ಚಿತ್ರದುರ್ಗ: ಮೀಸಲಾತಿ ಹೆಚ್ಚಳಕ್ಕೆ ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನಗರದಲ್ಲಿ ನಡೆದ ಮಾದಿಗ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಮಾದಿಗ ಸಮಾಜದ ಜೊತೆ 101 ಸಮುದಾಯಗಳ ಪರವಾಗಿ ಮೀಸಲಾತಿ ಹೆಚ್ಚಿಸಿ ಅಲೆಮಾರಿ ಸೇರಿದಂತೆ ಎಲ್ಲರಿಗೂ ನ್ಯಾಯ ಒದಗಿಸುವ ಗಟ್ಟಿ ನಿರ್ಧಾರವನ್ನು ಬಿಜೆಪಿ ಸರ್ಕಾರ ಮಾಡಿತ್ತು ಎಂದು ಹೇಳಿದರು.
ಕಾಂಗ್ರೆಸ್ ವಿರುದ್ಧ ಕಿಡಿ: “ಕಾಂಗ್ರೆಸ್ ಪಕ್ಷಕ್ಕೆ ಯಾಕೆ ಈ ಸಮುದಾಯಗಳ ಮೇಲೆ ಕೋಪವೋ ಗೊತ್ತಿಲ್ಲ. ಮಾದಿಗ ಸಮಾಜಕ್ಕೆ ಮೀಸಲಾತಿ ಹೆಚ್ಚಿಸಬೇಕೆಂದು ಕಾಂಗ್ರೆಸ್‌ಗೆ ಎಂದೂ ಅನ್ನಿಸಿಲ್ಲ. ಕಾಂಗ್ರೆಸ್ಸಿಗರು ಸದಾ ಅಂಬೇಡ್ಕರ್ ಜಪ ಮಾಡುತ್ತಾರೆ, ಆದರೆ ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಯಾರು ಎಂಬುದನ್ನು ಯಾರೂ ಮರೆತಿಲ್ಲ. ಶೋಷಿತ ಸಮುದಾಯಗಳನ್ನು ಕೇವಲ ಮತಬ್ಯಾಂಕ್ ಮಾಡಿಕೊಂಡಿದ್ದಾರೆ, ಸಮಾಜದ ಕಣ್ಣೀರು ಒರೆಸುವ ಕೆಲಸ ಮಾಡಿಲ್ಲ” ಎಂದು ವಿಜಯೇಂದ್ರ ಟೀಕಿಸಿದರು.
“ಸಿದ್ದರಾಮಯ್ಯ 8 ವರ್ಷ ಸಿಎಂ ಆಗಿದ್ದರು. ಬಿಜೆಪಿ ಸರ್ಕಾರ ಕೊಟ್ಟ ಮೀಸಲಾತಿಗೆ ಕಲ್ಲು ಹಾಕಿದರು. ಕೋರ್ಟ್‌ನಲ್ಲಿ ಸರಿಯಾಗಿ ವಾದ ಮಾಡದೆ ಅನ್ಯಾಯ ಮಾಡಿದ್ದಾರೆ. ಈಗ ನ್ಯಾಯ ಕೊಡದಿದ್ದರೆ ಬೀದಿಗಿಳಿದು ಹೋರಾಟ ಎನ್ನುತ್ತಾರೆ. ಯಾವ ಪುರುಷಾರ್ಥಕ್ಕೆ ಮುಖ್ಯಮಂತ್ರಿಗಳಾಗಿದ್ದೀರಿ? ಇದು ಕಾಂಗ್ರೆಸ್ ನಾಯಕರ ಕಪಟ ನಾಟಕ” ಎಂದು ಕಿಡಿಕಾರಿದರು.
ಬೀದಿಗಿಳಿದು ಹೋರಾಟದ ಎಚ್ಚರಿಕೆ: “ಮೌನವಾಗಿರುವುದು ಸಮಾಜದ ದೌರ್ಬಲ್ಯ. ಬೊಮ್ಮಾಯಿ ಕಾಲದ ಒಳಮೀಸಲಾತಿ ಜಾರಿ ಮಾಡಬೇಕು. ಹಕ್ಕನ್ನು ಉಳಿಸಿಕೊಳ್ಳಲು ಬೀದಿಗಿಳಿದು ಹೋರಾಡುವ ಅನಿವಾರ್ಯತೆ ಇದೆ. ರಾಜ್ಯದೆಲ್ಲೆಡೆ ಸಮಾವೇಶ, ಜಾಗೃತಿ ಕೈಗೊಳ್ಳುತ್ತೇವೆ. ಬಿ.ಎಸ್.ವೈ ಅವರಂತೆ ನಿಮ್ಮ ಸಮಾಜದ ಧ್ವನಿಯಾಗಿ ಇರುತ್ತೇನೆ” ಎಂದು ಭರವಸೆ ನೀಡಿದರು.
ಗ್ಯಾರಂಟಿ ವಿರುದ್ಧ ವಾಗ್ದಾಳಿ: “ಗ್ಯಾರಂಟಿ ಹೆಸರಲ್ಲಿ ಶಾಲಾ ಮಕ್ಕಳಿಗೆ ಬಸ್ ವ್ಯವಸ್ಥೆ ಇಲ್ಲವಾಗಿದೆ. ವಿಕಲಚೇತನರಿಗೆ ಪಿಂಚಣಿ ಇಲ್ಲ, ಬಡವರಿಗೆ ಮನೆ, ಗಂಗಾ ಕಲ್ಯಾಣ, ವೃದ್ಧಾಪ್ಯ ವೇತನ ಕೊಡಲಾಗುತ್ತಿಲ್ಲ. ರೈತ ವಿದ್ಯಾನಿಧಿ, ರೈತರಿಗೆ ವರ್ಷಕ್ಕೆ 4 ಸಾವಿರ ಯೋಜನೆಗೂ ಕಲ್ಲು ಹಾಕಿದ್ದಾರೆ. ಎಸ್ಸಿಪಿ/ಟಿಎಸ್ಪಿಗೆ ಬೊಮ್ಮಾಯಿ ಕಾಲದಲ್ಲಿ 30 ಸಾವಿರ ಕೋಟಿ ನೀಡಲಾಗಿತ್ತು, ಕಳೆದ 3 ವರ್ಷದಲ್ಲಿ 55 ಸಾವಿರ ಕೋಟಿ ಎಸ್ಸಿಪಿ/ಟಿಎಸ್ಪಿ ಹಣ ದುರುಪಯೋಗವಾಗಿದೆ. ಕಾಂಗ್ರೆಸ್‌ಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ” ಎಂದು ವಿಜಯೇಂದ್ರ ಹೇಳಿದರು.
ಮಾದಾರ ಚನ್ನಯ್ಯ ಶ್ರೀಗಳು ಸಮಾಜ ಜಾಗೃತಿ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅವರು ಶ್ಲಾಘಿಸಿದರು.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.





















