Home Advertisement
Home ನಮ್ಮ ಜಿಲ್ಲೆ ಬೆಂಗಳೂರು ಗೋಡೆ ಕುಸಿತ ದುರಂತ: ರಾಜ್ಯ – ಕೇಂದ್ರ ಸರ್ಕಾರ ಪರಿಹಾರ ಘೋಷಣೆ

ಗೋಡೆ ಕುಸಿತ ದುರಂತ: ರಾಜ್ಯ – ಕೇಂದ್ರ ಸರ್ಕಾರ ಪರಿಹಾರ ಘೋಷಣೆ

0
88

ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ನಡೆದ ಭೀಕರ ದುರಂತವು ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸಿದೆ. ಶಿವಾಜಿನಗರದಲ್ಲಿರುವ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಆವರಣದ ಕಾಂಪೌಂಡ್ ಗೋಡೆ ಕುಸಿದು ಏಳು ಮಂದಿ ಮೃತಪಟ್ಟಿರುವ ಘಟನೆ ದುಃಖದ ವಾತಾವರಣ ಸೃಷ್ಟಿಸಿದೆ.

ಬುಧವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಗೋಡೆ ಏಕಾಏಕಿ ಕುಸಿದ ಪರಿಣಾಮ, ಅಲ್ಲಿದ್ದ ಜನರ ಮೇಲೆ ಅವಶೇಷಗಳು ಬಿದ್ದು ಈ ದುರ್ಘಟನೆ ಸಂಭವಿಸಿದೆ. ಮೃತಪಟ್ಟವರಲ್ಲಿ ಬಾಲಕಿ ಸೇರಿದಂತೆ ಏಳು ಮಂದಿ ಸೇರಿದ್ದು, ಹಲವರು ಗಾಯಗೊಂಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕನ್ನಡದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, “ಬೆಂಗಳೂರುದಲ್ಲಿ ಗೋಡೆ ಕುಸಿತದಿಂದ ಸಂಭವಿಸಿದ ಅನಾಹುತ ಅತ್ಯಂತ ದುರದೃಷ್ಟಕರ. ದುಃಖಿತ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ” ಎಂದು ತಿಳಿಸಿದ್ದಾರೆ.

ಅದೇ ವೇಳೆ, ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ₹2 ಲಕ್ಷ ಹಾಗೂ ಗಾಯಗೊಂಡವರಿಗೆ ₹50,000 ಪರಿಹಾರ ನೀಡಲಾಗುವುದು ಎಂದು ಘೋಷಿಸಿದ್ದಾರೆ.

ಇನ್ನು, ರಾಜ್ಯ ಸರ್ಕಾರವೂ ಮೃತರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ಘೋಷಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಬಳಿಕ ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ಭೇಟಿಯಾಗಿ ಅವರ ಅಳಲು ಆಲಿಸಿದರು. ಘಟನೆಯ ನಿಖರ ಕಾರಣ ತಿಳಿಯಲು ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಮೃತರ ವಿವರಗಳು: ಮೃತಪಟ್ಟವರಲ್ಲಿ ಎಂ.ಆರ್ ಪಾಳ್ಯದ ಬಟ್ಟೆ ವ್ಯಾಪಾರಿ ಮೊಹಮ್ಮದ್ ಅಬ್ದುಲ್ ಹಕ್ (52), ಡಿ.ಜೆ. ಹಳ್ಳಿಯ ಪಾದರಕ್ಷೆ ವ್ಯಾಪಾರಿ ಫಯಾಜ್ ಅಹ್ಮದ್ (39), ಕೆ.ಜಿ ಹಳ್ಳಿ ಮೂಲದ 6 ವರ್ಷದ ವಿದ್ಯಾರ್ಥಿನಿ ಮುಸಾವೀರ್ ಬೇಗಂ, ಕೇರಳದಿಂದ ಬಂದ ಪ್ರವಾಸಿಗರಾದ ಸ್ಮಿತಾ (47) ಮತ್ತು ಕೆ.ಕೆ. ಲತಾ (57), ಉತ್ತರ ಪ್ರದೇಶದ ವ್ಯಾಪಾರಿ ಸಲಾವುದ್ದೀನ್ ಅನ್ಸಾರಿ (36), ಅಸ್ಸಾಂ ಮೂಲದ ಕಾರ್ಮಿಕ ನಸೀಮುಲ್ಲಾ (19) ಸೇರಿದ್ದಾರೆ.

ಗಾಯಾಳುಗಳಿಗೆ ಚಿಕಿತ್ಸೆ: ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ನಿಗಾ ವಹಿಸಿದ್ದಾರೆ.

ಗೋಡೆ ಕುಸಿತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ನಿರ್ಲಕ್ಷ್ಯ ಅಥವಾ ನಿರ್ಮಾಣದ ದೋಷವಿದೆಯೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ.