮಕ್ಕಳು ಸೋತರು. ಯಾರೇ ಬರಲಿ, ನಾನು ನಿಮ್ಮ ಸೇವೆಗೆ ಇದ್ದೇನೆ. ಅಧಿಕಾರ ಇದ್ದಾಗ ಏನೂ ಮಾಡಲು ಆಗಲಿಲ್ಲ, ಈಗ ಅಧಿಕಾರ ಇಲ್ಲದಾಗ ಏನೂ ಮಾಡಲು ಆಗಲ್ಲ” ಎಂದು ಜೆಡಿಎಸ್ ವಿರುದ್ಧ ಹೆಸರು ಹೇಳದೆ ಟೀಕಿಸಿದರು.

ನೀವು ನನ್ನ ಕೈ ಬಿಡುತ್ತೀರಾ? ಎಂದು ಜನರನ್ನು ಪ್ರಶ್ನಿಸಿದರು.