SK Home Ad
Home ನಮ್ಮ ಜಿಲ್ಲೆ ಬೆಂಗಳೂರು ಕಡ್ಡಾಯವಾಗಿ ಪ್ರತಿ ತಿಂಗಳು ಪ್ರಾಧಿಕಾರದ ಸಭೆ ನಡೆಸಿ: ಡಾ. ಯತೀಂದ್ರ

ಕಡ್ಡಾಯವಾಗಿ ಪ್ರತಿ ತಿಂಗಳು ಪ್ರಾಧಿಕಾರದ ಸಭೆ ನಡೆಸಿ: ಡಾ. ಯತೀಂದ್ರ

0
49

ಬೆಂಗಳೂರು: ನಗರಾಭಿವೃದ್ಧಿ ಪ್ರಾಧಿಕಾರಗಳು ಕಾಲ ಕಾಲಕ್ಕೆ ಪ್ರಾಧಿಕಾರದ ಸಭೆ ನಡೆಸದಿರುವ ಹಿನ್ನೆಲೆಯಲ್ಲಿ ನಾಗರಿಕರಿಗೆ ಸರಿಯಾಗಿ ಸೌಲಭ್ಯ ಕೊಡಲು ಸಾಧ್ಯವಾಗುತ್ತಿಲ್ಲ. ಪ್ರತಿ ತಿಂಗಳು ಪ್ರಾಧಿಕಾರದ ಸಭೆ ನಡೆಸಬೇಕು ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದ 34 ಅಭಿವೃದ್ಧಿ ಪ್ರಾಧಿಕಾರಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಕೆಲವು ಪ್ರಾಧಿಕಾರಗಳು ವರ್ಷಕ್ಕೆ 2 ಅಥವಾ 3 ಸಭೆಗಳನ್ನು ಮಾತ್ರ ಮಾಡಿವೆ. ಇದರಿಂದ ಪ್ರಗತಿ ಸಾಧ್ಯವಿಲ್ಲ. ಸಭೆ ನಡೆಸದಿರುವುದನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ. ವರ್ಷಕ್ಕೆ ಕನಿಷ್ಠ 8 ಸಭೆಗಳನ್ನಾದರೂ ಮಾಡಬೇಕು ಎಂದು ಅವರು ಸೂಚಿಸಿದರು.

ಜನಸಂಖ್ಯೆ ಬೆಳೆಯುತ್ತಿದೆ ಅದಕ್ಕೆ ಅನುಗುಣವಾಗಿ ಸೌಲಭ್ಯಗಳನ್ನು ಪ್ರಾಧಿಕಾರಗಳು ಕೊಡಬೇಕು. ಲಭ್ಯವಿರುವ ಜಾಗಗಳನ್ನು ತೆಗೆದುಕೊಂಡು ಅಭಿವೃದ್ಧಿ ಪಡಿಸಬೇಕು. ವಸತಿ ಇಲಾಖೆಯಿಂದ ಬೇಡಿಕೆಗೆ ತಕ್ಕಷ್ಟು ಮನೆಗಳನ್ನು ನೀಡಲಾಗುತ್ತಿಲ್ಲ. ವಸತಿಗಳಿಗೆ ಬೇಡಿಕೆ ಇದೆ. ನಮ್ಮ ಪ್ರಾಧಿಕಾರಗಳಿಂದ ಖಾಸಗಿ ಅಪಾರ್ಟ್‌ಮೆಂಟ್‌ಗಳ ರೀತಿಯಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸಿ ಮನೆಗಳನ್ನು ಹಂಚುವ ಬಗ್ಗೆ ಪರಿಶೀಲಿಸಲು ಸಚಿವರು ತಿಳಿಸಿದರು.

ಮಾಸ್ಟರ್ ಪ್ಲಾನ್: ಮಾಸ್ಟರ್ ಪ್ಲಾನ್‌ಗಳ ಬಗ್ಗೆ ಸಚಿವರು ಪರಿಶೀಲಿಸಿದರು. ಹಳೆಯ ಮಾಸ್ಟರ್ ಪ್ಲಾನ್ ಅನ್ನು ಪರಿಷ್ಕರಿಸಿ, ಎಲ್ಲಾ ಪ್ರಾಧಿಕಾರಗಳು ಜಿಐಎಸ್ ಆಧರಿಸಿ ಮಾಸ್ಟರ್ ಪ್ಲಾನ್ ತಯಾರಿಸಬೇಕು ಎಂದರು. ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಮಾಸ್ಟರ್ ಪ್ಲಾನ್ ಮಾಡಲಾಗಿದೆ. 2024ರಿಂದ ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಬಂದಿದೆ. ಈ ಪ್ರಾಧಿಕಾರದ ವ್ಯಾಪ್ತಿಯನ್ನು ಬಿಟ್ಟು ಮಾಸ್ಟರ್ ಪ್ಲಾನ್ ಮಾಡಬೇಕಿದೆ ಎಂದರು.

ಬ್ಯಾಂಕ್ ಖಾತೆಗಳ ನಿರ್ವಹಣೆ: ಎಲ್ಲಾ ಪ್ರಾಧಿಕಾರಗಳು ಪಾರದರ್ಶಕವಾಗಿ ಬ್ಯಾಂಕ್ ಖಾತೆಗಳನ್ನು ನಿರ್ವಹಿಸಬೇಕು. ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆ ನೀಡುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಕೆರೆಗಳ ಅಭಿವೃದ್ಧಿ: ಪ್ರಾಧಿಕಾರಗಳು ಕೆರೆಗಳ ಬ್ಯೂಟಿಫಿಕೇಷನ್ ಬಗ್ಗೆ ಒತ್ತು ನೀಡುತ್ತಿವೆ. ನೀರು ಸಂಗ್ರಹದ ಬಗ್ಗೆ ಗಮನ ಹರಿಸುತ್ತಿಲ್ಲ. ನೀರಿಲ್ಲದಿದ್ದರೆ ಕೆರೆಗಳು ಉಪಯೋಗವಿಲ್ಲ‌. ಕೊಳಚೆ ನೀರು ಹರಿಯದಂತೆ ಕ್ರಮವಹಿಸಬೇಕು. ಡಿ-ಸಿಲ್ಟಿಂಗ್, ಕುಡಿಯುವ ನೀರಿಗೆ ಕೆರೆ ಅಭಿವೃದ್ಧಿಪಡಿಸಲಾಗುತ್ತಿದೆ. ಕೆರೆಗಳ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಿರುವ ಮಾರ್ಗಸೂಚಿಗಳನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು.

ಕಟ್ಟಡ ಪರವಾನಿಗೆ: ಕಟ್ಟಡ ನಿರ್ಮಾಣ ಪರವಾನಿಗೆ ವಿಳಂಬವಾಗಬಾರದು. ವಿಳಂಬದಿಂದ ಜನರಿಗೆ ನಿರ್ಮಾಣ ವೆಚ್ಚ ಹೆಚ್ಚಾಗುತ್ತದೆ. ವಿನಾಕಾರಣ ವಿಳಂಬ ಮಾಡಿದರೆ ಕ್ರಮಗೊಳ್ಳಲಾಗುವುದು ಎಂದರು.

ಟೈಟಲ್ ಡೀಡ್: ನಿವೇಶನ ಹಂಚಿಕೆ ಆಗಿರುವವರಿಗೆ ಟೈಟಲ್ ಡೀಡ್ ಕೊಡಲು ಸಮಸ್ಯೆಯಾಗಿದೆ. ಅದನ್ನು ವಾಪಸ್ ತೆಗೆದುಕೊಳ್ಳುವುದು ಸರಿಯಲ್ಲ. ದಂಡ ವಿಧಿಸಿ, ಟೈಟಲ್ ಡೀಡ್ ನೀಡುವ ಬಗ್ಗೆ ಕ್ರಮವಹಿಸಲು ತಿಳಿಸಿದರು. ಮುಖ್ಯಮಂತ್ರಿಗಳು ಇತ್ತೀಚೆಗೆ ನಡೆದ ಡಿಸಿ, ಸಿಇಒಗಳ ಸಭೆಯಲ್ಲಿ ನಗರಗಳ ಅಸಮರ್ಪಕ ಬೆಳವಣಿಗೆ ಬಗ್ಗೆ ಎಚ್ಚರ ವಹಿಸುವಂತೆ ಸೂಚಿಸಿದ್ದರು. ಯೋಜಿತ ನಗರ ಬೆಳವಣಿಗೆಗೆ ಗಮನ ಹರಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಬಿ ಬಿ ಕಾವೇರಿ, ನಗರ ಯೋಜನೆ ಇಲಾಖೆ ಆಯುಕ್ತರಾದ ಶಿವಾನಂದ ಕಾಪಸಿ, ನಗರ ಯೋಜನೆ ಇಲಾಖೆ ನಿರ್ದೇಶಕರಾದ ತಿಪ್ಪೇಸ್ವಾಮಿ, ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳ ಅಧಿಕಾರಿಗಳು ಉಪಸ್ಥಿತರಿದ್ದರು.