SK Home Ad
Home ನಮ್ಮ ಜಿಲ್ಲೆ ಬಳ್ಳಾರಿ ಎಸ್‌ಐಆರ್ ಪ್ರಕ್ರಿಯೆ ತಕ್ಷಣವೇ ರದ್ದುಪಡಿಸಿ

ಎಸ್‌ಐಆರ್ ಪ್ರಕ್ರಿಯೆ ತಕ್ಷಣವೇ ರದ್ದುಪಡಿಸಿ

0
10

ಬಳ್ಳಾರಿ: ರಾಜ್ಯ ಸರ್ಕಾರ ಎಸ್‌ಐಆರ್ ಪ್ರಕ್ರಿಯೆಯ ಪಾವಿತ್ರ‍್ಯವನ್ನು ಹಾಳು ಮಾಡುತ್ತಿದೆ. ಚುನಾವಣಾ ವ್ಯವಸ್ಥೆಯನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದೆ. ಪಶ್ಚಿಮ ಬಂಗಾಳ ಮಾದರಿಯಲ್ಲಿ ಕೇಂದ್ರ ಚುನಾವಣೆ ಆಯೋಗದ ಮಧ್ಯಸ್ಥಿಕೆಯಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಯಬೇಕು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಒತ್ತಾಯಿಸಿದರು.

ಹಾವಂಬಾವಿಯಲ್ಲಿನ ಅವರ ನಿವಾಸದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ತಕ್ಷಣ ರದ್ದುಪಡಿಸಬೇಕು. ಎಸ್‌ಐಆರ್ ಸಮೀಕ್ಷೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ರಾಜ್ಯ ಸರಕಾರ ತನ್ನ ಮೂಗಿನ ನೇರಕ್ಕೆ ಎಸ್‌ಐಆರ್ ನಡೆಸುತ್ತಿದೆ. ಅಕ್ರಮ ವಲಸಿಗರು, ಕಳ್ಳ ಮತದಾರರನ್ನು ರಕ್ಷಿಸುವ ರೀತಿಯಲ್ಲಿ ಕಾರ್ಯ ನಡೆಯುತ್ತಿದೆ. ಕೆಲ ಬಿಎಲ್‌ಒಗಳು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಪಾಲಿಸದೇ ಕರ್ತವ್ಯ ನಿರ್ವಹಿಸುತ್ತಿದ್ದು, ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸುವ ಬದಲು ಶಾದಿ ಮಹಲ್, ಮಸೀದಿ ಹಾಗೂ ಸಮುದಾಯ ಭವನಗಳಲ್ಲಿ ಕುಳಿತು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ದೂರಿದರು. ಇಂತಹ ರೀತಿಯಲ್ಲಿ ನಡೆಸಿರುವ ಸಮೀಕ್ಷೆಯನ್ನು ಕೂಡಲೇ ರದ್ದುಪಡಿಸಿ, ನಿಯಮ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಬಂಧಿಸಬೇಕು ಎಂದು ಒತ್ತಾಯಿಸಿದರು.

ಅಕ್ರಮವಾಗಿ ದೇಶ ಪ್ರವೇಶಿಸಿರುವ ಬಾಂಗ್ಲಾದೇಶಿ ವಲಸಿಗರಿಗೆ ಗುರುತಿನ ಚೀಟಿ ಒದಗಿಸಲು ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದ ಶ್ರೀರಾಮುಲು, ಇಂತಹ ಅಕ್ರಮಗಳು ದೇಶದ ಭದ್ರತೆಗೆ ಅಪಾಯಕಾರಿಯಾಗಿವೆ. ಕಾಂಗ್ರೆಸ್ ಪಕ್ಷವು ಮತಬ್ಯಾಂಕ್ ರಾಜಕಾರಣಕ್ಕಾಗಿ ಇಂತಹ ನೀತಿಗಳನ್ನು ಅನುಸರಿಸುತ್ತಿದೆ. ಕಾಂಗ್ರೆಸ್ ಸರ್ಕಾರಕ್ಕೆ ದೇಶದ ಭದ್ರತೆಗಿಂತ ರಾಜಕಾರಣ ಮುಖ್ಯವಾಗಿದೆ ಎಂದು ಆರೋಪಿಸಿದರು.

2028ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿ.ಶ್ರೀರಾಮುಲು, ಅಕ್ರಮಗಳ ಮೂಲಕ ಚುನಾವಣಾ ಪ್ರಕ್ರಿಯೆಯನ್ನು ದಾರಿ ತಪ್ಪಿಸಿ ಅಧಿಕಾರಕ್ಕೆ ಬರಲು ಸರ್ಕಾರ ಪ್ರಯತ್ನಿಸುತ್ತಿದೆ. 2028ರಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬುದು ಕಾಂಗ್ರೆಸ್ ನಾಯಕರ ಹಗಲು ಕನಸು ಎಂದು ಟೀಕಿಸಿದರು.