ಹೊಸದಿಲ್ಲಿ: ನೀತಿ ಆಯೋಗದಲ್ಲಿ ಇನ್ಕ್ಯುಬೇಟ್ ಮಾಡಲಾದ ವುಮೆನ್ ಎಂಟರ್‌ಪ್ರೆನ್ಯೂರ್‌ಶಿಪ್ ಪ್ಲಾಟ್‌ಫಾರ್ಮ್ ಮತ್ತು ರಿಲಯನ್ಸ್ ಫೌಂಡೇಶನ್ ಸಹಯೋಗದಲ್ಲಿ, ನೀತಿ ಆಯೋಗದಲ್ಲಿ ಇತ್ತೀಚೆಗೆ ನಡೆದ ವಿಶೇಷ ಸಮಾರಂಭದಲ್ಲಿ ಗ್ರಾಮೀಣ ಮಹಿಳಾ ಕಿರಾಣಿ ಉದ್ಯಮಿಗಳ ಎಟಿಆರ್ ಪ್ರಾಯೋಗಿಕ ಕಾರ್ಯಕ್ರಮದಡಿಯಲ್ಲಿ ಐದು ಮಂದಿ ಉತ್ಕೃಷ್ಟ ಮಹಿಳಾ ಕಿರಾಣಿ ಉದ್ಯಮಿಗಳನ್ನು ಸನ್ಮಾನಿಸಲಾಯಿತು.
ದಿಲ್ಲಿಯಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ನೀತಿ ಆಯೋಗದ ಸದಸ್ಯರಾದ ಡಾ. ಜೊರಮ್ ಅನಿಯಾ, ಡಬ್ಲ್ಯುಇಪಿಯ ಮಿಷನ್ ನಿರ್ದೇಶಕಿ ಮತ್ತು ನೀತಿ ಆಯೋಗದ ಕಾರ್ಯಕ್ರಮ ನಿರ್ದೇಶಕಿ ಅನಾರಾಯ್, ರಿಲಯನ್ಸ್ ಫೌಂಡೇಶನ್‌ನ ಮಹಿಳಾ ಸಬಲೀಕರಣ ಮುಖ್ಯಸ್ಥೆ ದೀಪ್ತಿ ನುಕಲಪತಿ ಮತ್ತು ಮೈಕ್ರೋಸೇವ್ ಕನ್ಸಲ್ಟಿಂಗ್‌ನ (MSC) ಅಸೋಸಿಯೇಟ್ ಪಾರ್ಟ್ನರ್ ಮತ್ತು ಜಾಗತಿಕ ಲೀಡ್ – ಜಿಇಡಿಎಸ್‌ಐ ಆದ ಸೋನಲ್ ಜೈಟ್ಲಿ ಅವರು ಪ್ರಶಸ್ತಿ ವಿಜೇತರು ಹಾಗೂ ಅವರ ಕುಟುಂಬ ಸದಸ್ಯರೊಂದಿಗೆ ಉಪಸ್ಥಿತರಿದ್ದರು. ಸನ್ಮಾನಿತರಾದ ಐವರು ಮಹಿಳಾ ಉದ್ಯಮಿಗಳಿಗೆ ಅವರ ಉದ್ಯಮಶೀಲತೆಯ ಬದ್ಧತೆ ಮತ್ತು ಪ್ರಗತಿಯನ್ನು ಗುರುತಿಸಿ ತಲಾ 1 ಲಕ್ಷ ರೂ.ಗಳ ಅನುದಾನ ನೀಡಲಾಯಿತು.
ಈ ಐವರು ಮಹಿಳಾ ಉದ್ಯಮಿಗಳು ತಮ್ಮ ಸಮುದಾಯಗಳಲ್ಲಿ ಸ್ಥಿರತೆ, ಹೊಂದಿಕೊಳ್ಳುವಿಕೆ ಮತ್ತು ಉದ್ಯಮಶೀಲತೆಯ ನಾಯಕತ್ವಕ್ಕೆ ಸ್ಫೂರ್ತಿದಾಯಕ ಉದಾಹರಣೆಗಳನ್ನು ಪ್ರದರ್ಶಿಸಿದರು. ತರಬೇತಿ ಕಾರ್ಯಕ್ರಮದ ಮೂಲಕ ಪಡೆದ ತಂತ್ರಗಳು ಮತ್ತು ಜ್ಞಾನವನ್ನು ಅಳವಡಿಸಿಕೊಂಡು ತಮ್ಮ ವ್ಯಾಪಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ತಾವು ಕಲಿತ ಅನುಭವಗಳನ್ನು ಮತ್ತು ಮುಂದಿನ ದೃಷ್ಟಿಕೋನವನ್ನು ಅವರು ಸಮಾರಂಭದಲ್ಲಿ ಹಂಚಿಕೊಂಡಿದ್ದಾರೆ.
ಮಧ್ಯಪ್ರದೇಶದ ಬರ್ವಾನಿ, ವಿದಿಶಾ ಮತ್ತು ರೈಸೆನ್ ಜಿಲ್ಲೆಗಳಲ್ಲಿ ಮಹಿಳಾ ನೇತೃತ್ವದ ಕಿರಾಣಿ ಅಂಗಡಿಗಳನ್ನು ಬಲಪಡಿಸಲು ಮೈಕ್ರೋಸೇವ್ ಕನ್ಸಲ್ಟಿಂಗ್ (ಎಂಎಸ್‌ಸಿ) ತಾಂತ್ರಿಕ ಪಾಲುದಾರರಾಗಿ ಕಾರ್ಯಗತಗೊಳಿಸಿದ, ವುಮೆನ್ ಎಂಟರ್‌ಪ್ರೆನ್ಯೂರ್‌ಶಿಪ್ ಪ್ಲಾಟ್‌ಫಾರ್ಮ್ (ಡಬ್ಲ್ಯುಇಪಿ) ಜೊತೆಗಿನ ರಿಲಯನ್ಸ್ ಫೌಂಡೇಶನ್‌ನ ಪ್ರಾಯೋಗಿಕ ಉಪಕ್ರಮವೇ ಗ್ರಾಮೀಣ ಮಹಿಳಾ ಕಿರಾಣಿ ಉದ್ಯಮಿಗಳ ಸಬಲೀಕರಣ ಕಾರ್ಯಕ್ರಮವಾಗಿದೆ.
ಗ್ರಾಮೀಣ ಮಹಿಳಾ ಉದ್ಯಮಿಗಳು ಕುಟುಂಬದ ಆದಾಯ ಮತ್ತು ಸ್ಥಳೀಯ ಆರ್ಥಿಕತೆಯನ್ನು ಬೆಂಬಲಿಸುವಲ್ಲಿ ವಹಿಸುವ ನಿರ್ಣಾಯಕ ಪಾತ್ರವನ್ನು ಗುರುತಿಸಿ ಈ ಕಾರ್ಯಕ್ರಮವನ್ನು ಸಿದ್ಧಪಡಿಸಲಾಗಿದೆ. ಇದರೊಂದಿಗೆ ಅವರ ಉದ್ಯಮಗಳ ಬೆಳವಣಿಗೆಗೆ ಆಗಾಗ್ಗೆ ಅಡ್ಡಿಯಾಗುವ ರಚನಾತ್ಮಕ ಅಡೆತಡೆಗಳನ್ನು ಇದು ಗುರುತಿಸುತ್ತದೆ. ಗುರಿ ಆಧಾರಿತ ಸಾಮರ್ಥ್ಯ ವೃದ್ಧಿ ಮತ್ತು ಕೈಹಿಡಿದು ಬೆಂಬಲಿಸುವ ಮೂಲಕ, ಈ ಕಾರ್ಯಕ್ರಮವು ನಾಲ್ಕು ಪ್ರಮುಖ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿದೆ. ಆರ್ಥಿಕ ಸಾಮರ್ಥ್ಯ, ಡಿಜಿಟಲ್ ಅಳವಡಿಕೆ, ಮಾರುಕಟ್ಟೆ ಅಭಿಮುಖತೆ ಮತ್ತು ವ್ಯಾಪಾರ ಯೋಜನೆ.
ಪ್ರಾರಂಭವಾದಾಗಿನಿಂದ, ಆರ್‌ಡಬ್ಲ್ಯುಕೆಇ ಕಾರ್ಯಕ್ರಮವು 3 ಜಿಲ್ಲೆಗಳಲ್ಲಿ (ವಿದಿಶಾ, ರೈಸೆನ್ ಮತ್ತು ಬರ್ವಾನಿ) ಹರಡಿರುವ 6 ಬ್ಲಾಕ್‌ಗಳಲ್ಲಿ (ಬರ್ವಾನಿ, ಪಾಟಿ, ಗಂಜ್ ಬಾಸೋದಾ, ವಿದಿಶಾ, ಒಬೆುಲ್ಲಾಗಂಜ್ ಮತ್ತು ಸಾಂಚಿ) 175ಕ್ಕೂ ಹೆಚ್ಚು ತರಬೇತಿ ಅವಧಿಗಳಲ್ಲಿ 1,200ಕ್ಕೂ ಅಧಿಕ ಗಂಟೆಗಳ ರಚನಾತ್ಮಕ ಕಲಿಕೆಯನ್ನು ತಲುಪಿಸಿದೆ ಮತ್ತು 108 ಮಹಿಳಾ ಉದ್ಯಮಿಗಳನ್ನು ತಲುಪಿದೆ.
ಸ್ಥಳೀಯ ಭಾಷೆಗಳಲ್ಲಿ ಭಾಗವಹಿಸುವಿಕೆಯ ಅವಧಿಗಳ ಮೂಲಕ ತಲುಪಿಸಲ್ಪಟ್ಟ ಸಾಮರ್ಥ್ಯ-ವರ್ಧನೆಯ ಪಠ್ಯಕ್ರಮವು ಬಜೆಟ್‌ನಿಂದ ಹಿಡಿದು ಬುಕ್‌ಕೀಪಿಂಗ್ (ಲೆಕ್ಕಪತ್ರ ನಿರ್ವಹಣೆ) ವರೆಗೆ, ಸರಬರಾಜುದಾರರ ಸಂಪರ್ಕದಿಂದ ಹಿಡಿದು ದಾಸ್ತಾನು ಮತ್ತು ಉದ್ಯಮ ಬೆಳವಣಿಗೆಯ ಯೋಜನೆಗಳವರೆಗೆ ಪ್ರಾಯೋಗಿಕ ಕೌಶಲ್ಯಗಳನ್ನು ಮಹಿಳೆಯರಿಗೆ ಒದಗಿಸುತ್ತದೆ.
ಗ್ರಾಮೀಣ ಉದ್ಯಮಶೀಲತಾ ಪರಿಸರ ವ್ಯವಸ್ಥೆಗಳನ್ನು ಬಲಪಡಿಸುವಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಮಧ್ಯಸ್ಥಗಾರರ ನಡುವಿನ ಸಹಯೋಗದ ಪ್ರಯತ್ನಗಳ ಪ್ರಾಮುಖ್ಯತೆಯನ್ನು ಈ ಕಾರ್ಯಕ್ರಮ ಒತ್ತಿಹೇಳುತ್ತದೆ. ಸಾಂಸ್ಥಿಕ ಬೆಂಬಲ, ತಾಂತ್ರಿಕ ಪರಿಣತಿ ಮತ್ತು ನೆಲಮಟ್ಟದ ಅನುಷ್ಠಾನವನ್ನು ಸಂಯೋಜಿಸುವ ಮೂಲಕ, ಈ ಉಪಕ್ರಮವು ಗ್ರಾಮೀಣ ಮಹಿಳಾ ಉದ್ಯಮಿಗಳು ತಮ್ಮ ವ್ಯಾಪಾರ ಸಾಮರ್ಥ್ಯಗಳನ್ನು ಹೆಚ್ಚಿಸಲು ಮತ್ತು ಉದ್ಯಮದ ಫಲಿತಾಂಶಗಳನ್ನು ಸುಧಾರಿಸಲು ಒಂದು ರಚನಾತ್ಮಕ ಮಾರ್ಗವನ್ನು ಸೃಷ್ಟಿಸಿದೆ.
ಆರ್‌ಡಬ್ಲ್ಯುಕೆಇ ಕಾರ್ಯಕ್ರಮವು ಗ್ರಾಮೀಣ ಪೂರೈಕೆ ಜಾಲ ಮತ್ತು ಸ್ಥಳೀಯ ಆರ್ಥಿಕತೆಗಳಲ್ಲಿ ಪ್ರಮುಖ ನೋಡ್‌ಗಳಾಗಿ (ಕೇಂದ್ರಗಳಾಗಿ) ಮಹಿಳಾ ನೇತೃತ್ವದ ಕಿರಾಣಿ ಅಂಗಡಿಗಳ ಬೆಳೆಯುತ್ತಿರುವ ಪಾತ್ರವನ್ನು ಎತ್ತಿ ತೋರಿಸುತ್ತದೆ. ಉದ್ದೇಶಿತ ಮಧ್ಯಸ್ಥಿಕೆಗಳ ಮೂಲಕ, ಅಂತಹ ಕಾರ್ಯಕ್ರಮಗಳು ಮಹಿಳಾ ಉದ್ಯಮಿಗಳಲ್ಲಿ ವ್ಯಾಪಾರ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸಬಹುದು, ಡಿಜಿಟಲ್ ಅಳವಡಿಕೆಯನ್ನು ಹೆಚ್ಚಿಸಬಹುದು ಮತ್ತು ಉತ್ತಮ ಆರ್ಥಿಕ ಹಾಗೂ ಕಾರ್ಯಾಚರಣೆಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡಬಹುದು. ರಿಲಯನ್ಸ್ ಫೌಂಡೇಶನ್ ಕೇವಲ ವ್ಯಕ್ತಿಗತವಾಗಿ ಮಾತ್ರವಲ್ಲದೆ ಇಡೀ ಸಮಾಜಕ್ಕೆ ಪರಿಣಾಮವನ್ನು ಉಂಟುಮಾಡಲು ಆರ್ಥಿಕ ಸಬಲೀಕರಣ ಮತ್ತು ಉದ್ಯಮಶೀಲತೆ ಸೇರಿದಂತೆ ವಿವಿಧ ಮಾರ್ಗಗಳ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಆಳವಾದ ಬದ್ಧತೆಯನ್ನು ಹೊಂದಿದೆ.






















