SK Home Ad
Home ನಮ್ಮ ಜಿಲ್ಲೆ ಬಳ್ಳಾರಿ ರೈತರ ಮೇಲಿನ ಪ್ರಕರಣ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಹೋರಾಟ

ರೈತರ ಮೇಲಿನ ಪ್ರಕರಣ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಹೋರಾಟ

0
50

ಬಳ್ಳಾರಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಡವರು ಮತ್ತು ರೈತರ ವಿರೋಧಿ ಆಡಳಿತ ನಡೆಸುತ್ತಿದ್ದು, ಮುಖ್ಯಮಂತ್ರಿ ಅವರಿಗೆ ರೈತರಿಗಿಂತ ರಿಯಲ್ ಎಸ್ಟೇಟ್ ಯೋಜನೆಗಳೇ ಆದ್ಯತೆಯಾಗಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.

ಬಳ್ಳಾರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀರಾವರಿ ಸಚಿವರಾಗಿದ್ದ ಸಂದರ್ಭದಲ್ಲಿ ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ದುರಸ್ತಿಗೆ ಸುಮಾರು 24 ತಿಂಗಳು ತೆಗೆದುಕೊಂಡ ಪರಿಣಾಮ ರೈತರು ಎರಡನೇ ಬೆಳೆ ಬೆಳೆಯಲು ಸಾಧ್ಯವಾಗದೆ ಭಾರೀ ನಷ್ಟ ಅನುಭವಿಸಿದರು ಎಂದು ಟೀಕಿಸಿದರು. ಆದರೆ ಮುಖ್ಯಮಂತ್ರಿ ಆದ ಕೆಲವೇ ಗಂಟೆಗಳಲ್ಲಿ ಬಿಡದಿ ಟೌನ್‌ಶಿಪ್ ಯೋಜನೆಗೆ ಆದ್ಯತೆ ನೀಡಿರುವುದು ಸರ್ಕಾರದ ನಿಲುವನ್ನು ತೋರಿಸುತ್ತದೆ ಎಂದು ಹೇಳಿದರು.

ಬಿಡದಿ ಪ್ರದೇಶದ ಫಲವತ್ತಾದ ಕೃಷಿಭೂಮಿಯನ್ನು ಕಳೆದುಕೊಳ್ಳುವ ಭೀತಿಯಿಂದ ರೈತರು ಮತ್ತು ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಕೂಡಲೇ ಹಿಂಪಡೆಯಬೇಕು ಹಾಗೂ ಟೌನ್‌ಶಿಪ್ ಯೋಜನೆಯನ್ನು ಕೈಬಿಡಬೇಕು ಎಂದು ಅವರು ಆಗ್ರಹಿಸಿದರು.

ಜು. 17ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಶಾಸಕರು, ಸಂಸದರು, ಮಾಜಿ ಶಾಸಕರು ಹಾಗೂ ಮುಖಂಡರು ಬೆಳಗ್ಗೆಯಿಂದ ಸಂಜೆವರೆಗೆ ಧರಣಿ ನಡೆಸಲಿದ್ದು, ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವಂತೆ ಮತ್ತು ಟೌನ್‌ಶಿಪ್ ಯೋಜನೆ ಕೈಬಿಡುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಬರಗಾಲ ನಿರ್ವಹಣೆಯಲ್ಲಿ ಸರ್ಕಾರ ವಿಫಲ: ರಾಜ್ಯದಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಸರ್ಕಾರ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ವಿಜಯೇಂದ್ರ ಆರೋಪಿಸಿದರು. ಮುಖ್ಯಮಂತ್ರಿ ಅವರು ಪ್ರಧಾನಮಂತ್ರಿಗೆ ಪತ್ರ ಬರೆದು ಕೇಂದ್ರದ ಅಧಿಕಾರಿಗಳ ತಂಡವನ್ನು ಕಳುಹಿಸುವಂತೆ ಮನವಿ ಮಾಡಿದ್ದಾರೆ. ಆದರೆ ರಾಜ್ಯದಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರು ಜಿಲ್ಲೆಗಳ ಪ್ರವಾಸ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಟೀಕಿಸಿದರು.

ಬರಗಾಲದಂತಹ ಸಂಕಷ್ಟದ ಸಮಯದಲ್ಲೂ ರಾಜ್ಯಕ್ಕೆ ಪೂರ್ಣಾವಧಿ ಕೃಷಿ ಸಚಿವರೇ ಇಲ್ಲದಿರುವುದು ದುರದೃಷ್ಟಕರ ಸಂಗತಿ ಎಂದ ಅವರು, ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದ ಬಿತ್ತನೆ ಮಾಡಿದ ಬೆಳೆಗಳು ಮೊಳಕೆಯೊಡೆಯದ ಸ್ಥಿತಿ ನಿರ್ಮಾಣವಾಗಿದೆ. ರೈತರ ಸಂಕಷ್ಟಕ್ಕೆ ಸ್ಪಂದಿಸಿ ಎಕರೆಗೆ ₹50 ಸಾವಿರ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು.

ಕ್ಯಾಬಿನೆಟ್ ವಿಸ್ತರಣೆ ಕುರಿತು ವ್ಯಂಗ್ಯ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಕಾಂಗ್ರೆಸ್‌ನಲ್ಲಿ ಚರ್ಚೆ ಆರಂಭವಾಗಿದ್ದು, ಸಚಿವ ಸ್ಥಾನಕ್ಕಾಗಿ ಶಾಸಕರು ದೆಹಲಿಗೆ ತೆರಳುತ್ತಿದ್ದಾರೆ. ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇನ್ನೂ ಭೇಟಿ ಸಮಯ ನೀಡಿಲ್ಲ ಎಂದು ವಿಜಯೇಂದ್ರ ವ್ಯಂಗ್ಯವಾಡಿದರು. “15–20 ದಿನಗಳ ಪ್ರವಾಸದ ಬಳಿಕ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಇದೆ” ಎಂದು ಟೀಕಿಸಿದರು.

ಅಧಿವೇಶನದಲ್ಲಿ ಬಿಜೆಪಿ–ಜೆಡಿಎಸ್ ಜಂಟಿ ಹೋರಾಟ: ಆಗಸ್ಟ್ 6ರಿಂದ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಜಂಟಿಯಾಗಿ ರೈತರ ಸಮಸ್ಯೆಗಳು, ಬಿಡದಿ ಟೌನ್‌ಶಿಪ್, ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳು ಹಾಗೂ ಕಾವೇರಿ ಕಣಿವೆಯ ರೈತರ ಹಿತಾಸಕ್ತಿಯ ವಿಷಯಗಳನ್ನು ಪ್ರಬಲವಾಗಿ ಪ್ರಸ್ತಾಪಿಸಲಾಗುವುದು ಎಂದು ವಿಜಯೇಂದ್ರ ತಿಳಿಸಿದರು.

ಕಾವೇರಿ ಕಣಿವೆಯಲ್ಲಿ ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿರುವ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸುವ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸಬೇಕು. ಮೊದಲು ರಾಜ್ಯದ ರೈತರ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಅವರು ಒತ್ತಾಯಿಸಿದರು.