Home Advertisement
Home ನಮ್ಮ ಜಿಲ್ಲೆ ಬೆಂಗಳೂರು ಮೇ 4 ಫಲಿತಾಂಶ: ಸಿದ್ದು ಕುರ್ಚಿ ಭದ್ರವೋ? ಡಿಕೆಶಿ ಕನಸು ನನಸೋ? – ರಾಜ್ಯ ರಾಜಕೀಯದಲ್ಲಿ...

ಮೇ 4 ಫಲಿತಾಂಶ: ಸಿದ್ದು ಕುರ್ಚಿ ಭದ್ರವೋ? ಡಿಕೆಶಿ ಕನಸು ನನಸೋ? – ರಾಜ್ಯ ರಾಜಕೀಯದಲ್ಲಿ ಶುರುವಾಯ್ತು ಲೆಕ್ಕಾಚಾರ!

0
79

ಬೆಂಗಳೂರು: ಕರ್ನಾಟಕದ ರಾಜಕೀಯ ಅಂಗಳದಲ್ಲಿ ಈಗ ‘ಮೇ 4’ ಎಂಬ ದಿನಾಂಕ ಸಂಚಲನ ಮೂಡಿಸಿದೆ. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳಲಿರುವ ಈ ದಿನಾಂಕವು, ರಾಜ್ಯ ಕಾಂಗ್ರೆಸ್ ಸರ್ಕಾರದ ಭವಿಷ್ಯ ಮತ್ತು ನಾಯಕತ್ವ ಬದಲಾವಣೆಯ ಚರ್ಚೆಗೆ ಹೊಸ ತಿರುವು ನೀಡುವ ಮುನ್ಸೂಚನೆ ಸಿಗುತ್ತಿದೆ. ಸಿಎಂ ಸಿದ್ದರಾಮಯ್ಯ ಅಧಿಕಾರ ಮುಂದುವರಿಯುತ್ತದೆಯೇ ಅಥವಾ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಕನಸು ನನಸಾಗುತ್ತದೆಯೇ ಎಂಬ ಕುತೂಹಲ ಗರಿಗೆದರಿದೆ.

ನಾಯಕತ್ವ ಬದಲಾವಣೆಯ ಪಟ್ಟು:
ರಾಜ್ಯ ಸರ್ಕಾರ ಎರಡೂವರೆ ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲೇ ನಾಯಕತ್ವ ಬದಲಾವಣೆಯ ಕೂಗು ಕೇಳಿಬಂದಿತ್ತು. ಹೈಕಮಾಂಡ್ ಸದ್ಯಕ್ಕೆ ಗೊಂದಲಗಳಿಗೆ ತೆರೆ ಎಳೆದಿದ್ದರೂ, ಡಿ.ಕೆ. ಶಿವಕುಮಾರ್ ಬಣ ಮಾತ್ರ ಒಳಗೊಳಗೇ ಪಟ್ಟು ಸಡಿಲಿಸಿಲ್ಲ. ಐದು ರಾಜ್ಯಗಳ ಚುನಾವಣೆ ಹಾಗೂ ರಾಜ್ಯದ ಎರಡು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶದ ನಂತರ, ಈ ಒತ್ತಡ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ಸದ್ಯ ಶಾಂತವಾಗಿರುವಂತೆ ಕಾಣುತ್ತಿರುವ ಡಿಕೆಶಿ ಬಣ, ಮೇ 4ರ ನಂತರ ಅಧಿಕಾರ ಹಂಚಿಕೆಯ ಸೂತ್ರವನ್ನು ಮುಂದಿಟ್ಟು ಹೈಕಮಾಂಡ್ ಮೇಲೆ ಒತ್ತಡ ಹೇರಲು ಸಜ್ಜಾಗಿದೆ.

ಸಂಪುಟ ಪುನಾರಚನೆಯ ಸದ್ದು:
ಮತ್ತೊಂದೆಡೆ, ಸರ್ಕಾರ ಅಸ್ತಿತ್ವಕ್ಕೆ ಬಂದು ಮೂರು ವರ್ಷ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಂಪುಟ ಪುನಾರಚನೆಯ ಬೇಡಿಕೆ ಬಲವಾಗಿದೆ. ಸಚಿವಾಕಾಂಕ್ಷಿಗಳಾದ ಅನೇಕ ಶಾಸಕರು ಈಗಾಗಲೇ ದೆಹಲಿಗೆ ಭೇಟಿ ನೀಡಿ ತಮ್ಮ ಅಹವಾಲು ಸಲ್ಲಿಸಿದ್ದಾರೆ. ಅಲ್ಲದೇ ಮೇ 4ರ ಗಡುವಿನ ನಂತರ ಹೊಸ ಮುಖಗಳಿಗೆ ಅವಕಾಶ ನೀಡಬೇಕು ಮತ್ತು ನಿಷ್ಕ್ರಿಯ ಸಚಿವರನ್ನು ಕೈಬಿಡಬೇಕು ಎಂಬ ಆಗ್ರಹ ಮುನ್ನೆಲೆಗೆ ಬರಲಿದೆ ಎನ್ನಲಾಗುತ್ತಿದೆ.

ಮುಸ್ಲಿಂ ನಾಯಕರ ಭಿನ್ನಮತ:
ಪಕ್ಷದ ಆಂತರಿಕ ವಲಯದಲ್ಲಿ ಮುಸ್ಲಿಂ ನಾಯಕರ ನಡುವಿನ ಅಸಮಾಧಾನವೂ ಸ್ಫೋಟಗೊಳ್ಳುವ ಲಕ್ಷಣಗಳಿವೆ. ವಿಶೇಷವಾಗಿ ದಾವಣಗೆರೆ ದಕ್ಷಿಣ ಉಪಚುನಾವಣೆಯ ಸಂದರ್ಭದಲ್ಲಿ ಬಹಿರಂಗಗೊಂಡಿರುವ ಭಿನ್ನಮತವು ಪಕ್ಷಕ್ಕೆ ತಲೆಬಿಸಿ ಮಾಡಿದೆ. ಹಾಗೇ ಸಂಪುಟದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಅಸಮಾಧಾನವು ಮೇ 4ರ ನಂತರ ಪ್ರತಿಭಟನೆಯ ರೂಪ ಪಡೆದರೂ ಅಚ್ಚರಿಯಿಲ್ಲ.

ಒಟ್ಟಾರೆಯಾಗಿ.. ಸಿಎಂ ಸಿದ್ದರಾಮಯ್ಯ ಮೌನ, ಡಿ.ಕೆ. ಶಿವಕುಮಾರ್ ತಂತ್ರಗಾರಿಕೆ ನಡುವೆ ಮೇ 4ರ ಫಲಿತಾಂಶವು ರಾಜ್ಯ ರಾಜಕಾರಣದ ಮುಂದಿನ ದಾರಿಯನ್ನು ನಿರ್ಧರಿಸಲಿದೆ. ಈ ‘ಡೆಡ್‌ಲೈನ್’ ನಂತರ ರಾಜ್ಯ ಕಾಂಗ್ರೆಸ್‌ನಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾಗುತ್ತವೆಯೇ ಎಂಬುದನ್ನು ಸದ್ಯ ಕಾದು ನೋಡಬೇಕಿದೆ.