ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್‌ನ ಗ್ರಾಹಕ ಉತ್ಪನ್ನ (FMCG) ವ್ಯವಹಾರವನ್ನು ದೇಶದ ಅಗ್ರ ಸಂಸ್ಥೆಗಳ ಸಾಲಿಗೆ ತರುವ ಮಹತ್ವಾಕಾಂಕ್ಷೆಯ ಗುರಿಯನ್ನು ನಿರ್ದೇಶಕಿ ಇಶಾ ಅಂಬಾನಿ ಪ್ರಕಟಿಸಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್‌ನ 49ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (RCPL) 2030ರ ಹಣಕಾಸು ವರ್ಷದ ವೇಳೆಗೆ ₹1 ಲಕ್ಷ ಕೋಟಿ ಆದಾಯ ತಲುಪುವ ಗುರಿ ಹೊಂದಿದೆ ಎಂದು ತಿಳಿಸಿದ್ದಾರೆ.
ಇಶಾ ಅಂಬಾನಿ ಅವರ ಪ್ರಕಾರ, ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ಆರ್‌ಸಿಪಿಎಲ್ ₹22,000 ಕೋಟಿ ಒಟ್ಟು ಆದಾಯ ದಾಖಲಿಸಿದ್ದು, ದಶಕಗಳ ಕಾಲ ತೆಗೆದುಕೊಳ್ಳುವ ಸಾಧನೆಯನ್ನು ಅಲ್ಪಾವಧಿಯಲ್ಲೇ ಮುಟ್ಟಿದೆ. ಕಂಪನಿಯ ಉತ್ಪನ್ನಗಳು ಈಗ ರಫ್ತು ಮತ್ತು ಫ್ರಾಂಚೈಸಿ ಮಾರಾಟದ ಮೂಲಕ 40ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿವೆ.
ರಿಲಯನ್ಸ್‌ನ ಜನಪ್ರಿಯ ಪಾನೀಯ ಬ್ರಾಂಡ್ Campa 2026ರ ಹಣಕಾಸು ವರ್ಷದಲ್ಲಿ ₹4,700 ಕೋಟಿ ಮಾರಾಟ ದಾಖಲಿಸಿದ್ದು, ಭಾರತದ ಕಾರ್ಬೊನೇಟೆಡ್ ತಂಪು ಪಾನೀಯಗಳ ಮಾರುಕಟ್ಟೆಯಲ್ಲಿ ನಾಲ್ಕನೇ ಅತಿದೊಡ್ಡ ಬ್ರಾಂಡ್ ಆಗಿ ಹೊರಹೊಮ್ಮಿದೆ. ಪ್ರಮುಖ ಮಾರುಕಟ್ಟೆಗಳಲ್ಲಿ ಕ್ಯಾಂಪಾದ ಮಾರುಕಟ್ಟೆ ಪಾಲು ಎರಡಂಕಿ ಸಂಖ್ಯೆಯನ್ನು ತಲುಪಿದೆ ಎಂದು ಕಂಪನಿ ತಿಳಿಸಿದೆ.
ಇದೇ ವೇಳೆ, ರಿಲಯನ್ಸ್ ರಿಟೇಲ್ 2026ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ 20,000 ಮಳಿಗೆಗಳ ಗಡಿ ದಾಟಿದೆ. 2026ರ ಹಣಕಾಸು ವರ್ಷದಲ್ಲಿ ಸಂಸ್ಥೆಯ ಒಟ್ಟು ಆದಾಯ ₹3.70 ಲಕ್ಷ ಕೋಟಿ ಆಗಿದ್ದು, ವರ್ಷದಿಂದ ವರ್ಷಕ್ಕೆ ಶೇ. 11.8ರಷ್ಟು ಏರಿಕೆಯಾಗಿದೆ.
ಸ್ಮಾರ್ಟ್ ಬಜಾರ್ ಮಳಿಗೆಗಳ ಸಂಖ್ಯೆ 1,000 ದಾಟಿದ್ದರೆ, ಜಿಯೋಮಾರ್ಟ್ ದೇಶದ ಅತಿದೊಡ್ಡ ತ್ವರಿತ ವಾಣಿಜ್ಯ ಜಾಲಗಳಲ್ಲಿ ಒಂದಾಗಿ ಬೆಳೆದಿದೆ. ಇದು 1,200ಕ್ಕೂ ಹೆಚ್ಚು ನಗರಗಳು, 3,100ಕ್ಕೂ ಹೆಚ್ಚು ಮಳಿಗೆಗಳು ಹಾಗೂ 5,100ಕ್ಕೂ ಹೆಚ್ಚು ಪಿನ್‌ಕೋಡ್ ಪ್ರದೇಶಗಳಿಗೆ ಸೇವೆ ನೀಡುತ್ತಿದೆ.
ರೈತರೊಂದಿಗೆ ಸಹಭಾಗಿತ್ವವನ್ನೂ ಬಲಪಡಿಸಿರುವ ರಿಲಯನ್ಸ್ ರೀಟೇಲ್, 2026ರ ಹಣಕಾಸು ವರ್ಷದಲ್ಲಿ 40,000ಕ್ಕೂ ಹೆಚ್ಚು ರೈತರ ಸಹಯೋಗದೊಂದಿಗೆ 110 ಸಂಗ್ರಹ ಕೇಂದ್ರಗಳ ಮೂಲಕ ಸುಮಾರು 5.7 ಲಕ್ಷ ಮೆಟ್ರಿಕ್ ಟನ್ ಹಣ್ಣು-ತರಕಾರಿಗಳನ್ನು ಖರೀದಿಸಿದೆ.
ಮುಂದಿನ ಹಂತದ ಬೆಳವಣಿಗೆಯ ಭಾಗವಾಗಿ, ರಿಲಯನ್ಸ್ ಪಾನೀಯಗಳು, ದಿನನಿತ್ಯದ ಬಳಕೆಯ ವಸ್ತುಗಳು, ಫುಡ್ ಪಾರ್ಕ್‌ಗಳು, ಉಡುಪುಗಳು ಹಾಗೂ ಕೈಗೆಟುಕುವ ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದ ಉತ್ಪಾದನಾ ವೇದಿಕೆಗಳನ್ನು ನಿರ್ಮಿಸುತ್ತಿದೆ. ಈ ನಿಟ್ಟಿನಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಇಂಟಿಗ್ರೇಟೆಡ್ ಫುಡ್ ಪಾರ್ಕ್‌ಗಳ ಜಾಲಕ್ಕೆ ₹30,000 ಕೋಟಿ ಹೆಚ್ಚುವರಿ ಹೂಡಿಕೆ ಮಾಡುವುದಾಗಿ ಕಂಪನಿ ಘೋಷಿಸಿದೆ.






















