Home Advertisement
Home ನಮ್ಮ ಜಿಲ್ಲೆ ಬೆಳಗಾವಿ SSLC 2026: ಅಥಣಿಯ ಪ್ರಾರ್ಥನಾ 625/625 – ರಾಜ್ಯ ಟಾಪರ್!

SSLC 2026: ಅಥಣಿಯ ಪ್ರಾರ್ಥನಾ 625/625 – ರಾಜ್ಯ ಟಾಪರ್!

0
131

ಬೆಳಗಾವಿ: 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಟಗೇರಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ನಾಗಪ್ಪ ಬಿರಾದರ್ ಪಾಟೀಲ್ ಅಪೂರ್ವ ಸಾಧನೆ ಮಾಡಿದ್ದಾರೆ. ಅವರು 625ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯ ಮಟ್ಟದಲ್ಲಿ ಟಾಪರ್ ಸ್ಥಾನ ಪಡೆದಿದ್ದಾರೆ.

ಗ್ರಾಮೀಣ ಪ್ರದೇಶದಿಂದ ರಾಜ್ಯ ಮಟ್ಟದ ಸಾಧನೆ : ಅಪ್ಪಟ ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಪ್ರಾರ್ಥನಾ ಈ ಸಾಧನೆ ಮೂಲಕ ಬೆಳಗಾವಿ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ಎಲ್ಲಾ ವಿಷಯಗಳಲ್ಲಿ ಶೇ.100 ಅಂಕಗಳನ್ನು ಪಡೆದು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.

ಕುಟುಂಬದ ಬೆಂಬಲ : ಪ್ರಾರ್ಥನಾ ಅವರ ತಂದೆ ನಾಗಪ್ಪ ಅವರು ಅದೇ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಾಯಿ ವಿನೋದಾ ಗೃಹಿಣಿಯಾಗಿದ್ದು, ಕುಟುಂಬದ ಬೆಂಬಲವೇ ಈ ಸಾಧನೆಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗಿದೆ.

ಜಿಲ್ಲೆಯ ಫಲಿತಾಂಶ – ಗಮನಾರ್ಹ ಏರಿಕೆ : ಪ್ರಸಕ್ತ ವರ್ಷ ಬೆಳಗಾವಿ ಶೈಕ್ಷಣಿಕ ಜಿಲ್ಲೆಗೆ ಶೇ.94.75ರಷ್ಟು ಫಲಿತಾಂಶ ದೊರೆತಿದ್ದು, ರಾಜ್ಯದಲ್ಲಿ 18ನೇ ಸ್ಥಾನ ಪಡೆದಿದೆ. ಕಳೆದ ವರ್ಷ ಶೇ.80.48ರಷ್ಟು ಫಲಿತಾಂಶವಿದ್ದು, ಈ ಬಾರಿ ಶೇ.14.27ರಷ್ಟು ಹೆಚ್ಚಳ ಕಂಡುಬಂದಿದೆ. ಇದೇ ರೀತಿ ಚಿಕ್ಕೋಡಿ ಶಿಕ್ಷಣ ಜಿಲ್ಲೆ ಶೇ.94.04 ಫಲಿತಾಂಶದೊಂದಿಗೆ 23ನೇ ಸ್ಥಾನ ಪಡೆದಿದ್ದು, ಕಳೆದ ವರ್ಷದಿಗಿಂತ ಶೇ.14.15ರಷ್ಟು ಏರಿಕೆ ಕಂಡಿದೆ.

ಸಂಭ್ರಮದ ವಾತಾವರಣ : ಫಲಿತಾಂಶ ಪ್ರಕಟವಾದ ನಂತರ ಶಾಲೆ ಮತ್ತು ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಶಿಕ್ಷಕರು, ಪೋಷಕರು ಮತ್ತು ಗ್ರಾಮಸ್ಥರು ಪ್ರಾರ್ಥನಾ ಸಾಧನೆಯನ್ನು ಶ್ಲಾಘಿಸಿದ್ದಾರೆ.

ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ ವಿಶೇಷವಾಗಿ ಗಮನ ಸೆಳೆಯುತ್ತಿದ್ದು, ಪ್ರಾರ್ಥನಾ ಸೇರಿದಂತೆ ಹಲವರು ರಾಜ್ಯ ಮಟ್ಟದಲ್ಲಿ ಅಗ್ರ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.