SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಗೂಗಲ್ ಜೊತೆ ವಿಟಿಯು ಶೀಘ್ರದಲ್ಲೇ ಐತಿಹಾಸಿಕ ಒಡಂಬಡಿಕೆ

ಗೂಗಲ್ ಜೊತೆ ವಿಟಿಯು ಶೀಘ್ರದಲ್ಲೇ ಐತಿಹಾಸಿಕ ಒಡಂಬಡಿಕೆ

0
40

ದಾವಣಗೆರೆ: ‘ವಿಟಿಯು ಇತಿಹಾಸದಲ್ಲೇ ಮೊದಲ ಬಾರಿಗೆ ಜಾಗತಿಕ ತಂತ್ರಜ್ಞಾನ ದೈತ್ಯ ಗೂಗಲ್ ಸಂಸ್ಥೆಯೊಂದಿಗೆ ಒಡಂಬಡಿಕೆ (ಎಂಒಯು) ಮಾಡಿಕೊಳ್ಳುತ್ತಿದೆ.’ ದೇಶದ ಯಾವುದೇ ವಿಶ್ವವಿದ್ಯಾಲಯವು ಈವರೆಗೆ ಗೂಗಲ್ ಜೊತೆ ಇಂತಹ ಒಪ್ಪಂದ ಮಾಡಿಕೊಂಡಿಲ್ಲ ಎಂದು ವಿಟಿಯು ಕುಲಪತಿ ಡಾ.ಎಸ್. ವಿದ್ಯಾಶಂಕರ್ ತಿಳಿಸಿದರು.

ನಗರದ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯಡಿ ಸುಮಾರು 25 ಸಾವಿರ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಮೇಲೆ ಇಂಟರ್ನ್‌ಶಿಪ್ ತರಬೇತಿ ನೀಡಲು ಗೂಗಲ್ ಒಪ್ಪಿಕೊಂಡಿದೆ. ಮುಂಬರುವ ಜೂನ್ 25ರಂದು ನಡೆಯಲಿರುವ ಅಂತಾರಾಷ್ಟ್ರೀಯ ಶೃಂಗಸಭೆಯ ನಂತರ ಈ ಐತಿಹಾಸಿಕ ಒಪ್ಪಂದಕ್ಕೆ ಅಧಿಕೃತ ಸಹಿ ಬೀಳಲಿದೆ ಎಂದು ಮಾಹಿತಿ ನೀಡಿದರು.

ಕೇಂದ್ರೀಕೃತ ಪ್ಲೇಸ್‌ಮೆಂಟ್: ಈವರೆಗೆ ಕೇವಲ ಕೆಲವು ಆಯ್ದ ಕಾಲೇಜುಗಳಿಗೆ ಮಾತ್ರ ಸೀಮಿತವಾಗಿದ್ದ ಗೂಗಲ್ ಪ್ಲೇಸ್‌ಮೆಂಟ್ ಪ್ರಕ್ರಿಯೆ, ಇನ್ಮುಂದೆ ವಿಟಿಯುನ ಎಲ್ಲಾ ವಿದ್ಯಾರ್ಥಿಗಳಿಗೂ ಸಿಗಲಿದೆ. ವಿವಿ ವ್ಯಾಪ್ತಿಯಲ್ಲಿ 3 ಪ್ರಮುಖ ಸ್ಥಳಗಳಲ್ಲಿ ಕೇಂದ್ರೀಕೃತ ಪ್ಲೇಸ್‌ಮೆಂಟ್ ಕೇಂದ್ರಗಳನ್ನು ತೆರೆಯಲು ಗೂಗಲ್ ಸಮ್ಮತಿಸಿದೆ. ಇದರಿಂದ ಗ್ರಾಮೀಣ ಹಾಗೂ ಅಂಗಸಂಸ್ಥೆಗಳ ವಿದ್ಯಾರ್ಥಿಗಳಿಗೂ ಸಮಾನ ಉದ್ಯೋಗಾವಕಾಶ ಸಿಗಲಿದೆ ಎಂದರು.

ವಿಟಿಯು ಯಾವುದೇ ಐಐಟಿಗೂ ಕಮ್ಮಿಯಿಲ್ಲ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಿಗೆ ಮುನ್ನುಡಿ ಬರೆದಿದ್ದು, ಪ್ರಸ್ತುತ ದೇಶದ ಯಾವುದೇ ಐಐಟಿ ಸಂಸ್ಥೆಗಳಿಗೆ ಸರಿಸಮನಾಗಿ ಬೆಳೆದು ನಿಂತಿದೆ ಎಂದು ಅವರು ತಿಳಿಸಿದರು.

25 ಕೋಟಿ ವೆಚ್ಚದಲ್ಲಿ ಕ್ವಾಂಟಮ್ ಕಂಪ್ಯೂಟರ್ ಸ್ಥಾಪನೆ: ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ವಿಟಿಯು ಭಾರಿ ಹೂಡಿಕೆ ಮಾಡುತ್ತಿದೆ. ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ’19-ಕ್ಯುಬಿಟ್ ಕ್ವಾಂಟಮ್ ಕಂಪ್ಯೂಟರ್’ ಅನ್ನು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗುತ್ತಿದೆ. ಇದು ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಸಂಶೋಧನೆಗೆ ಅನುಕೂಲ ಮಾಡಿಕೊಡಲಿದೆ ಎಂದು ತಿಳಿಸಿದರು.

ದೇಶದ ಮೊದಲ ಇಂಟರ್ನ್‌ಶಿಪ್ ಪ್ಲಾಟ್‌ಫಾರ್ಮ್: ದೇಶದಲ್ಲೇ ಮೊದಲ ಬಾರಿಗೆ ವಿಟಿಯು ಸ್ವಂತ ಇಂಟರ್ನ್‌ಶಿಪ್ ಪ್ಲಾಟ್‌ಫಾರ್ಮ್ ಆರಂಭಿಸಿದೆ. ಇದರ ಮೂಲಕ 83 ಸಾವಿರ ವಿದ್ಯಾರ್ಥಿಗಳು ತಮ್ಮ ಮನೆಯಲ್ಲೇ ಕುಳಿತು ತಮಗೆ ಬೇಕಾದ ಉದ್ಯಮವನ್ನು (ಕಂಪನಿ) ಆಯ್ಕೆ ಮಾಡಿಕೊಂಡು ಇಂಟರ್ನ್‌ಶಿಪ್ ಮಾಡುವ ಅಪೂರ್ವ ಅವಕಾಶವನ್ನು ಕಲ್ಪಿಸಲಾಗಿದೆ ಮಾಹಿತಿ ನೀಡಿದರು.‌

‘ರಿವರ್ಸ್ ಇಂಜಿನಿಯರಿಂಗ್ ಲ್ಯಾಬ್’: ವಿದ್ಯಾರ್ಥಿಗಳಲ್ಲಿ ಕೇವಲ ಸೈದ್ಧಾಂತಿಕ ಜ್ಞಾನವಲ್ಲದೆ ಪ್ರಾಯೋಗಿಕ ಕೌಶಲ್ಯ ಹೆಚ್ಚಿಸಲು ‘ರಿವರ್ಸ್ ಇಂಜಿನಿಯರಿಂಗ್ ಲ್ಯಾಬ್’ ಮತ್ತು ಎರಡು ಬೃಹತ್ ವರ್ಕ್‌ಶಾಪ್ ಸ್ಥಾಪಿಸಲಾಗಿದೆ. ಯಾವುದೇ ಒಂದು ಉತ್ಪನ್ನದ ಪ್ರೋಟೋಟೈಪ್ ಅನ್ನು ಸ್ವತಃ ತಯಾರಿಸುವ ಶಕ್ತಿಯನ್ನು ವಿದ್ಯಾರ್ಥಿಗಳಿಗೆ ತುಂಬುವುದು ಇದರ ಉದ್ದೇಶವಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಲ್ಯಾಬ್‌ಗಳನ್ನು ‘24 ಗಂಟೆಯೂ ತೆರೆದಿಡಲು’ ವಿಶ್ವವಿದ್ಯಾಲಯ ಸಾಹಸಿಕ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದರು.