ಮೈಸೂರು: ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಅಭಿನಯದ ‘ಅಯೋಗ್ಯ 2’ ಚಿತ್ರವು ಚಿತ್ರಮಂದಿರಗಳಲ್ಲಿ 50 ದಿನಗಳ ಪ್ರದರ್ಶನವನ್ನು ಪೂರ್ಣಗೊಳಿಸಿದ್ದು, ಈ ಸಂಭ್ರಮವನ್ನು ಚಿತ್ರತಂಡ ಪ್ರೇಕ್ಷಕರು ಹಾಗೂ ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ.
ಭರ್ಜರಿ ಓಪನಿಂಗ್ ಪಡೆದುಕೊಂಡು ಬಾಕ್ಸಾಫೀಸ್ನಲ್ಲಿ ಸದ್ದು ಮಾಡಿದ್ದ ‘ಅಯೋಗ್ಯ 2’, ಬಿಡುಗಡೆಯ ಬಳಿಕ ಕರ್ನಾಟಕದ ಸುಮಾರು 25ಕ್ಕೂ ಅಧಿಕ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್ಗಳಲ್ಲಿ ಪ್ರದರ್ಶನ ಕಂಡಿದೆ. ಪ್ರಸ್ತುತ ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಸೆಳೆಯುವುದು ಸವಾಲಾಗಿರುವ ಸಂದರ್ಭದಲ್ಲಿ, ಸಿನಿಮಾ 50 ದಿನಗಳ ಪ್ರದರ್ಶನ ಪೂರ್ಣಗೊಳಿಸಿರುವುದು ಚಿತ್ರತಂಡದ ಸಂಭ್ರಮಕ್ಕೆ ಕಾರಣವಾಗಿದೆ.
ಚಿತ್ರವು 50 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಮೈಸೂರಿನ ಲಿಡೋ ಚಿತ್ರಮಂದಿರದಲ್ಲಿ ವಿಶೇಷ ಸಂಭ್ರಮಾಚರಣೆ ನಡೆಯಿತು. ನಟ ಸತೀಶ್ ನೀನಾಸಂ, ನಿರ್ದೇಶಕ ಮಹೇಶ್ ಕುಮಾರ್ ಸೇರಿದಂತೆ ಚಿತ್ರತಂಡದ ಸದಸ್ಯರು ಪ್ರೇಕ್ಷಕರು ಹಾಗೂ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸತೀಶ್ ನೀನಾಸಂ, ಇಂದಿನ ಪರಿಸ್ಥಿತಿಯಲ್ಲಿ ಒಂದು ಅಥವಾ ಎರಡು ವಾರಗಳ ಕಾಲ ಚಿತ್ರಮಂದಿರಗಳಲ್ಲಿ ಸಿನಿಮಾ ಉಳಿಯುವುದೇ ದೊಡ್ಡ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ‘ಅಯೋಗ್ಯ 2’ ಚಿತ್ರಕ್ಕೆ 50 ದಿನಗಳ ಪ್ರದರ್ಶನ ದೊರೆಯಲು ಕಾರಣರಾದ ಪ್ರೇಕ್ಷಕರು, ಅಭಿಮಾನಿಗಳು, ಚಿತ್ರಮಂದಿರ ಮಾಲೀಕರು ಹಾಗೂ ಚಿತ್ರತಂಡದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸಿದರು.
ಇದೇ ವೇಳೆ, ‘ಅಯೋಗ್ಯ-3’ ಮೂಲಕ ಆದಷ್ಟು ಬೇಗ ಪ್ರೇಕ್ಷಕರ ಮುಂದೆ ಬರುವ ಆಲೋಚನೆ ಇದೆ ಎಂದು ಸತೀಶ್ ನೀನಾಸಂ ಹೇಳಿರುವುದು ಚಿತ್ರದ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಇದರಿಂದ ‘ಅಯೋಗ್ಯ’ ಸರಣಿಯ ಮುಂದಿನ ಚಿತ್ರದ ಕುರಿತು ಚರ್ಚೆ ಆರಂಭವಾಗಿದೆ.
ಎಸ್.ವಿ.ಸಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಎಂ. ಮುನೇಗೌಡ ನಿರ್ಮಿಸಿರುವ ‘ಅಯೋಗ್ಯ 2’ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ರವಿಚಂದ್ರನ್, ರವಿಶಂಕರ್, ಸಾಧುಕೋಕಿಲ, ಶಿವರಾಜ್ ಕೆ.ಆರ್. ಪೇಟೆ, ಅರುಣಾ ಬಾಲರಾಜ್, ಗಿರಿ ಶಿವಣ್ಣ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
50 ದಿನಗಳ ಪ್ರದರ್ಶನದ ಮೂಲಕ ‘ಅಯೋಗ್ಯ 2’ ತಂಡ ಇದೀಗ ಮುಂದಿನ ಹಂತದತ್ತ ಗಮನ ಹರಿಸಿದ್ದು, ಸತೀಶ್ ನೀನಾಸಂ ಅವರ ‘ಅಯೋಗ್ಯ-3’ ಹೇಳಿಕೆ ಮುಂದಿನ ದಿನಗಳಲ್ಲಿ ಅಧಿಕೃತ ಘೋಷಣೆಯಾಗುತ್ತದೆಯೇ ಎಂಬ ಕುತೂಹಲವನ್ನು ಹುಟ್ಟುಹಾಕಿದೆ.
ಪ್ರತಿ ಹೊಸ ಅಪ್ಡೇಟ್ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್ಡೇಟ್ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.





















