ಪಾಟ್ನಾ: ಬಿಹಾರದ ವೈಶಾಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ 34 ವರ್ಷಗಳ ಹಿಂದೆ ನಡೆದಿದ್ದ ಭೀಕರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯವೊಂದು ಮಹತ್ವದ ತೀರ್ಪು ನೀಡಿದೆ. ಈ ಸುದೀರ್ಘ ಕಾನೂನು ಹೋರಾಟದ ನಡುವೆ ಪ್ರಕರಣದ ಐದು ಜನ ಆರೋಪಿಗಳ ಪೈಕಿ ನಾಲ್ವರು ಕಾಲವಾಗಿದ್ದು, ಸದ್ಯ ಬದುಕುಳಿದಿರುವ ಏಕೈಕ 84 ವರ್ಷದ ವೃದ್ಧ ದೀಪ್ ರಾಯ್ ಎಂಬುವವರನ್ನು ನ್ಯಾಯಾಲಯ ಅಪರಾಧಿ ಎಂದು ಘೋಷಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್: ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವ ವೃದ್ಧ ದೀಪ್ ರಾಯ್ ಅವರನ್ನು ಇಬ್ಬರು ವ್ಯಕ್ತಿಗಳು ಹಿಡಿದುಕೊಂಡು ಜೈಲಿನ ಕೋಣೆಯ ಕಡೆಗೆ ಕರೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ತೀರ್ಪು ಬರಲು ತೆಗೆದುಕೊಳ್ಳುವ ಸುದೀರ್ಘ ಸಮಯಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ.
ಪ್ರಕರಣದ ಹಿನ್ನೆಲೆ ಏನು?: ಈ ವಿವಾದ 1992ರ ಮೇ ತಿಂಗಳಿನಲ್ಲಿ ಆರಂಭವಾಗಿತ್ತು. ವೈಶಾಲಿ ಜಿಲ್ಲೆಯ ಜುಡಾವನ್‌ಪುರ ನಿವಾಸಿ ಅದಾಲತ್ ರಾಯ್ ಎಂಬುವವರು ದೀಪ್ ರಾಯ್ ಸೇರಿದಂತೆ ಐದು ಜನರ ವಿರುದ್ಧ ದೂರು ದಾಖಲಿಸಿದ್ದರು. ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಈ ಐದು ಜನರ ಗುಂಪು ಮಾರಕಾಸ್ತ್ರಗಳೊಂದಿಗೆ ತನ್ನ ಮನೆಗೆ ನುಗ್ಗಿ, ತನ್ನ ಹಾಗೂ ತನ್ನ ಪತ್ನಿಯ ಮೇಲೆ ಗುಂಡಿನ ದಾಳಿ ನಡೆಸಿ ಪ್ರಾಣಾಪಾಯ ಉಂಟುಮಾಡಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಪೊಲೀಸ್ ತನಿಖೆ ಮತ್ತು ಸುದೀರ್ಘ ವಿಚಾರಣೆ: ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು 1993ರಲ್ಲಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ (ದೋಷಾರೋಪಣೆ ಪಟ್ಟಿ) ಸಲ್ಲಿಕೆ ಮಾಡಿದ್ದರು. ಆದರೆ, ಈ ಪ್ರಕರಣದ ವಿಚಾರಣೆ ಮಾತ್ರ ದಶಕಗಳ ಕಾಲ ಸಾಗುತ್ತಲೇ ಹೋಯಿತು.
ನಾಲ್ವರು ಆರೋಪಿಗಳ ಸಾವು: ಸುದೀರ್ಘ 34 ವರ್ಷಗಳ ಕಾಲ ನಡೆದ ಈ ನ್ಯಾಯಾಲಯದ ಪ್ರಕ್ರಿಯೆಯ ಮಧ್ಯೆ, ಐವರು ಆರೋಪಿಗಳ ಪೈಕಿ ನಾಲ್ವರು ವಯೋಸಹಜ ಹಾಗೂ ಇತರ ಕಾರಣಗಳಿಂದ ಸಾವನ್ನಪ್ಪಿದ್ದರು. ಅಂತಿಮವಾಗಿ ತೀರ್ಪು ಹೊರಬೀಳುವ ವೇಳೆಗೆ ದೀಪ್ ರಾಯ್ ಮಾತ್ರ ವಿಚಾರಣೆಯನ್ನು ಎದುರಿಸಲು ಬಾಕಿ ಉಳಿದಿದ್ದರು.
ನ್ಯಾಯಾಲಯದ ಅಂತಿಮ ತೀರ್ಪು: ಇದೀಗ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಮನೋಜ್ ಕುಮಾರ್ ತಿವಾರಿ ಅವರು ದೀಪ್ ರಾಯ್ ಅವರನ್ನು ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 147 (ದಂಗೆ ಎದ್ದಿರುವುದು), 148 (ಮಾರಕಾಸ್ತ್ರಗಳೊಂದಿಗೆ ದಂಗೆ), 307 (ಕೊಲೆ ಯತ್ನ) ಮತ್ತು ಆರ್ಮ್ಸ್ ಆಕ್ಟ್ ಸೆಕ್ಷನ್ 134ರ ಅಡಿಯಲ್ಲಿ ದೋಷಿ ಎಂದು ಘೋಷಿಸಿದ್ದಾರೆ. ನ್ಯಾಯಾಲಯವು ಸದ್ಯ ಇವರನ್ನು ಅಪರಾಧಿ ಎಂದು ಘೋಷಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಬೇಕಿದೆ.




















