SK Home Ad
Home ಸುದ್ದಿ ದೇಶ ತಿಮ್ಮಪ್ಪನ ಸನ್ನಿಧಿಗೆ ಚಿನ್ನದ ಕಾಣಿಕೆ: ದಂಪತಿಯ ಪುಣ್ಯಕಾರ್ಯಕ್ಕೆ ಚಂದ್ರಬಾಬು ನಾಯ್ಡು ಮೆಚ್ಚುಗೆ

ತಿಮ್ಮಪ್ಪನ ಸನ್ನಿಧಿಗೆ ಚಿನ್ನದ ಕಾಣಿಕೆ: ದಂಪತಿಯ ಪುಣ್ಯಕಾರ್ಯಕ್ಕೆ ಚಂದ್ರಬಾಬು ನಾಯ್ಡು ಮೆಚ್ಚುಗೆ

0
2

ತಿರುಪತಿ: ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಗೆ ಚೆನ್ನೈ ಮೂಲದ ಉದ್ಯಮಿ ವರ್ಧಮಾನ್ ಜೈನ್ ಮತ್ತು ಅವರ ಪತ್ನಿ ರಾಧಿಕಾ ಜೈನ್ ಅವರು 206 ಕೋಟಿ ರೂ. ಮೌಲ್ಯದ 121 ಕೆ.ಜಿ. ಚಿನ್ನಾಭರಣಗಳನ್ನು ಸಮರ್ಪಿಸಿರುವುದಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂತಹ ಪುಣ್ಯ ಕಾರ್ಯದಲ್ಲಿ ಭಾಗಿಯಾಗಿರುವುದು ತಮ್ಮ ಸೌಭಾಗ್ಯ ಎಂದು ಹೇಳಿದರು. ತಿರುಮಲೆ ಭಕ್ತಿ, ನಂಬಿಕೆ ಮತ್ತು ಆಧ್ಯಾತ್ಮಿಕ ಆನಂದದ ಪವಿತ್ರ ತಾಣವಾಗಿದ್ದು, ಇಂತಹ ದೈವಿಕ ಅನುಭವ ಬೇರೆಲ್ಲಿಯೂ ಸಿಗುವುದಿಲ್ಲ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಆಭರಣಗಳನ್ನು ಸಮರ್ಪಿಸಿರುವುದು ವಿಶೇಷ ಮತ್ತು ಐತಿಹಾಸಿಕ ಘಟನೆ ಎಂದು ಬಣ್ಣಿಸಿದರು.

ಶ್ರೀ ವೆಂಕಟೇಶ್ವರ ಸ್ವಾಮಿಗೆ ಪ್ರತಿದಿನ ಸುಮಾರು 120 ಕೆ.ಜಿ. ಚಿನ್ನಾಭರಣಗಳಿಂದ ಅಲಂಕಾರ ಮಾಡಲಾಗುತ್ತದೆ. ಶತಮಾನಗಳಿಂದಲೂ ಭಕ್ತರಲ್ಲಿ ಸ್ವಾಮಿಯ ಮೇಲಿನ ಭಕ್ತಿ ಮತ್ತು ನಂಬಿಕೆ ಹೆಚ್ಚುತ್ತಲೇ ಬಂದಿದೆ. ಶ್ರೀಕೃಷ್ಣದೇವರಾಯರ ಕಾಲದಿಂದ ಇಂದಿನವರೆಗೂ ಹಲವು ರಾಜಮನೆತನಗಳು ದೇವಾಲಯದ ಅಭಿವೃದ್ಧಿಗೆ ಕೊಡುಗೆ ನೀಡಿವೆ ಎಂದು ಸ್ಮರಿಸಿದರು.

ಪಲ್ಲವ, ಚೋಳ, ಚೇರ ಮತ್ತು ಪಾಂಡ್ಯ ರಾಜವಂಶಗಳು ದೇವಾಲಯದ ಅಭಿವೃದ್ಧಿಗೆ ನೆರವಾಗಿದ್ದರೆ, ಮೈಸೂರು ಮತ್ತು ಮರಾಠ ಅರಸರು ಆಭರಣ, ಉಡುಗೊರೆ ಹಾಗೂ ಆಸ್ತಿಗಳನ್ನು ಸಮರ್ಪಿಸಿದ್ದರು. ವಿಜಯನಗರ ಸಾಮ್ರಾಜ್ಯದ ಅರಸ ಶ್ರೀಕೃಷ್ಣದೇವರಾಯರು ಹಲವು ಬಾರಿ ತಿರುಮಲಕ್ಕೆ ಭೇಟಿ ನೀಡಿ ಅಮೂಲ್ಯ ಆಭರಣಗಳನ್ನು ಅರ್ಪಿಸಿದ್ದರು. ಅವರು ನೀಡಿದ್ದ ರತ್ನಕಿರೀಟ ಮತ್ತು ಪೀತಾಂಬರಕ್ಕೆ ಇಂದಿಗೂ ಐತಿಹಾಸಿಕ ಮಹತ್ವವಿದೆ ಎಂದು ತಿಳಿಸಿದರು.

ಹಿಂದೆ ದೇಶದ ಹಲವು ದೇವಾಲಯಗಳ ಮೇಲೆ ದಾಳಿಗಳು ನಡೆದಿದ್ದರೂ, ತಿರುಮಲದ ಶ್ರೀ ವೆಂಕಟೇಶ್ವರ ದೇವಾಲಯ ಇಂತಹ ಪ್ರಯತ್ನಗಳಿಂದ ದೂರ ಉಳಿದಿದೆ. ಕಾಲಕಾಲಕ್ಕೆ ಅನೇಕರು ದೇವಾಲಯದ ಪರಂಪರೆ ಮತ್ತು ಭಕ್ತರ ನಂಬಿಕೆಯನ್ನು ಮತ್ತಷ್ಟು ಬಲಪಡಿಸುವ ಕಾರ್ಯ ಮಾಡಿದ್ದಾರೆ ಎಂದು ಚಂದ್ರಬಾಬು ನಾಯ್ಡು ಹೇಳಿದರು.