Home Advertisement
Home ನಮ್ಮ ಜಿಲ್ಲೆ ಬಳ್ಳಾರಿ ಫ್ರಿಜ್ ಸ್ಫೋಟ: ಮನೆಯಲ್ಲೇ ಭಾರಿ ಬೆಂಕಿ ಅವಘಡ

ಫ್ರಿಜ್ ಸ್ಫೋಟ: ಮನೆಯಲ್ಲೇ ಭಾರಿ ಬೆಂಕಿ ಅವಘಡ

0
103

ಫ್ರಿಜ್ ಸ್ಫೋಟ – ಕ್ಷಣಾರ್ಧದಲ್ಲಿ ಮನೆಗೆ ವ್ಯಾಪಿಸಿದ ಬೆಂಕಿ; ಗೃಹೋಪಯೋಗಿ ವಸ್ತುಗಳು ಭಸ್ಮ

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಸಜ್ಜೆಹೊಲ ಪ್ರದೇಶದಲ್ಲಿ ಶುಕ್ರವಾರ ಸಂಭವಿಸಿದ ಅಗ್ನಿ ಅವಘಡ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬಿಜಿಲಿ ಸಣ್ಣ ಭಾಷಾ ಅವರ ಮನೆಯಲ್ಲಿ ಫ್ರಿಜ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ಮನೆಯ ಹಲವು ಕೊಠಡಿಗಳಿಗೆ ವ್ಯಾಪಿಸಿದೆ ಎಂದು ತಿಳಿದುಬಂದಿದೆ.

ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆಗೆ ಈ ಘಟನೆ ಸಂಭವಿಸಿದೆ. ಮನೆಯಲ್ಲಿದ್ದ ಫ್ರಿಜ್ ಸ್ಫೋಟಗೊಂಡ ತಕ್ಷಣ ಬೆಂಕಿಯ ಜ್ವಾಲೆಗಳು ಎದ್ದಿದ್ದು, ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿಯಾಗಲಾರಂಭಿಸಿವೆ. ಕೆಲವೇ ನಿಮಿಷಗಳಲ್ಲಿ ಬೆಂಕಿ ಮನೆಯ ವಿವಿಧ ಭಾಗಗಳಿಗೆ ಹರಡಿದ ಪರಿಣಾಮ ಟಿ.ವಿ., ಪೀಠೋಪಕರಣಗಳು, ಇತರ ಗೃಹ ಬಳಕೆಯ ವಸ್ತುಗಳು ಹಾಗೂ ವ್ಯಾಪಾರಕ್ಕಾಗಿ ಸಂಗ್ರಹಿಸಿಟ್ಟಿದ್ದ ಬಟ್ಟೆಗಳು ಸಂಪೂರ್ಣ ಸುಟ್ಟು ಹೋಗಿವೆ.

ಬೆಂಕಿಯ ಜ್ವಾಲೆಗಳು ಹಾಗೂ ದಟ್ಟ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದು, ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.

ಇದನ್ನೂ ಓದಿ: KPS ಶಿಕ್ಷಣ ದೇಶಕ್ಕೇ ಮಾದರಿ : 52 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಚಾಲನೆ

ಸ್ಥಳೀಯರ ಪ್ರಕಾರ, ಸಮಯಕ್ಕೆ ಸರಿಯಾಗಿ ಅಗ್ನಿಶಾಮಕ ಸಿಬ್ಬಂದಿ ಆಗಮಿಸದೇ ಇದ್ದರೆ ಬೆಂಕಿ ಪಕ್ಕದ ಮನೆಗಳಿಗೂ ವ್ಯಾಪಿಸುವ ಸಾಧ್ಯತೆ ಇತ್ತು. ಅಗ್ನಿಶಾಮಕ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ದೊಡ್ಡ ಮಟ್ಟದ ಅನಾಹುತ ತಪ್ಪಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ. ಈ ಅವಘಡದಲ್ಲಿ ಸುಮಾರು ₹3 ಲಕ್ಷ ಮೌಲ್ಯದ ಆಸ್ತಿ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಅಗ್ನಿಶಾಮಕ ಕಾರ್ಯಾಚರಣೆಯಲ್ಲಿ ಸಹಾಯಕ ಠಾಣಾಧಿಕಾರಿ ಎಚ್. ಚಂದ್ರಣ್ಣ, ದೊಡ್ಡ ಲಿಂಗಪ್ಪ, ಮಂಜುನಾಥ, ಕೆ. ಸಂಗಯ್ಯ ಹಿರೇಮಠ, ಲಿಂಗರಾಜ ಕೆ. ಹಾಗೂ ಪುಲಿ ಶೇಖರ ಭಾಗವಹಿಸಿದ್ದರು.

ಇದನ್ನೂ ಓದಿ: ಕರ್ನಾಟಕ ಸೇರಿ 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆ

ಫ್ರಿಜ್ ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ತಾಂತ್ರಿಕ ದೋಷದಿಂದ ಅವಘಡ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.