ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಈ ನಡುವೆ ಸಿದ್ದರಾಮಯ್ಯ ಅವರ ಆಪ್ತ ವಲಯದವರೇ ಆದ ಮಾಜಿ ಸಚಿವ ಕೆ.ಎನ್ ರಾಜಣ್ಣ ನೀಡಿರುವ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕೆ.ಎನ್ ರಾಜಣ್ಣ, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಮುಂದುವರಿಯಲು ಹೇಗೆ ಸಿದ್ಧರಿದ್ದಾರೋ, ಹಾಗೆಯೇ ಹೈಕಮಾಂಡ್ ಸೂಚಿಸಿದರೆ ಕುರ್ಚಿ ಬಿಟ್ಟುಕೊಡಲು ಕೂಡ ಸಿದ್ಧರಾಗಿದ್ದಾರೆ,” ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಇದು ಕೇವಲ ಸಿದ್ದರಾಮಯ್ಯ ಅವರ ವೈಯಕ್ತಿಕ ನಿರ್ಧಾರ ಮಾತ್ರವಲ್ಲ, ಪಕ್ಷದ ಹೈಕಮಾಂಡ್ ನೀಡುವ ಆದೇಶಕ್ಕೆ ಅವರು ಬದ್ಧರಾಗಿದ್ದಾರೆ ಎಂಬ ಸಂದೇಶವನ್ನು ರಾಜಣ್ಣ ರವಾನಿಸಿದ್ದಾರೆ.
ಹೈಕಮಾಂಡ್ ನಿರ್ಧಾರಕ್ಕೆ ಸಿದ್ದು ಬದ್ಧ: “ಪಕ್ಷದಲ್ಲಿ ಉಂಟಾಗಿರುವ ಗೊಂದಲ ಬಗೆಹರಿಸುವುದು ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದು. ಹೈಕಮಾಂಡ್ ಏನು ಹೇಳುತ್ತದೆಯೋ ಅದಕ್ಕೆ ಸಿದ್ದರಾಮಯ್ಯ ಬದ್ಧರಾಗಿದ್ದಾರೆ. ರಾಹುಲ್ ಗಾಂಧಿ ಅವರ ಸೂಚನೆಯನ್ನು ಪಾಲಿಸುವುದು ಸಿಎಂ ಅವರ ಮನಸ್ಥಿತಿಯಾಗಿದೆ. ಅಧಿಕಾರ ಎಂಬುದು ಶಾಶ್ವತವಲ್ಲ ಎಂಬುದು ಅವರಿಗೆ ತಿಳಿದಿದೆ,” ಎಂದು ರಾಜಣ್ಣ ವಿವರಿಸಿದ್ದಾರೆ.
ದಲಿತ ಸಿಎಂ ವಿಚಾರ ಮತ್ತು ಬದಲಾದ ಸಿದ್ದರಾಮಯ್ಯ: ಇದೇ ವೇಳೆ ಹಳೆಯ ನೆನಪುಗಳನ್ನು ಕೆದಕಿದ ರಾಜಣ್ಣ, “ದಲಿತ ಸಿಎಂ ಆಗಬೇಕು ಎಂಬ ವಿಚಾರಕ್ಕೆ ನಾನು ಈಗಲೂ ಬದ್ಧ. ಆದರೆ 2013-18ರ ಅವಧಿಯ ಸಿದ್ದರಾಮಯ್ಯ ಅವರಿಗೂ ಮತ್ತು ಈಗಿನ ಸಿದ್ದರಾಮಯ್ಯ ಅವರಿಗೂ ಅಜಗಜಾಂತರ ವ್ಯತ್ಯಾಸವಿದೆ,” ಎನ್ನುವ ಮೂಲಕ ನಾಯಕತ್ವದ ಬದಲಾದ ಶೈಲಿಯ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ್ದಾರೆ. ರಾಜಕೀಯ ದಿಕ್ಸೂಚಿ ಈಗಲೇ ಹೇಳಲು ಸಾಧ್ಯವಿಲ್ಲದಿದ್ದರೂ, ಮುಂದಿನ ಎರಡು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗುವ ಮುನ್ಸೂಚನೆಯನ್ನು ಅವರು ನೀಡಿದ್ದಾರೆ.




















