SK Home Ad
Home ನಮ್ಮ ಜಿಲ್ಲೆ ಬೆಳಗಾವಿ ಬೆಳಗಾವಿಯಲ್ಲಿ ಎಸ್‌ಡಿಆರ್‌ಎಫ್ CPI ಶ್ರೀಶೈಲ ಚೌಗಲೆ ಆತ್ಮಹತ್ಯೆ

ಬೆಳಗಾವಿಯಲ್ಲಿ ಎಸ್‌ಡಿಆರ್‌ಎಫ್ CPI ಶ್ರೀಶೈಲ ಚೌಗಲೆ ಆತ್ಮಹತ್ಯೆ

0
63

ಬೆಳಗಾವಿ: ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF)ಯ ಸಿಪಿಐ ಶ್ರೀಶೈಲ ಚೌಗಲೆ ಅವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಚನ್ನಮ್ಮ ನಗರದಲ್ಲಿ ಗುರುವಾರ ಬೆಳಕಿಗೆ ಬಂದಿದೆ. ಈ ಘಟನೆ ಪೊಲೀಸ್ ವಲಯದಲ್ಲಿ ಹಾಗೂ ಕುಟುಂಬಸ್ಥರಲ್ಲಿ ತೀವ್ರ ಆಘಾತ ಮೂಡಿಸಿದೆ.

ಮೃತ ಶ್ರೀಶೈಲ ಚೌಗಲೆ (37) ಅವರು ಕರ್ತವ್ಯನಿಷ್ಠ ಹಾಗೂ ಶಿಸ್ತಿನ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ಆದರೆ ಅವರ ಅಕಾಲಿಕ ನಿಧನ ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಬಾಗಿಲು ತೆರೆಯದಿದ್ದರಿಂದ ಅನುಮಾನ : ಮಾಹಿತಿ ಪ್ರಕಾರ, ಚೌಗಲೆ ಅವರು ಮನೆಯ ಕೊಠಡಿಯಲ್ಲಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದರು. ಬಹಳ ಸಮಯವಾದರೂ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಅವರ ಪತ್ನಿಗೆ ಅನುಮಾನ ಮೂಡಿದೆ. ತಕ್ಷಣವೇ ಅವರು SDRF ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಹಾಗೂ ಇತರರು ಕೊಠಡಿಯ ಬಾಗಿಲು ಮುರಿದು ಒಳಗೆ ಪ್ರವೇಶಿಸಿದ್ದಾರೆ.

ಆಸ್ಪತ್ರೆಗೆ ಸಾಗಿಸಿದರೂ ಬದುಕಲಿಲ್ಲ : ಕೊಠಡಿಯೊಳಗೆ ಚೌಗಲೆ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಚೌಗಲೆ ಅವರು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ವೈಯಕ್ತಿಕ ಅಥವಾ ವೃತ್ತಿಪರ ಕಾರಣಗಳ ಹಿನ್ನೆಲೆ ಇದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿಯ ಪರೀಕ್ಷೆಗಾಗಿ ಬಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಪೊಲೀಸ್ ತನಿಖೆ ಆರಂಭ : ಘಟನೆ ಕುರಿತು ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ. ಕುಟುಂಬಸ್ಥರು, ಸಹೋದ್ಯೋಗಿಗಳು ಹಾಗೂ ಆಪ್ತರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಕರ್ತವ್ಯನಿಷ್ಠ ಹಾಗೂ ಮೃದುಸ್ವಭಾವದ ಅಧಿಕಾರಿಯಾಗಿದ್ದ ಶ್ರೀಶೈಲ ಚೌಗಲೆ ಅವರ ಸಾವಿನಿಂದ SDRF ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆಯ ಸಹೋದ್ಯೋಗಿಗಳಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಆತ್ಮಹತ್ಯೆಗೆ ನಿಜವಾದ ಕಾರಣವೇನು ಎಂಬುದು ಮುಂದಿನ ಪೊಲೀಸ್ ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.

ಸೂಚನೆ: ಮಾನಸಿಕ ಒತ್ತಡ ಅಥವಾ ಸಂಕಷ್ಟದಲ್ಲಿರುವವರು ಸಹಾಯ ಪಡೆಯುವುದು ಅತ್ಯಂತ ಅಗತ್ಯ. ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಲ್ಲ. ಅಗತ್ಯವಿದ್ದಲ್ಲಿ ಸ್ಥಳೀಯ ಸಹಾಯವಾಣಿ ಅಥವಾ ವಿಶ್ವಾಸಾರ್ಹ ವ್ಯಕ್ತಿಗಳ ನೆರವು ಪಡೆಯಲು ಮನವಿ.