ಬೆಂಗಳೂರು: ತೋಟಗಾರಿಕೆ ಇಲಾಖೆ, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಸಂಯುಕ್ತಾಶ್ರಯದಲ್ಲಿ ಮೇ. 8ರಿಂದ 17ರವರೆಗೆ ನಗರದ ಕಬ್ಬನ್ ಪಾರ್ಕ್‌ನಲ್ಲಿ ಮಾವು ಮತ್ತು ಹಲಸು ಪ್ರದರ್ಶನ ಹಾಗೂ ಮಾರಟ ಮೇಳವನ್ನು ಆಯೋಜಿಸಲಾಗಿದೆ ಎಂದು ರಾಜ್ಯ ಮಾವು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ.ಬಿ.ಸಿ. ಮುದ್ದುಗಂಗಾಧರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಮೇಳದಲ್ಲಿ ಗ್ರಾಹಕರಿಗೆ ಕಾರ್ಬೈಡ್ ಮುಕ್ತ. ಸಹಜವಾಗಿ ಮಾಗಿದ ಮಾವು ಹಾಗೂ ಹಲಸು ಹಣ್ಣುಗಳನ್ನು ರೈತರಿಂದ ನೇರವಾಗಿ ಖರೀದಿಸುವ ಅವಕಾಶ ಕಲ್ಪಿಸಲಾಗಿದೆ. ಬೆಳೆಗಾರರಿಗೆ ಯೋಗ್ಯ ಬೆಲೆ ಮತ್ತು ಗ್ರಾಹಕರಿಗೆ ತಾಜಾ, ರುಚಿಕರ ಹಣ್ಣುಗಳು ಸಮರ್ಪಕ ದರದಲ್ಲಿ ದೊರೆಯುವಂತೆ ಮಾಡವುದು ಈ ಮೇಳದ ಉದ್ದೇಶವಾಗಿದೆ ಎಂದರು.
ಮೇಳದಲ್ಲಿ ಬಾದಾಮಿ, ಮಲ್ಲಿಕಾ, ಸೆಂದೂರಾ. ರಸಪೂರಿ, ಕರಿ ಇಶಾಡ್ ಸೇರಿದಂತೆ ಹಲವುಮಾವಿನ ತಳಿಗಳು ಹಾಗೂ ರುದ್ರಾಕ್ಷಿ, ಶಿವರಾತ್ರಿ, ಏಕಾದಶಿ, ತೂಬಗೆರೆ ಸೇರಿದಂತೆ ಹಲಸಿನ ತಳಿಗಳು ಲಭ್ಯವಿರಲಿವೆ. ರಾಮನಗರ, ಮಂಡ್ಯ, ತುಮಕೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳ ಬೆಳೆಗಾರರು ಮೇಳದಲ್ಲಿ ಭಾಗವಹಿಸುತ್ತಿದ್ದು, ಒಟ್ಟು 50 ಮಾವು ಮಳಿಗೆಗಳು ಮತ್ತು 7 ಹಲಸು ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ.
ಮೇಳದಲ್ಲಿ ವಿವಿಧ ತಳಿಗಳ ಹಣ್ಣುಗಳನ್ನು ವೀಕ್ಷಿಸುವ ಹಾಗೂ ಸವಿಯುವ ಅವಕಾಶವೂ ಕಲ್ಪಿಸಲಾಗಿದೆ.ಮಾವು ಹಂಗಾಮಿಗೆ ಪೂರಕವಾಗಿ ನಿಗಮವು ಹಲವು ಕ್ರಮಗಳನ್ನು ಕೈಗೊಂಡಿದೆ. ಮಾಡಿಕೆರೆ ಮಾವು ಅಭಿವೃದ್ಧಿ ಕೇಂದ್ರದ ಪ್ಯಾಕ್ ಹೌಸ್ ಮೂಲಕ ಈ ವರ್ಷ 11 ಟನ್ ಮಾವು ಹಣ್ಣನ್ನು ಸಂಸ್ಕರಿಸಿ ಅಮೆರಿಕಾ, ಜರ್ಮನಿ ಮತ್ತು ಯುಕೆಗೆ ರಫ್ತು ಮಾಡಲಾಗಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಬೈರಾಪಟ್ಟಣದಲ್ಲಿ ಹೊಸ ಪ್ಯಾಕ್‌ಹೌಸ್ ಘಟಕವನ್ನು ಪ್ರಾರಂಭಿಸಲಾಗಿದೆ ಎಂದರು.
ಶೇ.60-70ರಷ್ಟು ಬೆಳೆ ನಷ್ಟ: ಈ ವರ್ಷದಲ್ಲಿ ಅಂದಾಜು ಶೇ.60ರಿಂದ 70 ಬೆಳೆ ನಷ್ಟವಾಗಿದ್ದು, ಉಳಿದ ಹಣ್ಣಿನ ಮೇಲೂ ಇತ್ತೀಚಿನ ಮಳೆಯಿಂದ ಶೇ. 8ರಿಂದ 10 ಹಾನಿ ಉಂಟಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆ ತುರ್ತಾಗಿ ಸಭೆ ನಡೆಸಿದ ಅಧಿಕಾರಿಗಳು, ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಂಡಿದ್ದಾರೆ. ಶೇ.33ಕ್ಕಿಂತ ಹೆಚ್ಚು ನಷ್ಟವಾದ ಬೆಳೆಗಳಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಮೂಲಕ ನೆರವು ನೀಡುವಂತೆ ಸೂಚಿಸಲಾಗಿದೆ.






















