Home Advertisement
Home ಸುದ್ದಿ ದೇಶ ಮೋದಿ ಆಹ್ವಾನ : ವಿಯೆಟ್ನಾಂ ಅಧ್ಯಕ್ಷ ಟೋ ಲ್ಯಾಮ್ ಭಾರತಕ್ಕೆ ಭೇಟಿ

ಮೋದಿ ಆಹ್ವಾನ : ವಿಯೆಟ್ನಾಂ ಅಧ್ಯಕ್ಷ ಟೋ ಲ್ಯಾಮ್ ಭಾರತಕ್ಕೆ ಭೇಟಿ

0
70

ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ, ವಿಯೆಟ್ನಾಂ ಅಧ್ಯಕ್ಷ ಟೊ ಲ್ಯಾಮ್ ಅವರು ಮೇ 5ರಿಂದ 7ರವರೆಗೆ ಭಾರತಕ್ಕೆ ಅಧಿಕೃತ ರಾಜ್ಯ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (MEA) ತಿಳಿಸಿದೆ.

ಈ ಭೇಟಿ ವೇಳೆ, ವಿಯೆಟ್ನಾಂ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಟೋ ಲ್ಯಾಮ್ ಅವರೊಂದಿಗೆ ಹಲವು ಸಚಿವರು, ಹಿರಿಯ ಅಧಿಕಾರಿಗಳು ಮತ್ತು ಬಲವಾದ ವ್ಯಾಪಾರ ನಿಯೋಗ ಭಾರತಕ್ಕೆ ಆಗಮಿಸಲಿದ್ದಾರೆ. ಈ ವರ್ಷ ಏಪ್ರಿಲ್‌ನಲ್ಲಿ ವಿಯೆಟ್ನಾಂ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ, ಲ್ಯಾಮ್ ಅವರಿದು ಭಾರತಕ್ಕೆ ಮೊದಲ ರಾಜ್ಯ ಭೇಟಿ ಆಗಿದೆ.

ಔಪಚಾರಿಕ ಸ್ವಾಗತ, ಉನ್ನತ ಮಟ್ಟದ ಮಾತುಕತೆ: ಮೇ 6ರಂದು ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಟೋ ಲ್ಯಾಮ್ ಅವರಿಗೆ ಔಪಚಾರಿಕ ಸ್ವಾಗತ ನೀಡಲಾಗುತ್ತದೆ. ಬಳಿಕ ಪ್ರಧಾನಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಂಬಂಧಗಳು, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯಲಿವೆ.

ಇದೇ ವೇಳೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಟೋ ಲ್ಯಾಮ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಇತರ ಉನ್ನತ ಮಟ್ಟದ ಭಾರತೀಯ ಗಣ್ಯರೂ ಈ ಭೇಟಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಬೋಧ್ ಗಯಾ, ಮುಂಬೈ ಪ್ರವಾಸ : ಭಾರತ ಪ್ರವಾಸದ ಅಂಗವಾಗಿ, ಟೋ ಲ್ಯಾಮ್ ಅವರು ಬೋಧ್ ಗಯಾ ಮತ್ತು ಮುಂಬೈ ನಗರಗಳಿಗೆ ಭೇಟಿ ನೀಡಲಿದ್ದಾರೆ. ಇದು ಧಾರ್ಮಿಕ ಮತ್ತು ಆರ್ಥಿಕ ಸಂಬಂಧಗಳಿಗೂ ಮಹತ್ವವನ್ನು ನೀಡುತ್ತದೆ.

ಭಾರತ–ವಿಯೆಟ್ನಾಂ ಸಂಬಂಧಗಳ ಬಲವರ್ಧನೆ: ಭಾರತ ಮತ್ತು ವಿಯೆಟ್ನಾಂ ನಡುವಿನ ಸಂಬಂಧಗಳು ಐತಿಹಾಸಿಕ ಹಾಗೂ ನಾಗರಿಕ ಮಟ್ಟದಲ್ಲಿ ಬಲವಾಗಿ ಬೆಸೆದುಕೊಂಡಿವೆ. 2016ರಲ್ಲಿ ಪ್ರಧಾನಿ ಮೋದಿ ವಿಯೆಟ್ನಾಂಗೆ ಭೇಟಿ ನೀಡಿದ ಸಂದರ್ಭದಲ್ಲಿ, ಈ ಸಂಬಂಧಗಳನ್ನು “ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ” (Comprehensive Strategic Partnership) ಮಟ್ಟಕ್ಕೆ ಏರಿಸಲಾಯಿತು.

ಈ ವರ್ಷ ಆ ಒಪ್ಪಂದದ 10ನೇ ವಾರ್ಷಿಕೋತ್ಸವದ ಹಿನ್ನೆಲೆ, ಟೋ ಲ್ಯಾಮ್ ಅವರ ಭೇಟಿ ವಿಶೇಷ ಮಹತ್ವ ಪಡೆದಿದೆ. ಈ ಭೇಟಿ ದ್ವಿಪಕ್ಷೀಯ ಸಹಕಾರವನ್ನು ಇನ್ನಷ್ಟು ವಿಸ್ತರಿಸಿ, ವ್ಯಾಪಾರ, ಭದ್ರತೆ, ತಂತ್ರಜ್ಞಾನ ಮತ್ತು ಪ್ರಾದೇಶಿಕ ಸಹಕಾರ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ತೆರೆದಿಡಲಿದೆ ಎಂದು ಎಂಇಎ ಹೇಳಿಕೆಯಲ್ಲಿ ತಿಳಿಸಲಾಗಿದೆ.