ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರು ಕಾತುರದಿಂದ ಕಾಯುತ್ತಿದ್ದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಹಲವು ಹೊಸ ದಾಖಲೆಗಳನ್ನು ನಿರ್ಮಿಸಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದಂತೆ, ಈ ಬಾರಿ ಏಳು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಪೂರ್ಣ ಅಂಕ ಗಳಿಸಿದ ಟಾಪರ್‌ಗಳು: ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಈ ಬಾರಿ ಅಗ್ರಸ್ಥಾನವನ್ನು ಹಂಚಿಕೊಂಡಿದ್ದಾರೆ: ದಾವಣಗೆರೆಯ ಭರತ್,ರಾಯಚೂರಿನ ಸುಖದೇವ್, ಚಿಕ್ಕೋಡಿ – ಪ್ರಾರ್ಥನಾ, ಚಿಕ್ಕಮಗಳೂರು – ಬೃಂದಾ, ಉಡುಪಿ – ಪ್ರೀತಂ, ವಿಜಯಪುರ – ಸೌಜನ್ಯ, ಬೆಂಗಳೂರು ಉತ್ತರ – ಧನುಷ್
SSLC 2026 ಫಲಿತಾಂಶದ ಟಾಪ್ 5 ಜಿಲ್ಲೆಗಳು: ಈ ಬಾರಿ ಫಲಿತಾಂಶದಲ್ಲಿ ಕರಾವಳಿ ಮತ್ತು ಮಧ್ಯ ಕರ್ನಾಟಕ ಜಿಲ್ಲೆಗಳು ಮೇಲುಗೈ ಸಾಧಿಸಿವೆ. ದಕ್ಷಿಣ ಕನ್ನಡ – 98.40%, ಉಡುಪಿ – 98.18%, ಉತ್ತರ ಕನ್ನಡ – 98.02%, ಹಾಸನ – 97.51%, ಮಂಡ್ಯ – 97.40%
ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ: ಈ ಬಾರಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಗರ ವಿದ್ಯಾರ್ಥಿಗಳನ್ನು ಮೀರಿಸಿ ಸಾಧನೆ ಮಾಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ.92ರಷ್ಟು ಫಲಿತಾಂಶ ದಾಖಲಾಗಿದ್ದು, ಇದು ಗಮನಾರ್ಹ ಬೆಳವಣಿಗೆಯಾಗಿದೆ.
ಕಲ್ಯಾಣ ಕರ್ನಾಟಕದಲ್ಲಿ ಪ್ರಗತಿ: ಕಲ್ಯಾಣ ಕರ್ನಾಟಕ ಭಾಗದಲ್ಲೂ ಉತ್ತಮ ಫಲಿತಾಂಶ ಕಂಡುಬಂದಿದ್ದು, ಶೇ.91ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಶೇಷವಾಗಿ ಬಾಲಕರು ಉತ್ತಮ ಸಾಧನೆ ಮಾಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಈ ಬಾರಿ SSLC ಫಲಿತಾಂಶವು ಕೇವಲ ಉತ್ತೀರ್ಣ ಪ್ರಮಾಣದಲ್ಲಷ್ಟೇ ಅಲ್ಲ, ಗುಣಮಟ್ಟದಲ್ಲಿಯೂ ಹೊಸ ಮಟ್ಟವನ್ನು ತಲುಪಿದೆ. ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ನಡೆದ ಸುಧಾರಣೆಗಳು ಮತ್ತು ವಿದ್ಯಾರ್ಥಿಗಳ ಶ್ರಮಕ್ಕೆ ಇದು ಸಾಕ್ಷಿಯಾಗಿದೆ.






















