SK Home Ad
Home ವಿಶೇಷ ಸುದ್ದಿ ತ್ಯಾಗ ಬಲಿದಾನದ ಸಂಕೇತ ಈದ್-ಉಲ್-ಅಧಾ

ತ್ಯಾಗ ಬಲಿದಾನದ ಸಂಕೇತ ಈದ್-ಉಲ್-ಅಧಾ

0
1

ಬಕ್ರೀದ್ ಇಸ್ಲಾಂ ಧರ್ಮದ ಅತ್ಯಂತ ಪವಿತ್ರವಾದ ತ್ಯಾಗ ಮತ್ತು ಬಲಿದಾನದ ಹಬ್ಬ. ಪ್ರತಿ ವರ್ಷ ಇಸ್ಲಾಮಿಕ್ ಕ್ಯಾಲೆಂಡರನ್ನ ಕೊನೆಯ ತಿಂಗಳ ಜು-ಅಲ್-ಹಿಜ್ನಲ್ಲಿ ಆಚರಿಸಲಾಗುತ್ತದೆ. ಇದನ್ನು ಈದ್-ಉಲ್-ಅಧಾ ಹಾಗೂ ಬಕ್ರೀದ್ ಎಂದೂ ಕರೆಯುತ್ತಾರೆ. ಬಕ್ರೀದ್ ಹಬ್ಬವು ತ್ಯಾಗದ ಸಂದೇಶವನ್ನು ನೀಡುತ್ತದೆ. ಅಂದರೆ ದೇವರು ತೋರಿಸಿದ ದಾರಿಯಲ್ಲಿ ನಡೆಯಬೇಕು ಎಂಬುದನ್ನು ಸೂಚಿಸುತ್ತದೆ. ಬಕ್ರೀದ್ ಹಬ್ಬದ ಆಚರಣೆಯನ್ನು ಚಂದ್ರನ ದರ್ಶನದಿಂದ ನಿರ್ಧರಿಸಲಾಗುತ್ತದೆ.

ಹಜರತ್ ಇಬ್ರಾಹಿಂ ದೇವರ ಸೇವಕರಾಗಿದ್ದರು, ಅವರು ದೇವರಲ್ಲಿ ಸಂಪೂರ್ಣ ನಂಬಿಕೆ ಹೊಂದಿದ್ದರು. ಒಮ್ಮೆ ಹಜರತ್ ಇಬ್ರಾಹಿಂ ತನ್ನ ಪ್ರಾಣಕ್ಕಿಂತ ಪ್ರೀತಿಯ ಒಬ್ಬನೇ ಮಗನನ್ನು ತ್ಯಾಗ ಮಾಡುವ ಕನಸು ಕಂಡರು. ಹಜರತ್ ಇಬ್ರಾಹಿಂ ಈ ಕನಸನ್ನು ದೇವರ ಸಂದೇಶವೆಂದು ಪರಿಗಣಿಸಿ, ಈ ಕನಸನ್ನು ಅಲ್ಲಾಹನ ಇಚ್ಛೆಯಂತೆ ಸ್ವೀಕರಿಸಿ, ದೇವರ ಮಾರ್ಗದಲ್ಲಿ ತನ್ನ 10 ವರ್ಷದ ಮಗನನ್ನು ಬಲಿಕೊಡಲು ನಿರ್ಧರಿಸಿದನು. ಅವರ ದೇವನಿಷ್ಠೆಯನ್ನು ಮೆಚ್ಚಿದ ದೇವರು ಆ ಬಲಿಯನ್ನು ತಡೆದು, ಆ ಜಾಗದಲ್ಲಿ ಕುರಿಯೊಂದನ್ನು ಬಲಿ ಕೊಡುವಂತೆ ತಿಳಿಸುತ್ತಾನೆ. ಈ ಘಟನೆಯ ಸ್ಮರಣಾರ್ಥವಾಗಿ ಪ್ರತಿ ವರ್ಷ ಬಕ್ರೀದ್ ಆಚರಿಸಲಾಗುತ್ತದೆ. ಹಬ್ಬದ ದಿನ ಮುಂಜಾನೆ ಮುಸ್ಲಿಮರು ಹೊಸ ಬಟ್ಟೆಗಳನ್ನು ಧರಿಸಿ, ಮಸೀದಿ ಅಥವಾ ಈದ್ಗಾಗಳಿಗೆ ತೆರಳಿ ವಿಶೇಷ ಪ್ರಾರ್ಥನೆ (ನಮಾಜ್) ಸಲ್ಲಿಸುತ್ತಾರೆ. ಪ್ರಾರ್ಥನೆಯ ನಂತರ, ಆರ್ಥಿಕವಾಗಿ ಶಕ್ತರಾದವರು ಕುರಿ, ಮೇಕೆ ಅಥವಾ ಒಂಟೆಯನ್ನು ಬಲಿ (ಕುರ್ಬಾನಿ) ನೀಡುತ್ತಾರೆ.

ಬಲಿ ನೀಡಿದ ಮಾಂಸವನ್ನು ಮೂರು ಸಮಾನ ಭಾಗಗಳಾಗಿ ವಿಂಗಡಿಸಲಾಗುತ್ತದೆ. ಒಂದು ಭಾಗವನ್ನು ತಮ್ಮ ಕುಟುಂಬಕ್ಕೆ, ಎರಡನೆಯ ಭಾಗವನ್ನು ಸಂಬಂಧಿಕರಿಗೆ ಮತ್ತು ಮೂರನೆಯ ಭಾಗವನ್ನು ಬಡವರು ಹಾಗೂ ನಿರ್ಗತಿಕರಿಗೆ ಹಂಚಲಾಗುತ್ತದೆ.

ಹಬ್ಬದ ಮಹತ್ವ: ಬಕ್ರೀದ್ ಕೇವಲ ಪ್ರಾಣಿ ಬಲಿ ನೀಡುವುದಕ್ಕೆ ಸೀಮಿತವಾಗಿಲ್ಲ. ಬದಲಿಗೆ, ಇದು ಸ್ವಾರ್ಥವನ್ನು ತ್ಯಜಿಸುವುದು, ದೀನ-ದಲಿತರಿಗೆ ಸಹಾಯ ಮಾಡುವುದು ಮತ್ತು ದೇವರ ಆಜ್ಞೆಗೆ ಸಂಪೂರ್ಣವಾಗಿ ಶರಣಾಗುವುದನ್ನು ಸಂಕೇತಿಸುತ್ತದೆ. ಈ ಹಬ್ಬವು ಮಾನವೀಯತೆ, ಸೌಹಾರ್ದತೆ ಮತ್ತು ಪರಸ್ಪರ ಪ್ರೀತಿಯನ್ನು ಉತ್ತೇಜಿಸುತ್ತದೆ.