SK Home Ad
Home ನಮ್ಮ ಜಿಲ್ಲೆ ಬಳ್ಳಾರಿ ಕಣ್ಣೀರಿನ ನಾಟಕ ಇಲ್ಲಿ ನಡೆಯಲ್ಲ: ನಾಗೇಂದ್ರ ವಿರುದ್ಧ ರೆಡ್ಡಿ ಕಿಡಿ

ಕಣ್ಣೀರಿನ ನಾಟಕ ಇಲ್ಲಿ ನಡೆಯಲ್ಲ: ನಾಗೇಂದ್ರ ವಿರುದ್ಧ ರೆಡ್ಡಿ ಕಿಡಿ

0
67
ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ ಬಳ್ಳಾರಿಯಲ್ಲಿ ರಾಜಕೀಯ ಕದನ; ಜನಾರ್ದನ ರೆಡ್ಡಿ ಗಂಭೀರ ಆರೋಪ

‘ವಾಲ್ಮೀಕಿ ನಿಗಮದ ಹಣ ಚುನಾವಣೆಗೆ ಬಳಕೆ’ ಆರೋಪ; ತುಕಾರಾಂ ಸೇರಿ 10 ಶಾಸಕರ ರಾಜೀನಾಮೆಗೆ ಸವಾಲು – ‘ಚುನಾವಣೆಗೆ ನಾಳೆಯಿಂದಲೇ ಸಿದ್ಧ’: ನಾಗೇಂದ್ರ ಹೇಳಿಕೆಗೆ ಜನಾರ್ದನ ರೆಡ್ಡಿ ತಿರುಗೇಟು

ಬಳ್ಳಾರಿ: ಸಚಿವ ಬಿ. ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬೆನ್ನಲ್ಲೇ ಬಳ್ಳಾರಿಯಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾಗೇಂದ್ರ ಅವರ ರಾಜೀನಾಮೆ ಹಾಗೂ ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರ ಮತ್ತು ನಾಗೇಂದ್ರ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದರು.

ನಾಗೇಂದ್ರ ಅವರು ‘ಮನುವಾದ’ ಹಾಗೂ ವಾಲ್ಮೀಕಿ ರಾಮಾಯಣದ ಶಂಭುಕನ ವಿಚಾರ ಮುಂದಿಟ್ಟುಕೊಂಡು ಮಾತನಾಡುತ್ತಿರುವುದನ್ನು ಟೀಕಿಸಿದ ರೆಡ್ಡಿ, “ನಾಗೇಂದ್ರ ಅವರ ರಾಜಕೀಯ ಆರಂಭವಾಗಿದ್ದು ಬಿಜೆಪಿಯಿಂದ. ಬಿಜೆಪಿ ಶಾಸಕನಾಗಿದ್ದಾಗ ಮನುವಾದ ನೆನಪಾಗಿರಲಿಲ್ಲವೇ?” ಎಂದು ಪ್ರಶ್ನಿಸಿದರು.

“ಸ್ವಯಂ ಘೋಷಿತ ಕಲಿಯುಗದ ಶಂಭುಕನಂತೆ ಮಾತನಾಡುತ್ತೀಯಾ? ರಾಮಾಯಣದ ಕಥೆ ಹೇಳಿ ಜನರನ್ನು ದಾರಿ ತಪ್ಪಿಸಬೇಡ. ಶಂಭುಕನ ಹತ್ಯೆ ಏಕೆ ಆಯಿತು ಎಂಬುದು ಗೊತ್ತಿದೆಯೇ?” ಎಂದು ನಾಗೇಂದ್ರ ವಿರುದ್ಧ ಹರಿಹಾಯ್ದರು.

‘187 ಕೋಟಿ ಹಗರಣದಲ್ಲಿ ನಾಗೇಂದ್ರ ಇದ್ದಾರೆ’: ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನಾಗೇಂದ್ರ ಅವರ ಪಾತ್ರವಿದೆ ಎಂದು ರೆಡ್ಡಿ ಆರೋಪಿಸಿದರು. “ನಾನು ಈ ಹಗರಣದಲ್ಲಿ ಇಲ್ಲ ಎಂದು ನಾಗೇಂದ್ರ ಹೇಳುತ್ತಿದ್ದಾರೆ. ಆದರೆ ನಾನು ಹೇಳುತ್ತೇನೆ—ಈ ಹಗರಣದಲ್ಲಿ ನೀನು ಇದ್ದೀಯಾ, ಇದ್ದೀಯಾ” ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಇ.ಡಿ. ಮತ್ತು ಸಿಬಿಐ ತನಿಖೆಯ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದ ಅವರು, ನಿಗಮದ ಹಣವನ್ನು ತೆಲಂಗಾಣ, ಗೋವಾ ಹಾಗೂ ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಸಲಾಗಿದೆ ಎಂದು ಆರೋಪಿಸಿದರು. ಮುಂಬೈಗೂ ಹಣ ವರ್ಗಾವಣೆಯಾಗಿದೆ ಎಂದು ಹೇಳಿದರು.

ಮೂವರ ಖಾತೆಗೆ ₹6 ಕೋಟಿಗೂ ಹೆಚ್ಚು?: ನೇಹಾ ಮನ್ಸೂರಿ, ಜಾಹದ್ ಮನ್ಸೂರಿ ಹಾಗೂ ಕಲಾಂ ಶೇಕೂರ್ ಮನ್ಸೂರಿ ಎಂಬ ಮೂವರ ಖಾತೆಗಳಿಗೆ ನಿಗಮದ ಖಾತೆಯಿಂದ ₹6 ಕೋಟಿಗೂ ಅಧಿಕ ಹಣ ವರ್ಗಾವಣೆಯಾಗಿದೆ ಎಂದು ರೆಡ್ಡಿ ಆರೋಪಿಸಿದರು. ಈ ಮೂವರಿಗೂ ನಾಗೇಂದ್ರ ಅವರಿಗೂ ಇರುವ ಸಂಬಂಧವೇನು ಎಂಬುದನ್ನು ನಾಗೇಂದ್ರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಈ ಪ್ರಕರಣದಲ್ಲಿ ನಾಗೇಂದ್ರ ಸೇರಿದಂತೆ 26 ಮಂದಿ ಆರೋಪಿಗಳಿದ್ದಾರೆ. ಐಷಾರಾಮಿ ಕಾರು ಖರೀದಿ ಸೇರಿದಂತೆ ಹಲವು ಅಕ್ರಮಗಳು ತನಿಖೆಯಲ್ಲಿ ಬೆಳಕಿಗೆ ಬಂದಿವೆ ಎಂದರು.

ತುಕಾರಾಂ ಸೇರಿ 10 ಶಾಸಕರಿಗೆ ಸವಾಲು: ವಾಲ್ಮೀಕಿ ನಿಗಮದ ಹಣವನ್ನು ಬಳಸಿ ಸಂಸದ ಇ. ತುಕಾರಾಂ ಗೆದ್ದಿದ್ದಾರೆ ಎಂದು ಜನಾರ್ದನ ರೆಡ್ಡಿ ಆರೋಪಿಸಿದರು. “ವಾಲ್ಮೀಕಿ ನಿಗಮದ ಹಣ ಚುನಾವಣೆಗೆ ಬಳಕೆಯಾಗಿದ್ದರೆ, ತುಕಾರಾಂ ಕೂಡ ರಾಜೀನಾಮೆ ನೀಡಬೇಕಿತ್ತು. ನಾಗೇಂದ್ರ ಅವರಿಗೆ ಹಾಗೂ ಕಾಂಗ್ರೆಸ್‌ಗೆ ತಾಕತ್ತಿದ್ದರೆ ತುಕಾರಾಂ ಸೇರಿ 10 ಶಾಸಕರಿಂದ ರಾಜೀನಾಮೆ ಕೊಡಿಸಲಿ” ಎಂದು ಸವಾಲು ಹಾಕಿದರು.

ಬಳ್ಳಾರಿ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ವಾಲ್ಮೀಕಿ ನಿಗಮದ ಹಣ ಬಳಕೆಯಾಗಿದೆ ಎಂದು ಆರೋಪಿಸಿದ ಅವರು, ಈ ಬಗ್ಗೆ ಜಾರಿ ನಿರ್ದೇಶನಾಲಯದ ತನಿಖೆಯಲ್ಲಿ ಮಾಹಿತಿ ಹೊರಬಂದಿದೆ ಎಂದರು.

‘ನಾಗೇಂದ್ರ ಕಣ್ಣೀರು ನಾಟಕ’: ನಾಗೇಂದ್ರ ಅವರು ರಾಜೀನಾಮೆ ನೀಡುವ ಸಂದರ್ಭದಲ್ಲಿ ಕಣ್ಣೀರು ಹಾಕಿದ್ದನ್ನು ಟೀಕಿಸಿದ ರೆಡ್ಡಿ, “ಕಣ್ಣೀರು ಹಾಕುತ್ತಾ ನಾಟಕ ಮಾಡುತ್ತಿರುವುದನ್ನು ನೋಡಿದ್ದೇನೆ. ನಿನ್ನ ಕಣ್ಣೀರು ಕರ್ಮದ ಕಣ್ಣೀರು. ಈ ನಾಟಕ ನನ್ನ ಮುಂದೆ ನಡೆಯುವುದಿಲ್ಲ” ಎಂದು ವ್ಯಂಗ್ಯವಾಡಿದರು.

“ನಾಗೇಂದ್ರ ಅವರನ್ನು ಚಿಕ್ಕ ಹುಡುಗನಾಗಿದ್ದಾಗಿನಿಂದ ನೋಡಿದ್ದೇನೆ. ಜನಾರ್ದನ ರೆಡ್ಡಿ ಅವರಿಂದಲೇ ನೀನು ಶಾಸಕನಾಗಿದ್ದೆ” ಎಂದು ಹೇಳಿದ ಅವರು, ನಾಗೇಂದ್ರ ಅವರ ರಾಜಕೀಯ ಹಿನ್ನೆಲೆಯನ್ನೂ ಪ್ರಸ್ತಾಪಿಸಿದರು.

‘ಚುನಾವಣೆಗೆ ನಾಳೆಯಿಂದಲೇ ಸಿದ್ಧ’: ರಾಜಕೀಯದಲ್ಲಿ ಸೋಲು–ಗೆಲುವು ಸಾಮಾನ್ಯ. ತಮ್ಮನ್ನು ‘ರಿಜೆಕ್ಟ್ ಪೀಸ್’ ಎಂದು ಟೀಕಿಸಿರುವ ನಾಗೇಂದ್ರ ಅವರ ಹೇಳಿಕೆಗೆ ತಿರುಗೇಟು ನೀಡಿದ ರೆಡ್ಡಿ, “ನೀನು ತಾಕತ್ತಿನ ಬಗ್ಗೆ ಮಾತನಾಡುತ್ತೀಯಾ? ಚುನಾವಣೆಗೆ ನಾವು ನಾಳೆಯಿಂದಲೇ ಸಿದ್ಧರಾಗಿದ್ದೇವೆ” ಎಂದರು.

ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ 10 ಶಾಸಕರಿಂದ ರಾಜೀನಾಮೆ ಕೊಡಿಸಿ ಚುನಾವಣೆ ಎದುರಿಸಲು ಸಿದ್ಧರಾಗಬೇಕು ಎಂದು ಸವಾಲು ಹಾಕಿದರು. ವಾಲ್ಮೀಕಿ ನಿಗಮದ ಪ್ರಕರಣದ ಜೊತೆಗೆ ಬರಪೀಡಿತ ತಾಲೂಕುಗಳ ಘೋಷಣೆ ಸೇರಿದಂತೆ ರಾಜ್ಯದ ಇತರ ವಿಚಾರಗಳನ್ನೂ ಮುಂದಿಟ್ಟುಕೊಂಡು ಹೋರಾಟ ನಡೆಸುವುದಾಗಿ ತಿಳಿಸಿದರು.

ರಾಯಚೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸುವ ಬಗ್ಗೆಯೂ ರೆಡ್ಡಿ ಘೋಷಣೆ ಮಾಡಿದ್ದು, ನಾಗೇಂದ್ರ ರಾಜೀನಾಮೆಯ ಬೆನ್ನಲ್ಲೇ ಬಳ್ಳಾರಿ ರಾಜಕೀಯದಲ್ಲಿ ವಾಲ್ಮೀಕಿ ನಿಗಮದ ಪ್ರಕರಣ ಮತ್ತೊಮ್ಮೆ ಕೇಂದ್ರಬಿಂದುವಾಗಿದೆ.