ಬೆಳಗಾವಿ: ನಗರದ ವಂಟಮುರಿ ಕಾಲನಿಯಲ್ಲಿ ಮದುವೆ ಸಿದ್ಧತೆ ನಡೆಯುತ್ತಿದ್ದ ಸಂದರ್ಭದಲ್ಲೇ ಜಾಗರೂಕ ಪೊಲೀಸ್ ಸಿಬ್ಬಂದಿ ತಕ್ಷಣ ಕ್ರಮ ಕೈಗೊಂಡು ಬಾಲ್ಯವಿವಾಹವನ್ನು ತಡೆದ ಘಟನೆ ಬೆಳಕಿಗೆ ಬಂದಿದೆ. ಅಕ್ಕ ಪಡೆ ಪೆಟ್ರೋಲಿಂಗ್ ವೇಳೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ, 17 ವರ್ಷದ ಬಾಲಕಿಯ ಮದುವೆ ನಡೆಯಲು ಸಿದ್ಧತೆ ನಡೆದಿರುವುದು ಪತ್ತೆಯಾಗಿದೆ.
ಘಟನೆಯ ವಿವರಗಳ ಪ್ರಕಾರ, ಏಪ್ರಿಲ್ 20ರಂದು ಗಸ್ತು ತಿರುಗುತ್ತಿದ್ದ ಅಕ್ಕ ಪಡೆಯ ಸಿಬ್ಬಂದಿ, ಒಂದು ಮನೆಯ ಮುಂದೆ ಮಂಟಪ ಹಾಕಿರುವುದನ್ನು ಗಮನಿಸಿದರು. ಅನುಮಾನಗೊಂಡು ಮನೆಗೆ ತೆರಳಿ ವಿಚಾರಿಸಿದಾಗ, ಏಪ್ರಿಲ್ 21ರಂದು ಅಪ್ರಾಪ್ತ ಬಾಲಕಿಯ ಮದುವೆಯನ್ನು ಮಹಾರಾಷ್ಟ್ರದ ಪೂಣೆಯ ಯುವಕನೊಂದಿಗೆ ನಡೆಸಲು ಸಿದ್ಧತೆ ನಡೆಯುತ್ತಿರುವುದು ತಿಳಿದುಬಂದಿದೆ.
ದಾಖಲೆ ಪರಿಶೀಲನೆ – ನಿಜಾಂಶ ಬಹಿರಂಗ : ಪೊಲೀಸರು ಬಾಲಕಿಯ ಆಧಾರ್ ಕಾರ್ಡ್ ಹಾಗೂ ಜನನ ಪ್ರಮಾಣಪತ್ರ ಪರಿಶೀಲಿಸಿದಾಗ, ಆಕೆಗೆ ಕೇವಲ 17 ವರ್ಷ 4 ತಿಂಗಳು ವಯಸ್ಸು ಇರುವುದಾಗಿ ದೃಢಪಟ್ಟಿತು. ತಕ್ಷಣವೇ ವಿಷಯವನ್ನು ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ತಿಳಿಸಲಾಯಿತು.
ತ್ವರಿತ ಕಾರ್ಯಾಚರಣೆ: ಮಹಿಳಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ದಿಲೀಪ್ ಪಿ. ನಿಂಬಾಳಕರ ಅವರ ಮಾರ್ಗದರ್ಶನದಲ್ಲಿ ಅಕ್ಕ ಪಡೆ, ಮಕ್ಕಳ ಸಹಾಯವಾಣಿ ತಂಡ ಹಾಗೂ ಮಾಳಮಾರುತಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಮದುವೆಯನ್ನು ತಡೆದು ಬಾಲಕಿಯನ್ನು ರಕ್ಷಿಸಿ, ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಯಿತು.
ಪ್ರಕರಣ ದಾಖಲು : ಬಾಲ್ಯವಿವಾಹ ನಡೆಸಲು ಮುಂದಾಗಿದ್ದ ಬಾಲಕಿಯ ತಂದೆಯ ವಿರುದ್ಧ ಬೆಳಗಾವಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.






















