SK Home Ad
Home ನಮ್ಮ ಜಿಲ್ಲೆ ಧಾರವಾಡ ಮುಂಗಾರು ದುರ್ಬಲ ಸಂಭವ; ಭೂಮಿ ಹಸಿಯಾಗದೆ ಬಿತ್ತನೆ ಬೇಡ

ಮುಂಗಾರು ದುರ್ಬಲ ಸಂಭವ; ಭೂಮಿ ಹಸಿಯಾಗದೆ ಬಿತ್ತನೆ ಬೇಡ

0
131

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಬೀಜ ಮತ್ತು ರಸಗೊಬ್ಬರದ ಕೊರತೆ ಇಲ್ಲ. ಯಾವ ರೈತರಿಗೂ ಆತಂಕ ಬೇಡ. ರೈತರಿಗೆ ಬೇಕಾದಷ್ಟು ಬಿತ್ತನೆ ಬೀಜ ಮತ್ತು ಯೂರಿಯಾ ಪೂರೈಕೆಗೆ ಜಿಲ್ಲೆಯಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹೆಚ್ಚುವರಿಯಾಗಿ ಬೇಕಿದ್ದರೂ ಕೊಡಲಾಗುತ್ತದೆ. ಆದರೆ ಪ್ರಸಕ್ತ ವರ್ಷ ಎಲ್‌ ನಿನೋ ದುಷ್ಪರಿಣಾಮದಿಂದಾಗಿ ತಾಪಮಾನ ಏರಿಕೆಯಾಗಿ, ಮುಂಗಾರು ದುರ್ಬಲವಾಗುವ ಹಾಗೂ ಬರಗಾಲ ಎದುರಾಗುವ ಸಂಭವವಿದೆ. ಹೀಗಾಗಿ ಮಳೆಯಾಗದೇ, ಭೂಮಿ ಹದಗೊಳ್ಳದೇ ಹಾಗೂ ಭೂಮಿಯಲ್ಲಿ ತೇವಾಂಶವಿಲ್ಲದೇ ಬಿತ್ತನೆಯನ್ನು ಮಾಡಬೇಡಿ ಎಂದು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಶನಿವಾರ ರೈತರಿಗೆ ಕಿವಿಮಾತು ಹೇಳಿದರು.

ಮುಂಗಾರು ಹಿನ್ನೆಲೆಯಲ್ಲಿ, ಬಿತ್ತನೆ ಬೀಜ, ಗೊಬ್ಬರ, ಬೆಳೆ ವಿಮೆ ಮೊದಲಾದ ಪೂರಕ ಕೃಷಿಪರ ವಿಷಯಗಳ ಕುರಿತು `ಸಂಯುಕ್ತ ಕರ್ನಾಟಕ’ ಏರ್ಪಡಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ರೈತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಕಟಾವು, ಬಿತ್ತನೆ, ಪೋಷಕಾಂಶಗಳ ನೀಡುವಿಕೆ, ಕೀಟನಾಶಕಗಳ ಬಳಕೆ ಹಾಗೂ ಬೆಳೆ ವಿಮೆ ಸಮಸ್ಯೆಗಳ ಬಗ್ಗೆ ರೈತರು ತೋಡಿಕೊಂಡ ಆತಂಕ ಮತ್ತು ಅನುಮಾನಗಳನ್ನು ಸಮಾಧಾನದಿಂದ ಆಲಿಸಿ ಪರಿಹಾರ ಸೂಚಿಸಿದರು.

`2015-16ರಲ್ಲಿ ಎಲ್‌ನಿನೋ ದುಷ್ಪರಿಣಾಮ ಸಣ್ಣ ಪ್ರಮಾಣದಲ್ಲಿ ಆಗಿತ್ತು. ಈ ಬಾರಿ ಸೂಪರ್ ಎಲ್‌ನಿನೋ ಪೆಸಿಫಿಕ್ ಸಾಗರದಲ್ಲಿ ಮೈದಾಳುತ್ತಿದೆ ಎನ್ನುವ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆ ಈಗಾಗಲೇ ನೀಡುವ ಮೂಲಕ ಎಚ್ಚರಿಸಿದೆ.

`ಇದರಿಂದಾಗಿ ಮುಂಗಾರು ಅಳತೆಗೆ ಸಿಗುವ ಸಂಭವ ಇಲ್ಲ. ಜೊತೆಗೆ ಕೇರಳಕ್ಕೆ ಜೂನ್ 1ರಂದು ಕಾಲಿಡುವ ಮುಂಗಾರು, ನಮ್ಮಲ್ಲಿ ಬರಲು ತುಂಬ ತಡವಾಗಲಿದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಲಕ್ಷಣಗಳು ಕಾಣುತ್ತಿವೆ. ಮಳೆಯಾದರೂ ನಿಯಮಿತವಾಗಿ ಅಥವಾ ಸತತವಾಗಿ ಆಗುವ ಸಾಧ್ಯತೆಗಳಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಆದ್ದರಿಂದ ಸಾಂಪ್ರದಾಯಿಕ ಬೆಳೆಗಳ ಬದಲಾಗಿ ಅಲ್ಪಕಾಲೀನ ಬೆಳೆಗಳನ್ನು ಬೆಳೆಯುವುದು ಸೂಕ್ತ’ ಎಂದು ಅಂತರವಳ್ಳಿ ವಿವರಿಸಿದರು.

ಕೇವಲ ಮಳೆಯಾಧಾರಿತ ಕೃಷಿಯನ್ನು ಅವಲಂಬಿಸಿದವರು ಈಗಲೇ ಬಿತ್ತನೆ ಮಾಡಬೇಡಿ. ಜೂನ್ 15ರಿಂದ 20ನೇ ತಾರೀಕಿನ ಒಳಗೆ ಹದ ಮಳೆಯಾಗಿ ಭೂಮಿ ಹಸಿಯಾದರೆ ಮಾತ್ರ ಸಾಂಪ್ರದಾಯಿಕ ಉದ್ದು- ಹೆಸರು ಮೊದಲಾದವುಗಳ ಬಿತ್ತನೆ ಮಾಡಿ. ಮಳೆ ಬಾರದಿದ್ದರೆ ಜೂನ್ 15 ಅಥವಾ 20ರ ನಂತರ ಶೇಂಗಾ, ಮೆಕ್ಕೆಜೋಳದಂಥ ಅಲ್ಪಕಾಲೀನ ಬೆಳೆಗಳ ಬಿತ್ತನೆ ಮಾಡಿ. ಗೊಬ್ಬರ, ಬೀಜ ಮೊದಲಾದವುಗಳಿಗೆ ಹಣ ವ್ಯಯಿಸಿ ವೃಥಾ ಹಾಳು ಮಾಡಿಕೊಳ್ಳಬೇಡಿ ಎಂದು ಜಂಟಿ ನಿರ್ದೇಶಕರು ಸಲಹೆ ಮಾಡಿದರು.

ಯೂರಿಯಾ ಗೊಬ್ಬರಕ್ಕೆ ಎಫ್‌ಐಡಿ ಕಡ್ಡಾಯ
ಯೂರಿಯಾ ಕೊಳ್ಳುವುದಕ್ಕೆ ಎಫ್‌ಐಡಿ (ರೈತರ ಗುರುತು ಸಂಖ್ಯೆ) ಕಡ್ಡಾಯ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಕೃಷಿಪರ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಕೂಡ ಎಫ್‌ಐಡಿ ಅಗತ್ಯ. ಕೃಷಿ ಹಾಗೂ ಕಂದಾಯ ಎರಡೂ ರೈತರಿಗೆ ಎಫ್‌ಐಡಿ ನೀಡುತ್ತವೆ. ಆದ್ದರಿಂದ ಇದುವರೆಗೆ ಈ ಸಂಖ್ಯೆಯನ್ನು ಹೊಂದಿರದ ರೈತರು ತಮ್ಮ ಆಧಾರ್ ಮತ್ತು ಬ್ಯಾಂಕ್ ಪಾಸ್‌ಬುಕ್‌ನ ನಕಲು ಪ್ರತಿಯನ್ನು ಸಂಬಂಧಿಸಿದವರಿಗೆ ಸಲ್ಲಿಸಿ ಎಫ್‌ಐಡಿ ಪಡೆದುಕೊಳ್ಳಬೇಕು ಎಂದು ಮಂಜುನಾಥ ಅಂತರವಳ್ಳಿ ತಿಳಿಸಿದರು. ಎಫ್‌ಐಡಿ ಇಲ್ಲದೇ ಯೂರಿಯಾ ಗೊಬ್ಬರವನ್ನು ಯಾವುದೇ ಕಾರಣಕ್ಕೂ ಕೊಡುವುದಿಲ್ಲ ಎಂದು ಅವರು ರೈತರ ಪ್ರಶ್ನೆಗಳಿಗೆ ಸ್ಪಷ್ಟಪಡಿಸಿದರು.

ಅತಿಯಾದರೆ ಯೂರಿಯಾ ವಿಷ !
ಅತಿಯಾದರೆ ಅಮೃತವೂ ವಿಷ ಎನ್ನುವಂತೆ, ಅತಿಯಾಗಿ ಬಳಸಿದರೆ ಯೂರಿಯಾ ಕೂಡ ವಿಷ ಎಂದು ಅಧಿಕಾರಿ ಅರ್ಥಪೂರ್ಣವಾಗಿ ರೈತರಿಗೆ ಮನದಟ್ಟು ಮಾಡಿಕೊಟ್ಟರು. `ಹೆಚ್ಚು ಗೊಬ್ಬರ ಬಳಸಿದರೆ ಹೆಚ್ಚು ಇಳುವರಿ ಎನ್ನುವುದು ದೊಡ್ಡ ಭ್ರಮೆ. ಯಾವ ಕಾರಣಕ್ಕೂ ಯೂರಿಯಾವನ್ನು ಹೆಚ್ಚಾಗಿ ಬಳಸಬೇಡಿ. ಒಂದು ಎಕರೆಗೆ ಒಂದು ಚೀಲವನ್ನು ಮಾತ್ರ ಬಳಸಿ. ಹೆಚ್ಚಾಗಿ ಬಳಸಿದರೆ ನಿಮ್ಮ ಜಮೀನಿನ ಫಲವತ್ತತೆ ನಾಶವಾಗಿ, ಇಳುವರಿ ಕುಂಠಿತಗೊಳ್ಳುತ್ತದೆ ಎಂಬುದನ್ನು ಮರೆಯಬೇಡಿ. ಒಂದಕ್ಕೆ ಮೂರು ಅಥವಾ ನಾಲ್ಕು ಪಟ್ಟು ಯೂರಿಯಾ ಬಳಸುವ ಮೂಲಕ ಹಾನಿಗೆ ಒಳಗಾಗುತ್ತಿರುವ ರೈತರು ಹೆಚ್ಚುತ್ತಿದ್ದಾರೆ. ಇನ್ನಾದರೂ ಇದನ್ನು ನಿಲ್ಲಿಸಿ’ ಎಂದು ಅಂತರವಳ್ಳಿ ಕಳಕಳಿಯಿಂದ ಕೋರಿದರು.

ನ್ಯಾನೋ ಗೊಬ್ಬರ ಬಳಸಿ…
ಕಳೆದ ಕೆಲವು ವರ್ಷಗಳಿಂದ ಲಭ್ಯ ಇರುವ ನ್ಯಾನೋ ಯೂರಿಯಾ ಬಳಕೆ ತುಂಬ ಒಳ್ಳೆಯದು. ಡ್ರೋಣ್ ಅಥವಾ ಪಂಪಿಂಗ್ ತಂತ್ರಜ್ಞಾನದ ಮೂಲಕ ನ್ಯಾನೋ ಯೂರಿಯಾ ಸಿಂಪರಣೆ ಮಾಡುವುದು ಹೆಚ್ಚು ಲಾಭಕರ ಎಂಬುದು ಈಗ ರುಜುವಾತಾಗಿದೆ. ಕಳೆದ ವರ್ಷ ಜಿಲ್ಲೆಯ ಹಲವು ರೈತರು ನ್ಯಾನೋ ಗೊಬ್ಬರ ಬಳಸಿ ಹೆಚ್ಚು ಇಳುವರಿಯ ಪ್ರಯೋಜನ ಪಡೆದುಕೊಂಡಿದ್ದಾರೆ. ನ್ಯಾನೋ ಯೂರಿಯಾ ಗೊಬ್ಬರದ ದಾಸ್ತಾನು ಸಾಕಷ್ಟಿದ್ದು, ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸುವಂತೆ ಜಂಟಿ ನಿರ್ದೇಶಕರು ರೈತರಿಗೆ ಸೂಚಿಸಿದರು. ಪೋಟ್ಯಾಷಿಯಂ ನೈಟ್ರೇಟ್ ಕೂಡ ಒಳ್ಳೆಯ ಗೊಬ್ಬರವಾಗಿದ್ದು, ರೈತರು ಇದರ ಬಗ್ಗೆಯೂ ಹೆಚ್ಚು ಗಮನ ಕೊಡುವಂತೆ ಸಲಹೆ ಮಾಡಿದರು.

ಲಿಂಕ್ ಒಳ್ಳೆಯದು; ಆದರೆ ಕೊಳ್ಳಲು ಒತ್ತಡ ಹೇರುವಂತಿಲ್ಲ
ಗೊಬ್ಬರದ ಜೊತೆಗೆ ಮಾರಾಟಗಾರರು ದ್ರವರೂಪದ ಲಿಂಕ್ ಪ್ಯಾಕೇಟ್‌ಗಳನ್ನು ನಮ್ಮ ಮೇಲೆ ಹೇರುತ್ತಿದ್ದಾರೆ. ಇದನ್ನು ಕೊಳ್ಳುವುದು ಕಡ್ಡಾಯ ಎನ್ನುತ್ತಿದ್ದಾರೆ. ಲಿಂಕ್ ಕೊಳ್ಳದಿದ್ದರೆ ಗೊಬ್ಬರವನ್ನು ಕೊಡಲು ಅನುಮತಿ ಇಲ್ಲ ಎನ್ನುತ್ತಿದ್ದಾರೆ ಎಂದು ಅಳ್ನಾವರ ಸೇರಿದಂತೆ ಅನೇಕ ಕಡೆಗಳ ರೈತರು ಜಂಟಿ ನಿರ್ದೇಶಕರ ಗಮನಕ್ಕೆ ತಂದರು. `ಲಿಂಕ್ ದ್ರಾವಣ ಬೆಳೆಗಳಿಗೆ ತುಂಬ ಒಳ್ಳೆಯದ್ದು. ಆದ್ದರಿಂದ ಗೊಬ್ಬರದ ಜೊತೆಗೆ ಇದನ್ನೂ ಖರೀದಿಸಿ ಬಳಸಬೇಕು. ಆದರೆ ಇದನ್ನು ಕೊಳ್ಳುವುದು ಕಡ್ಡಾಯವೇನಲ್ಲ. ಲಿಂಕ್ ಕೊಳ್ಳದಿದ್ದರೆ ಗೊಬ್ಬರ ಮಾರುವುದಿಲ್ಲ ಎನ್ನುವುದು ಕಾನೂನು ಬಾಹೀರ. ಅಳ್ನಾವರ ಮತ್ತು ದೂರುಗಳಿರುವ ಇತರ ಕಡೆ ಅಧಿಕಾರಿಗಳ ತಂಡವನ್ನು ಕಳಿಸಿ ಈ ಬಗ್ಗೆ ತಪಾಸಣೆ ಮಾಡಲಾಗುವುದು. ರೈತರ ಮೇಲೆ ಒತ್ತಡ ಹೇರುತ್ತಿರುವ ಮಾರಾಟಗಾರರ ಪರವಾನಗಿ ರದ್ದು ಪಡಿಸಲಾಗುವುದು’ ಎಂದು ಅಂತರವಳ್ಳಿ ಎಚ್ಚರಿಸಿದರು.

ಡೀಸೆಲ್ ಸಮಸ್ಯೆಯಿಂದ ಸೋಯಾ ಬೀಜ ತಡ
ಕಲಘಟಗಿ, ಧಾರವಾಡ, ಭಾಗಶಃ ಕುಂದಗೋಳ ಮತ್ತು ಹುಬ್ಬಳ್ಳಿ ತಾಲ್ಲೂಕುಗಳಲ್ಲಿ ಸೋಯಾಬಿನ್ ಬಿತ್ತನೆ ಬೀಜ ಕೊರತೆಯ ಬಗ್ಗೆ ಹಲವಾರು ರೈತರು ಅಂತರವಳ್ಳಿಯವರನ್ನು ಪ್ರಶ್ನಿಸಿ ಆತಂಕ ತೋಡಿಕೊಂಡರು. `ಖಂಡಿತ ಆತಂಕ ಪಡಬೇಡಿ. ಸೋಯಾ ಬೀಜಗಳು ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಿಂದ ಬರಬೇಕಾಗಿರುವುದರಿಂದ ತಡವಾಗಿದೆ. ಡೀಸೆಲ್ ಕೊರತೆಯ ಕಾರಣ ಬೀಜವನ್ನು ಹೊತ್ತ ಲಾರಿಗಳು ತಡವಾಗಿ ತಲುಪುತ್ತಿವೆ. ನಾಳೆ- ನಾಡಿದ್ದರಲ್ಲಿ (ರವಿವಾರ, ಸೋಮವಾರ) ವೇಳೆಗೆ ಮತ್ತಿಷ್ಟು ಲಾರಿಗಳು ಸೋಯಾ ಬಿತ್ತನೆ ವ್ಯಾಪ್ತಿಯ ತಾಲ್ಲೂಕುಗಳಿಗೆ ಬರಲಿವೆ. ಯಾವ ಕೊರತೆಯೂ ಇಲ್ಲ. ಧೈರ್ಯವಾಗಿರಿ’ ಎಂದು ಅಧಿಕಾರಿ ಸ್ಪಷ್ಟಪಡಿಸಿದರು.

ಬೆಳೆ ವಿಮೆ: ಏಜೆಂಟರ ವಿರುದ್ಧ ದೂರು ನೀಡಿ
ಬೆಳೆ ವಿಮೆ ವಿಷಯದಲ್ಲಿ ರೈತರನ್ನು ತಪ್ಪು ದಾರಿಗೆ ಎಳೆದು, ವಿಮಾ ಹಣ ಕೊಡಿಸುವ ಜಾಲ ಕಾರ್ಯನಿರ್ವಹಿಸುತ್ತಿರುವುದನ್ನು ಅಧಿಕಾರಿ ಅಲ್ಲಗಳೆಯಲಿಲ್ಲ. ಬೆಳೆ ವಿಮೆ ರೈತರ ಐಚ್ಛಿಕ ಆಯ್ಕೆಯಾಗಿದೆ. ಬೆಳೆ ವಿಮೆ ಮಾಡಿಸುವುದಕ್ಕಾಗಲೀ ಅಥವಾ ವಿಮಾ ಹಣವನ್ನು ಕೊಡಿಸುವುದಕ್ಕಾಗಲೀ ಏಜೆಂಟರನ್ನು ಸರ್ಕಾರ ನೇಮಿಸಿಲ್ಲ. ಯಾವ ರೈತರೂ ಏಜೆಂಟರ ಹಾವಳಿಗೆ ಸಿಲುಕಿ ಮೋಸ ಹೋಗಬಾರದು. ಒಂದು ವೇಳೆ ಏಜೆಂಟರಿಂದ ಮೋಸ ಹೋಗಿದ್ದರೆ ಅಥವಾ ಏಜೆಂಟರು ಮಾಡಿಸುವುದಕ್ಕೆ ಒತ್ತಡ ಹೇರುತ್ತಿದ್ದರೆ ಕೂಡಲೇ ಲಿಖಿತ ರೂಪದಲ್ಲಿ ಕೃಷಿ ಇಲಾಖೆಗೆ ದೂರು ಕೊಡಿ' ಎಂದು ಅವರು ಕೋರಿದರು. ಬೆಳೆ ವಿಮೆ ಕುರಿತು ವ್ಯಾಪಕ ಪ್ರಶ್ನೆಗಳು ಜಂಟಿ ನಿರ್ದೇಶಕರಿಗೆ ಎದುರಾದವು. ಬೆಳೆ ವಿಮೆ ಮಾಡಿಸುವಾಗ ಇರುವ ಕಾಳಜಿ, ಬೆಳೆ ಹಾಳಾಗಿ ವಿಮೆ ಮೊತ್ತ ನೀಡುವಾಗ ಇರುವುದಿಲ್ಲ ಎಂಬುದು ರೈತರ ಸಾಮಾನ್ಯ ದೂರಾಗಿತ್ತು.ಬೆಳೆ ವಿಮೆ ಕೂಡ ಆರೋಗ್ಯ ವಿಮೆಯಂತೆಯೇ. ಸತತ ಏಳು ವರ್ಷಗಳಲ್ಲಿ ಬೆಳೆ ಹಾಳಾಗಿರುವ ಪ್ರಮಾಣವನ್ನು ಪರಿಗಣಿಸಿ ವಿಮೆಯನ್ನು ರೈತರಿಗೆ ನೀಡಲಾಗುತ್ತದೆ. ಯಾವುದೋ ಒಂದು ವರ್ಷ ಬೆಳೆ ಹಾಳಾಗಿರುವುದಕ್ಕೆ ವಿಮಾ ಹಣ ಬರುವುದಿಲ್ಲ. ಜಿಲ್ಲೆಯಲ್ಲಿ ಇದುವರೆಗೆ 44 ಕೋಟಿಯಷ್ಟು ಬೆಳೆ ವಿಮೆಯ ಹಣ ರೈತರಿಗೆ ಪರಿಹಾರ ರೂಪದಲ್ಲಿ ದೊರಕಿದೆ’ ಎಂದು ಅಂತರವಳ್ಳಿ ವಿವರಿಸಿದರು.

ಬಿಲ್ ಕಳೆಯದೇ ಇಟ್ಟುಕೊಳ್ಳಿ…
ರೈತರು ತಾವು ಕೊಳ್ಳುವ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಇತ್ಯಾದಿಗಳ ರಸೀದಿಗಳನ್ನು (ಬಿಲ್) ಕಳೆಯಬಾರದು. ಹಂಗಾಮು ಋತು ಮುಗಿದು ಬೆಳೆ ಕೈಗೆ ಬರುವ ತನಕ ಇವುಗಳನ್ನು ಕಾಪಾಡಿಕೊಳ್ಳಬೇಕು ಎಂದು ಜಂಟಿ ನಿರ್ದೇಶಕರು ರೈತರಿಗೆ ಕಿವಿಮಾತು ಹೇಳಿದರು. `ಬೆಳೆ ಹಾನಿ ಸಂಭವಿಸಿದಾಗ ಬೀಜ ಅಥವಾ ಕೀಟನಾಶಕ ಕಳಪೆ ಗುಣಮಟ್ಟದ್ದು ಎಂಬುದು ಬೆಳಕಿಗೆ ಬಂದರೆ, ಸಂಬಂಧಿಸಿದ ಮಾರಾಟಗಾರರ ಮೇಲೆ ಕ್ರಮ ತೆಗೆದುಕೊಳ್ಳಲು ಬಿಲ್ ಇದ್ದರೆ ಸಾಧ್ಯ’ ಎಂದು ಅವರು ರೈತರಿಗೆ ವಿವರಿಸಿದರು. ಹಾಗೆಯೇ, ರೈತರು ಕೊಳ್ಳುವ ಗೊಬ್ಬರ, ಬೀಜ ಅಥವಾ ಕೀಟನಾಶಕಗಳಿಗೆ ಜಿಎಸ್‌ಟಿ ಬಿಲ್ ನೀಡುವುದು ಕಡ್ಡಾಯ. ಇಲ್ಲದಿದ್ದರೆ ಸಂಬಂಧಿಸಿದ ಮಾರಾಟಗಾರರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕೃಷಿ ಹೊಂಡ, ಬೆಳೆ ಸಮೀಕ್ಷೆ
ಜಿಲ್ಲೆಯಲ್ಲಿ ಈ ವರ್ಷ 235 ಕೃಷಿ ಹೊಂಡಗಳ ನಿರ್ಮಾಣ ಗುರಿ ಇದ್ದು, ಇನ್ನೂ ಹೆಚ್ಚಿನ ಕೃಷಿ ಹೊಂಡಗಳಿಗೆ ಬೇಡಿಕೆ ಬಂದಿದೆ. ಇವುಗಳನ್ನೂ ಕೂಡ ಈಡೇರಿಸಲಾಗುತ್ತದೆ ಎಂದು ಅಧಿಕಾರಿ ತಿಳಿಸಿದರು. ಬೆಳೆ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ರೈತರಿಗೆ ಮನವಿ ಮಾಡಿದ ಅವರು, ಅನೇಕ ರೈತರಿಗೆ ಇನ್ನೂ ಬೆಳೆ ಸಮೀಕ್ಷೆಯ ಬಗ್ಗೆ ಆಸಕ್ತಿ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಬೆಳೆ ಸಮೀಕ್ಷೆ ಮಾಡುವುದು ಸುಲಭವಾಗಿದೆ. ಇದಕ್ಕೆ ಏನೆಲ್ಲ ಪ್ರಕ್ರಿಯೆಗಳಿವೆ ಎಂಬುದನ್ನು ಸಮೀಪದ ರೈತ ಸಂಪರ್ಕ ಕೇಂದ್ರದಿಂದ ತಿಳಿದುಕೊಂಡು ಇದನ್ನು ಮಾಡಿಸಿಕೊಳ್ಳಿ. ಇಲ್ಲವಾದರೆ ಬೆಳೆ ಸಮಸ್ಯೆಯಾದಾಗ ಅಥವಾ ಹಾನಿಯಾದಾಗ ವಿಮೆ ಸೇರಿ ಸರ್ಕಾರದ ಸೌಲಭ್ಯಗಳು ದೊರೆಯುವುದಿಲ್ಲ ಎಂದು ಹೇಳಿದರು.

ದೇವರಿದ್ದಾನೆ…
ರೈತರ ಆತಂಕಕ್ಕೆ ಮಂಜುನಾಥ ಅಂತರವಳ್ಳಿ ಅತ್ಯಂತ ಸಮಾಧಾನ ಮತ್ತು ಮನೆಯ ಹಿರಿಯ ಸ್ಪಂದಿಸುವಂತೆ ಪ್ರತಿಕ್ರಿಯಿಸಿದ್ದು ಗಮನಾರ್ಹ. `ಹವಾಮಾನ ಇಲಾಖೆ ಈ ಸಂಬಂಧ ಎಚ್ಚರಿಕೆ ನೀಡಿದೆ. ಈ ವರ್ಷ ಮುಂಗಾರು ದುರ್ಬಲವಾಗುವ ಸಾಧ್ಯತೆಗಳಿವೆ ನಿಜ. ಆದರೆ ಹೆದರಬೇಡಿ. ದೇವರಿದ್ದಾನೆ. ಮುಂಗಾರು ಚೆನ್ನಾಗಿರಲಿ ಎಂದು ಎಲ್ಲರೂ ಪ್ರಾರ್ಥಿಸೋಣ’ ಎಂದು ನುಡಿದರು.

ಸಂಪರ್ಕ ಸಿಗದೇ ಮಿಸ್…!
ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಪ್ರಶ್ನೆಗಳನ್ನು ಕೇಳಲು ರೈತರು ಅದ್ಯಾವ ಪರಿ ತುದಿಗಾಲ ಮೇಲೆ ನಿಂತಿದ್ದರೆಂದರೆ, ಬೆಳಿಗ್ಗೆ 9 ಗಂಟೆಯಿಂದಲೇ `ಸಂಯುಕ್ತ ಕರ್ನಾಟಕ’ ಕಚೇರಿಗೆ ದೂರವಾಣಿ ಕರೆಗಳು ಜಿಲ್ಲೆಯ ಎಲ್ಲೆಡೆಯಿಂದ ಬರಲಾರಂಭಿಸಿದ್ದವು. ಫೋನ್ ಇನ್ 11ಕ್ಕೆ ಶುರುವಾಗುತ್ತದೆ ಎಂದು ಮುಂಚಿತವಾಗಿ ತಿಳಿಸಿದ್ದರೂ, ಮೊದಲೇ ಯತ್ನಿಸೋಣ; ಅಂದರೆ ನಮಗೂ ಪ್ರಶ್ನೆ ಕೇಳುವ ಅವಕಾಶ ದೊರೆಯಬಹುದು ಎನ್ನುವುದು ರೈತರ ಭಾವನೆಯಾಗಿತ್ತು. ಹಾಗೆಯೇ ಫೋನ್ ಇನ್ ಶುರುವಾದ ಮೇಲೆ ಒಂದು ಕ್ಷಣವೂ ಬಿಡುವಿಲ್ಲದಂತೆ ಕರೆಗಳ ಮಹಾಪೂರ ಹರಿದು ಬಂತು. ಇದರಿಂದಾಗಿ ಸುಮಾರು 150ಕ್ಕೂ ಹೆಚ್ಚು ರೈತರಿಗೆ ಸಂಪರ್ಕ ಸಿಗದೇ, ಮಿಸ್ ಕಾಲ್ ದಾಖಲಾದಂತಾಯಿತು!