ಕಲಬುರಗಿ: ಜೂನ್ 3ರಂದು ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ ಪದಗ್ರಹಣ ಮಾಡುವ ವೇಳೆ ರಾಜ್ಯದಲ್ಲಿ ಎಷ್ಟು ಜನ ಉಪಮುಖ್ಯಮಂತ್ರಿ ಮತ್ತು ಸಚಿವರನ್ನಾಗಿ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಆದರೆ ಸದ್ಯಕ್ಕೆ ಮಾತ್ರ ಯಾವ ಪ್ರಸ್ತಾವನೆ ಬಂದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಭೇಟಿ ಮಾಡಿದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಗಳ ಪದಗ್ರಹಣ ಜತೆಗೆ ಮೊದಲ ಹಂತದಲ್ಲಿ ಕನಿಷ್ಟ ಎಂಟು ಅಥವಾ ಹತ್ತು ಜನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬುದರ ಬಗ್ಗೆಯೂ ಪ್ರಸ್ತಾವನೆ ನೀಡಿಲ್ಲ. ಆದರೆ ಸದ್ಯ ಒಂದು ಹಂತದಲ್ಲಿ ಸಂಪುಟ ರಚನೆಯಾಗಲಿದ್ದು, ನಂತರ 15 ದಿನ ಅಥವಾ ತಿಂಗಳ ಬಳಿಕ ಎರಡನೇ ಹಂತದಲ್ಲಿ ಮಂತ್ರಿ ಮಂಡಲ ರಚನೆಯಾಗಲಿದೆ. ಅಲ್ಲದೆ ಪ್ರಮುಖ ನಿಗಮ ಮಂಡಳಿಗಳನ್ನೂ ಸಹ ಸಚಿವ ಸಂಪುಟ ರಚನೆ ಸಂದರ್ಭದಲ್ಲಿಯೇ ನೇಮಕ ಮಾಡಬೇಕಾ? ಬೇಡವಾ? ಎಂದು ಚರ್ಚಿಸಲಾಗುತ್ತಿದೆ. ಎಲ್ಲವೂ ಪ್ರಸ್ತಾವನೆ ಬಂದ ಬಳಿಕ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು. ಸಚಿವ ಸಂಪುಟ ರಚನೆ ಹೊಸ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು ಎಂದರು.
ಕೆಪಿಸಿಸಿ ಸಾರಥಿಗೆ ಸಮರ್ಥ ನಾಯಕನ ಹುಡುಕಾಟ: ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ. ಶಿವಕುಮಾರ ಮುಖ್ಯಮಂತ್ರಿ ಹುದ್ದೆಗೇರಿದ ಮೇಲೆ ಸಹಜವಾಗಿ ಮತ್ತೊಬ್ಬರು ಬರಲೇಬೇಕು. ಇದಕ್ಕಾಗಿ 2028ರ ವಿಧಾನಸಭೆ ಚುನಾವಣೆ ಮತ್ತು ಪಕ್ಷ ಬಲವರ್ಧನೆ ದೃಷ್ಟಿಯಿಂದ ಸಮರ್ಥ, ಒಗ್ಗಟ್ಟು ಪ್ರದರ್ಶಿಸುವ ಸ್ಪೀಡ್ ಮತ್ತು ಕಲೆಕ್ಟಿವ್ ಆಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಸಾರಥಿಗೆ ಹುಡುಕಬೇಕಿದೆ. ರಾಜ್ಯದಲ್ಲಿ ಚುನಾವಣೆ ಎದುರಿಸಲು ಕೇವಲ 24 ತಿಂಗಳು ಮಾತ್ರ ಇವೆ. ಈ ನಿಟ್ಟಿನಲ್ಲಿ ಅತಿ ಚುರುಕಿನ ಕೆಲಸ ಮಾಡುವ ಸಮನ್ವಯತೆ ಸಾಧಿಸುವ, ಜನರು ಕೂಡ ಸಹಕರಿಸುವಂತ ಒಳ್ಳೆಯ ವ್ಯಕ್ತಿತ್ವದ ಹೀಗೆ ಎಲ್ಲವೂ ಕೂಲಂಕಷವಾಗಿ ಪರಿಶೀಲಿಸಿ, ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಯೋಗ್ಯರನ್ನು ಆಯ್ಕೆ ಮಾಡುತ್ತೇವೆ ಎಂದು ಹೇಳಿದರು.






















