SK Home Ad
Home ನಮ್ಮ ಜಿಲ್ಲೆ ಬಳ್ಳಾರಿ ಅಕ್ರಮ ಮಣ್ಣು ಸಾಗಾಟ ವಿವಾದ: ಪೊಲೀಸರ ಮೇಲೆಯೇ ದಾಳಿ

ಅಕ್ರಮ ಮಣ್ಣು ಸಾಗಾಟ ವಿವಾದ: ಪೊಲೀಸರ ಮೇಲೆಯೇ ದಾಳಿ

0
102
ಸಾಂದರ್ಭಿಕ ಚಿತ್ರ

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಗ್ರಾಮೀಣ ಹೋಬಳಿಯ ಕೊಳಗಲ್ಲು ಗ್ರಾಮದಲ್ಲಿ ಆರೋಪಿಯನ್ನು ಬಂಧಿಸಲು ತೆರಳಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತೀವ್ರ ಆತಂಕಕ್ಕೆ ಕಾರಣವಾಗಿದೆ. ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಅವರಲ್ಲಿ ಒಬ್ಬರು ಗಂಭೀರ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸುಮಾರು ಒಂದು ತಿಂಗಳ ಹಿಂದೆ ಗ್ರಾಮದ ಕೆರೆಯಿಂದ ಅಕ್ರಮವಾಗಿ ಮಣ್ಣು ಸಾಗಿಸಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಈ ಸಂಬಂಧ ಗ್ರಾಮದ ಹಿರಿಯ ಮುಖಂಡ ಹಾಗೂ ಮಾಜಿ ಅಧ್ಯಕ್ಷ ಹುಲಿಯಪ್ಪ ಅವರು ಅಕ್ರಮ ಚಟುವಟಿಕೆಗಳನ್ನು ವಿರೋಧಿಸಿದ್ದರು. ಸರ್ಕಾರದ ಅನುಮತಿ ಪಡೆದು ಕಾನೂನುಬದ್ಧವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಸೂಚನೆ ನೀಡಿದ್ದರೂ, ಈ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯವು ಹಲ್ಲೆಯ ಮಟ್ಟಕ್ಕೆ ತಲುಪಿತ್ತು. ಆ ವೇಳೆ ಹುಲಿಯಪ್ಪ ಅವರ ಮೇಲೆಯೂ ಮಾರಣಾಂತಿಕ ಹಲ್ಲೆ ನಡೆದಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದರು.

ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಎರಡೂ ಕಡೆಯವರು ಪರಸ್ಪರ ದೂರು ದಾಖಲಿಸಿಕೊಂಡಿದ್ದು, ಪ್ರಕರಣದಲ್ಲಿ ಕೆಲವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣವೂ ದಾಖಲಾಗಿತ್ತು. ತನಿಖೆಯನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸರು ಕೈಗೆತ್ತಿಕೊಂಡಿದ್ದರು.

ಆರೋಪಿಯನ್ನು ಬಂಧಿಸಲು ತೆರಳಿದ್ದ ವೇಳೆ ದಾಳಿ : ಪ್ರಕರಣದ ಪ್ರಮುಖ ಆರೋಪಿ ಅನಿಲ್‌ನನ್ನು ಬಂಧಿಸುವ ಉದ್ದೇಶದಿಂದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಸಿಬ್ಬಂದಿಗಳಾದ ವೀರೇಶ್ ಬಾಬು ಹಾಗೂ ಪಾಂಡು ಗುರುವಾರ ಕೊಳಗಲ್ಲು ಗ್ರಾಮಕ್ಕೆ ತೆರಳಿದ್ದರು. ಆರೋಪಿಯನ್ನು ಮನೆಯಲ್ಲೇ ವಶಕ್ಕೆ ಪಡೆದ ಬಳಿಕ ಠಾಣೆಗೆ ಕರೆತರುವ ಸಿದ್ಧತೆ ನಡೆಸಲಾಗುತ್ತಿತ್ತು.

ಈ ವೇಳೆ ಗ್ರಾಮದ ಭೀಮ ಸೇರಿದಂತೆ ಕೆಲವರು ಮಧ್ಯಪ್ರವೇಶಿಸಿ ಆರೋಪಿಯನ್ನು ತಾವೇ ಠಾಣೆಗೆ ಕರೆತರುವುದಾಗಿ ಪೊಲೀಸರಿಗೆ ಮನವರಿಕೆ ಮಾಡಲು ಯತ್ನಿಸಿದ್ದಾರೆ ಎಂದು ಹೇಳಲಾಗಿದೆ. ಬಳಿಕ ಪೂರ್ವನಿಯೋಜಿತ ಸಂಚಿನಂತೆ ಮಹಿಳೆಯರು ಹಾಗೂ ಪುರುಷರು ಸೇರಿ ಪೊಲೀಸರ ಕಾರ್ಯಾಚರಣೆಗೆ ಅಡ್ಡಿಪಡಿಸಿ ಗಲಾಟೆ ಆರಂಭಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ರಾಡು ಮತ್ತು ದೊಣ್ಣೆಗಳಿಂದ ಹಲ್ಲೆ : ಗಲಾಟೆ ತೀವ್ರ ಸ್ವರೂಪ ಪಡೆದ ಸಂದರ್ಭದಲ್ಲಿ ಪೊಲೀಸ್ ಪೇದೆ ವೀರೇಶ್ ಬಾಬು ಅವರ ಮೇಲೆ ರಾಡು ಹಾಗೂ ದೊಣ್ಣೆಗಳಿಂದ ಹಲ್ಲೆ ನಡೆಸಲಾಗಿದೆ ಎಂದು ದೂರಲಾಗಿದೆ. ಹಲ್ಲೆಯಿಂದ ಅವರ ಕಣ್ಣು ಹಾಗೂ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ಮತ್ತೋರ್ವ ಸಿಬ್ಬಂದಿಗೂ ಗಾಯಗಳಾಗಿದ್ದು, ಗಾಯಾಳುಗಳನ್ನು ತಕ್ಷಣ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ವೈದ್ಯರ ಪ್ರಾಥಮಿಕ ವರದಿ ಪ್ರಕಾರ, ತಲೆಗೆ ಇನ್ನಷ್ಟು ತೀವ್ರ ಹೊಡೆತ ಬಿದ್ದಿದ್ದರೆ ಜೀವಾಪಾಯ ಸಂಭವಿಸುವ ಸಾಧ್ಯತೆ ಇತ್ತು ಎಂದು ತಿಳಿದುಬಂದಿದೆ.

ಹತ್ತು ಮಂದಿಯ ವಿರುದ್ಧ ಪ್ರಕರಣ : ಘಟನೆಗೆ ಸಂಬಂಧಿಸಿದಂತೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸುಮಾರು ಹತ್ತು ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಸರ್ಕಾರಿ ನೌಕರರ ಮೇಲೆ ಹಲ್ಲೆ ನಡೆಸುವುದು ಸೇರಿದಂತೆ ವಿವಿಧ ಆರೋಪಗಳಡಿ ತನಿಖೆ ಮುಂದುವರಿದಿದೆ. ಆರೋಪಿಗಳ ಬಂಧನಕ್ಕಾಗಿ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.

ಸಾರ್ವಜನಿಕರಲ್ಲಿ ಆತಂಕ : ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರ ಮೇಲೆಯೇ ಹಲ್ಲೆ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಅಧಿಕಾರಿಗಳ ಮೇಲೆ ಈ ರೀತಿಯ ದಾಳಿ ನಡೆದರೆ ಸಾಮಾನ್ಯ ನಾಗರಿಕರ ಸುರಕ್ಷತೆಯ ಪ್ರಶ್ನೆ ಉದ್ಭವಿಸುತ್ತದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಅಕ್ರಮ ಮಣ್ಣು ದಂಧೆ ವಿರುದ್ಧ ಕ್ರಮಕ್ಕೆ ಆಗ್ರಹ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಕ್ರಮ ಮರಳು, ಗ್ರಾವೆಲ್, ಕೆರೆ ಮಣ್ಣು ಹಾಗೂ ಜಲ್ಲಿ ಸಾಗಾಟ ಹೆಚ್ಚುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿವೆ. ಕೃಷಿ ಹೊಂಡಗಳ ಹೆಸರಿನಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ ಸರ್ಕಾರದ ಆದಾಯಕ್ಕೆ ನಷ್ಟ ಉಂಟುಮಾಡಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.