ಬೆಳಗಾವಿ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಯುವಕನ ಶವ ಪತ್ತೆಯಾದ ಪ್ರಕರಣವನ್ನು ಮಾಳಮಾರುತಿ ಠಾಣೆ ಪೊಲೀಸರು ಭೇದಿಸಿದ್ದಾರೆ. ಮೃತರು ಬೆಂಗಳೂರಿನ ವಿಜಯ ನಾರಾಯಣ್ ಎಂದು ಗುರುತಿಸಲಾಗಿದೆ. ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ಅವರ ತಾಯಿ ಮೀನಾ ನಾರಾಯಣ್ ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರಕಾಶ್ ನಿಕ್ಕಂ ಸೋಮವಾರ ತಿಳಿಸಿದರು.
ಮೀನಾ ಅವರ ಕಾರು ಚಾಲಕ, ಮಹಾರಾಷ್ಟ್ರದ ಇಚಲಕರಂಜಿ ಮೂಲದ ರಾಕೇಶ್ ಜಾಮೂನಿ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ. ಕೊಲೆಗೆ ಸಹಕರಿಸಿದ ಆರೋಪದ ಮೇಲೆ ಇಚಲಕರಂಜಿಯ ಇತರ ಐವರನ್ನೂ ಬಂಧಿಸಲಾಗಿದೆ. ಎಲ್ಲ ಏಳು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಆಯುಕ್ತರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೆಎಲ್ಇ ಆಸ್ಪತ್ರೆಯಿಂದ ಮುಂದೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ವಿಜಯ ಅವರ ಶವ ಪತ್ತೆಯಾಗಿತ್ತು. ಕುತ್ತಿಗೆಯ ಮೇಲೆ ಬಿಗಿದ ಗುರುತು ಕಂಡ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಮೈಮೇಲಿನ ಗುರುತುಗಳು ಮತ್ತು ಮೊಬೈಲ್ ದಾಖಲೆಗಳ ಆಧಾರದಲ್ಲಿ ತನಿಖೆ ಮುಂದುವರಿಸಿದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದರು.
ರಾಕೇಶ್ ಜತೆಗಿನ ಮೀನಾ ಅವರ ಸಂಬಂಧಕ್ಕೆ ವಿಜಯ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಈ ವಿಚಾರವಾಗಿ ಮನೆಯಲ್ಲಿ ಪದೇಪದೇ ಜಗಳ ನಡೆಯುತ್ತಿತ್ತು. ಇದೇ ಹಿನ್ನೆಲೆಯಲ್ಲಿ ಮಗನ ಕೊಲೆಗೆ ಮೀನಾ ಸಂಚು ರೂಪಿಸಿದ್ದರು ಎಂದು ಪೊಲೀಸರ ಹೇಳಿದ್ದಾರೆ.
ಊರಿಗೆ ಹೋಗೋಣವೆಂದು ವಿಜಯ ಅವರನ್ನು ಬೆಳಗಾವಿಗೆ ಕರೆತರಲಾಗಿತ್ತು. ನವೆಂಬರ್ 1ರಂದು ರಾಜ್ಯೋತ್ಸವದ ವೇಳೆ ನಿದ್ರೆ ಮಾತ್ರೆ ಬೆರೆಸಿದ ತಂಪು ಪಾನೀಯವನ್ನು ಅವರಿಗೆ ಕುಡಿಸಲಾಗಿತ್ತು. ವಿಜಯ ನಿದ್ರೆಗೆ ಜಾರಿದ ಬಳಿಕ ರಾಕೇಶ್ ಶಾಲಿನಿಂದ ಕತ್ತು ಬಿಗಿದು ಕೊಲೆ ಮಾಡಿದ್ದಾನೆ. ಉಳಿದ ಐವರು ಕೃತ್ಯಕ್ಕೆ ಸಹಕರಿಸಿದ್ದಾರೆ. ಬಳಿಕ ಆರೋಪಿಗಳು ಶವವನ್ನು ಹೆದ್ದಾರಿ ಪಕ್ಕದಲ್ಲಿ ಎಸೆದು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದರು ಎಂದು ಪೊಲೀಸ್ ಆಯುಕ್ತರಾದ ಪ್ರಕಾಶ ನಿಕ್ಕಂ ತಿಳಿಸಿದ್ದಾರೆ.






















