SK Home Ad
Home ಅಂಕಣ ಅಂಕಣ ಬರಹ: ಪ್ರಶ್ನೆ, ಗೊಂದಲಗಳ ಸುಳಿಯಲ್ಲಿ ಕನ್ನಡ ಶಿಕ್ಷಣ

ಅಂಕಣ ಬರಹ: ಪ್ರಶ್ನೆ, ಗೊಂದಲಗಳ ಸುಳಿಯಲ್ಲಿ ಕನ್ನಡ ಶಿಕ್ಷಣ

0
7

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ

ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಶೈಕ್ಷಣಿಕ ವ್ಯವಸ್ಥೆ ಬಹಳ ಗೋಜಲುಮಯವಾಗಿದೆ… ರಾಜ್ಯದ ಶಿಕ್ಷಣ ಕ್ಷೇತ್ರದಿಂದಲೇ, ನಲವತ್ತೈದು ವರ್ಷಗಳ ಕಾಲ ನಿರಂತರವಾಗಿ ಆಯ್ಕೆಯಾಗುತ್ತಿರುವ, ಶಿಕ್ಷಣ ಮಂತ್ರಿಗಳೂ ಆಗಿದ್ದ ಹಾಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತುಂಬ ಕಳಕಳಿಯಿಂದ ಈ ನೋವು ತೋಡಿಕೊಂಡಿದ್ದಾರೆ.

ಸರ್ಕಾರದ ಮತ್ತು ವ್ಯವಸ್ಥೆಯ ಭಾಗವಾಗಿದ್ದುಕೊಂಡು ಈ ರೀತಿ ಗಂಭೀರ ಆರೋಪ ಮಾಡಿರುವುದು ಬಹುಶಃ ಕರ್ನಾಟಕ ಇತಿಹಾಸದಲ್ಲಂತೂ ಪ್ರಥಮವೇನೋ!
ಹೊರಟ್ಟಿ ಸುಖಾಸುಮ್ಮನೇ ಆರೋಪ ಮಾಡುವವರಲ್ಲ. ಅದೂ ಶೈಕ್ಷಣಿಕ ಕ್ಷೇತ್ರದ ಬಗ್ಗೆ. ಅವರ ಪ್ರಧಾನ ಕಾಳಜಿ ಶಿಕ್ಷಕರ ಹಿತ ರಕ್ಷಣೆ; ಇದಕ್ಕೆ ಪೂರಕವಾದ ಅವರ ತುಡಿತ ಶೈಕ್ಷಣಿಕ ಕ್ಷೇತ್ರ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಕನ್ನಡ ಭಾಷೆಯ ಕಲಿಕೆಗಳಿಗೆ ಸಂಬಂಧಿಸಿದ್ದು. ಹೀಗಾಗಿ ಅವರು ಮೇಲಿನ ಮಾತು ಹೇಳುವಾಗ ಇಡೀ ಶಿಕ್ಷಣ ಕ್ಷೇತ್ರದೆಡೆಗಿನ ಅವರ ಅಪಾರ ಪ್ರೀತಿ ಹಾಗೂ ಬದ್ಧತೆಗಳು ಎದ್ದು ಕಾಣುತ್ತವೆ.

ಹೊರಟ್ಟಿಯವರೇ ಇಷ್ಟು ಗಂಭೀರವಾಗಿ ಆರೋಪಿಸುತ್ತಿದ್ದಾರೆ ಎಂದರೆ ಇದಕ್ಕೆ ಚಿಕಿತ್ಸೆ ನೀಡುವವರು ಯಾರು? ಸರಿಪಡಿಸುವವರು ಯಾರು? ಶಿಕ್ಷಣ ಸಚಿವರು ತುಂಬ ಉತ್ಸಾಹಿಗಳು. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ಮಾಡುವ ಕಾಳಜಿ ಹೊಂದಿದವರು ಎಂದು ಮಧು ಬಂಗಾರಪ್ಪ ಅವರನ್ನು ಪ್ರಶಂಸಿಸುತ್ತಲೇ ಇಡೀ ವ್ಯವಸ್ಥೆಯ ಗೋಜಲುಗಳ ಬಗ್ಗೆ ಸಭಾಪತಿಗಳು ಮಾಡಿರುವ ಆರೋಪ ರಾಜ್ಯಾದ್ಯಂತ ಪ್ರತಿಧ್ವನಿಸಿದೆ.

ಹೌದು. ಇನ್ನು ಎರಡು ದಿನಗಳಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗುತ್ತದೆ. ಈ ಸಾರೆ, ಮಕ್ಕಳು ಸಾಕಷ್ಟು ಗೊಂದಲದೊಂದಿಗೇ ಶಾಲಾ ಪ್ರವೇಶವನ್ನು ಮಾಡಬೇಕಾಗಿದೆ. ಕಳೆದ ಸಾರೆ ಹೋದ ಶಾಲೆಗೆ ಈ ಸಲವೂ ಹೋಗುವುದಾ? ಅಥವಾ ಕೆಪಿಎಸ್ (ಕರ್ನಾಟಕ ಪಬ್ಲಿಕ್ ಸ್ಕೂಲ್) ಸೇರುವುದಾ? ಈ ಹಿಂದೆ ಕಲಿಸಿದ ಶಿಕ್ಷಕರೇ ಈ ಸಲವೂ ಕಲಿಸುತ್ತಾರೋ? ಶಾಲೆ ಇದ್ದಲ್ಲೇ ಇದೆಯಾ? ಇಲ್ಲವೇ ಮೂರ್ನಾಲ್ಕು ಕಿಮೀ ದೂರ ಹೋಗಬೇಕಾ? ಹೊಸ ಪರಿಸರದಲ್ಲಿ ಕಲಿಯಬೇಕಾ? ಹಾಗೇ ಕಲಿಯಬೇಕಾದದ್ದು ಯಾವುದು? ಈ ಸಾರೆ ಎರಡು ಭಾಷೆಗಳನ್ನು ಮಾತ್ರ ಕಲಿಯುವುದಾ ಅಥವಾ ಈ ಮೊದಲಿನಂತೆ ಮೂರು ಭಾಷೆಗಳನ್ನು ಕಲಿಯುವುದಾ? ಎರಡೇ ಭಾಷೆ ಕಲಿಯಬೇಕೆಂದರೆ ಈ ಹಿಂದೆ ಪರೀಕ್ಷೆ ಬರೆದಿದ್ದ ತೃತೀಯ ಭಾಷೆಯನ್ನು ಸಂಪೂರ್ಣ ಬಿಟ್ಟು ಬಿಡುವುದಾ? ಮಾತೃ ಭಾಷೆ ಮತ್ತು ಇಂಗ್ಲಿಷ್ ಎರಡನ್ನು ಮಾತ್ರ ಕಲಿಯಬೇಕು ಎಂದಿದ್ದರೆ ಇಂಗ್ಲಿಷ್ ಕಲಿಸುವವರು ಯಾರು? ನಮ್ಮ ಮಾಸ್ತರರಿಗೆ ಇಂಗ್ಲಿಷ್ ಬರುತ್ತದೆಯೇ? ಇಷ್ಟಕ್ಕೂ ತಾನು ಸೇರುವ ಶಾಲೆಯಲ್ಲಿ ಶಿಕ್ಷಕರು ಇರುತ್ತಾರಾ? ಹೊಸ ಶಿಕ್ಷಕರು ಬರುತ್ತಾರಾ? ಅಥವಾ ಶಿಕ್ಷಕರಿಲ್ಲದೇ ವರ್ಷವಿಡೀ ಅಲೆದಾಡಬೇಕಾ?

ಕೆಪಿಎಸ್ ಶಾಲೆಗಳನ್ನು ತೆರೆಯುವುದಾಗಿ ಹೇಳಿಕೊಂಡಿರುವ ಸರ್ಕಾರ ಈಗಿರುವ ಎಷ್ಟು ಶಾಲೆಗಳನ್ನು ಮುಚ್ಚಲಿದೆ? ಕೆಪಿಎಸ್ ಶಾಲೆಯ ಗುಣಮಟ್ಟ ಮತ್ತು ಸ್ಥಳಾವಕಾಶ ಇವುಗಳನ್ನೆಲ್ಲ ಗಮನಿಸಲಾಗಿದೆಯೇ? ಈಗ ಮಕ್ಕಳು ಹೋಗುತ್ತಿದ್ದ ಶಾಲೆಯ ಕಥೆ ಏನು? ಅಲ್ಲಿ ಕಲಿಯುತ್ತಿದ್ದ ಪ್ರಾಥಮಿಕ ಶಾಲೆಯ ಮಕ್ಕಳು ಹೊಸ ಕೆಪಿಎಸ್ ಶಾಲೆಗೇ ಹೋಗಬೇಕಾ? ಅಥವಾ ಬೇರೆ ಖಾಸಗಿ ಶಾಲೆಗೆ ಹೋಗುವುದಾ? ಇಷ್ಟಕ್ಕೂ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ನಿಯಮ ನೀತಿ ಸರ್ವಸಮ್ಮತವಾ? ಅಲ್ಲಿ ಪರಿಣಿತ ಶಿಕ್ಷಕರು ಇರುತ್ತಾರಾ? ಈ ಯಾವ ಅನುಮಾನಗಳಿಗೂ ಸ್ಪಷ್ಟ, ನಿಖರವಾದ ಮಾಹಿತಿ ಇಲ್ಲ.

ಸಚಿವರು ಹೇಳುತ್ತಾರೆ: ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕಿನಿಂದ 2500 ಕೋಟಿ ರೂಪಾಯಿ (ಸಾಲ) ಪಡೆದು ಅತ್ಯಾಧುನಿಕ ಶಾಲೆಗಳನ್ನು ಕಟ್ಟುತ್ತೇವೆ ಎಂದು. ಇಷ್ಟಕ್ಕೂ ಇದುವರೆಗಿನ ಯಾವ ಕೆಪಿಎಸ್ ಸ್ಕೂಲ್ ಸುಧಾರಣೆ ಕಂಡಿದೆ? ಈ ಹಿಂದಿನ ಸ್ಥಿತಿ ಹಾಗೇ ಇದೆ. ಮಕ್ಕಳು ಮಾತ್ರ ದೂರದ ಊರುಗಳಿಂದ ಬರಬೇಕು. ಕೆಲ ಶಾಲೆಗಳನ್ನು ಮುಚ್ಚಿ ಒಂದು ಕೆಪಿಎಸ್ ಶಾಲೆ ಮಾಡುವುದರಿಂದ ಆಗಬಹುದಾದ ಸಮಸ್ಯೆಗಳ ಬಗ್ಗೆ ಚರ್ಚೆ ಇಲ್ಲ.

ಈಗಾಗಲೇ ಸುಮಾರು 16 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳು ಭರ್ತಿಯಾಗಬೇಕಿವೆ. ಗ್ರಾಮಾಂತರ ಪ್ರದೇಶಗಳಲ್ಲಿ ಶಾಲೆಗೆ ಮಕ್ಕಳಿಲ್ಲ. ಊರುಗಳಲ್ಲಿ ಯುವಕರೇ ನಗರ ಪ್ರದೇಶಗಳನ್ನು ಸೇರಿ, ಮಕ್ಕಳನ್ನು ನಗರ ಪ್ರದೇಶದ ಖಾಸಗಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. ದಶಕದ ಹಿಂದೆ ನೂರು ಇನ್ನೂರು ವಿದ್ಯಾರ್ಥಿಗಳಿರುತ್ತಿದ್ದ ಶಾಲೆಗಳು ಇಂದು ಐದು ಹತ್ತಕ್ಕೆ ಇಳಿದಿದೆ. ಒಂದೊಂದು ತರಗತಿಗೆ ಇಬ್ಬರು ಮೂವರು ಮಾತ್ರ ಮಕ್ಕಳಿರುವ ದುಃಸ್ಥಿತಿ ನಿರ್ಮಾಣವಾಗಿದೆ.

ಈ ಮಧ್ಯೆ ಕೆಪಿಎಸ್ ಶಾಲೆಯ ನೀತಿ ನಿಯಮಗಳ ಬಗ್ಗೆ ಸಾಕಷ್ಟು ವಾಗ್ವಾದ ವಿವಾದಗಳು ಉಂಟಾಗುತ್ತಿವೆ. ಹಾಗಂತ ಸಿದ್ದರಾಮಯ್ಯ ಅವರು ಹಿಂದಿನ ಸರ್ಕಾರದ ಅಂತ್ಯದಲ್ಲೇ ಕೆಪಿಎಸ್ ಸ್ಕೂಲ್ ನೀತಿಯನ್ನು ಜಾರಿಗೊಳಿಸಿದ್ದರು. ನಂತರ ಬಂದ ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಇದಕ್ಕೆ ಪ್ರಾಮುಖ್ಯತೆ ನೀಡಲಿಲ್ಲ. ಈಗ ಕಳೆದ ಎರಡು ವರ್ಷಗಳಿಂದ ಕೆಪಿಎಸ್ ಪರಿಕಲ್ಪನೆಗೆ ವೇಗ ಬಂದಿದೆ. ಹಾಗೆಯೇ 2500 ಕೋಟಿ ರೂಪಾಯಿ ನೆರವಿನ ಒಪ್ಪಂದ ಕೂಡ ಆಗಿದೆ. ಇದು ಒಂದು ಭಾಗ. ಪ್ರಸಕ್ತ ಸನ್ನಿವೇಶವನ್ನು ಗಮನಿಸೋಣ. ಸುಮಾರು 6 ಸಾವಿರಕ್ಕೂ ಅಧಿಕ ಪ್ರಾಥಮಿಕ ಶಾಲೆಗಳ ಕಟ್ಟಡಗಳು ಜೀರ್ಣಗೊಂಡಿವೆ. ಪೀಠೋಪಕರಣಗಳು ಮತ್ತು ಮೂಲಭೂತ ಸೌಕರ್ಯಗಳ ಕೊರತೆ ಇರುವುದನ್ನು ಸರ್ಕಾರವೇ ಒಪ್ಪಿಕೊಂಡಿದೆ.

ಕೆಪಿಎಸ್ ಸ್ಕೂಲಿಗೆ ಉಳಿದ ಶಾಲೆಗಳು ಸೇರ್ಪಡೆಯಾದರೆ ಆ ಮೂಲ ಶಾಲೆಯ ಜಮೀನು, ಕಟ್ಟಡ, ಕ್ರೀಡಾಂಗಣ ಇವೆಲ್ಲವನ್ನೂ ಕಾಯ್ದುಕೊಳ್ಳುವವರು ಯಾರು? ಇವನ್ನು ಮಾರಲಾಗುತ್ತದೆಯೇ? ಅಥವಾ ಇನ್ನೊಂದು ಸಾರ್ವಜನಿಕ ಉಪಯೋಗಕ್ಕೆ ಬಳಸಲಾಗುತ್ತದೆಯೇ? ಇದು ನಿರ್ಧಾರವಾಗಿಲ್ಲ. ಕೆಪಿಎಸ್ ಸ್ಕೂಲ್‌ಗಳಿಗೆ ಒಂದು ಎಸ್‌ಡಿಎಂಸಿ ಮತ್ತೊಂದು ಶಾಸಕರ ನೇತೃತ್ವದ ಉನ್ನತಾಧಿಕಾರ ಸಮಿತಿ! ಯಾರು ಯಾರ ಮೇಲೆ ಉಸ್ತುವಾರಿ? ಯಾರು ಹೆಚ್ಚು? ಯಾರು ಕಮ್ಮಿ? ಯಾರ ನಿರ್ದೇಶನ ಪಾಲಿಸಬೇಕು? ಇವೆಲ್ಲವುಗಳ ಗೊಂದಲ!!

ಈ ಮಧ್ಯೆ ದ್ವಿಭಾಷಾ ಸೂತ್ರ ಪ್ರಸಕ್ತ ವರ್ಷದಿಂದ ಕರ್ನಾಟಕದಲ್ಲಿ ಜಾರಿಗೊಂಡಿದೆ. ಮೊದಲಿದ್ದ ಎಸ್.ನಿಜಲಿಂಗಪ್ಪ ಸರ್ಕಾರ ಜಾರಿಗೆ ತಂದಿದ್ದಂತಹ ತ್ರಿಭಾಷಾ ಸೂತ್ರ, ಮಾತೃಭಾಷೆ ಕನ್ನಡವಾಗಿದ್ದರೆ, ಇಂಗ್ಲಿಷ್ ಮತ್ತು ಹಿಂದಿ; ಅನ್ಯಭಾಷಿಕರಾಗಿದ್ದರೆ ಕನ್ನಡ ತೃತೀಯ ಭಾಷೆ ಇವು ಕಡ್ಡಾಯವಾಗಿದ್ದವು. ಮೊನ್ನೆ ಎಸ್ಸೆಸ್ಸೆಲ್ಸಿಯಲ್ಲಿ ಹಿಂದಿ ಭಾಷೆ ಅಂಕ ಕಡ್ಡಾಯವಲ್ಲ ಎಂದು ಘೋಷಿಸಿ ಗೊಂದಲಕ್ಕೆ ಈಡಾಗಿದ್ದು ಗೊತ್ತಿದೆಯಲ್ಲ? ಈ ವಿಷಯ ನ್ಯಾಯಾಲಯದ ಕಟ್ಟೆಯನ್ನೂ ಏರಿತ್ತು. ಈ ವರ್ಷದಿಂದ ಹಿಂದಿ ಅಥವಾ ತೃತೀಯ ಭಾಷೆಗಳೇ ಕರ್ನಾಟಕದಲ್ಲಿ ಇಲ್ಲ. ಹಾಗಂತ ಕನ್ನಡ ಕಡ್ಡಾಯವೇ? ಅದೂ ಸ್ಪಷ್ಟತೆ ಇಲ್ಲ. ಇಂಗ್ಲಿಷ್ ಮಾತ್ರ ಕಡ್ಡಾಯ! ಇಂಗ್ಲಿಷ್ ಕಲಿಕೆಗಾಗಿ ಸಾವಿರಾರು ಶಿಕ್ಷಕರಿಗೆ ಇಂಗ್ಲಿಷ್ ತರಬೇತಿಯನ್ನು ನೀಡಲಾಗುತ್ತಿದೆ!!

ಈಗ ಬಂದಿರುವ ಪ್ರಶ್ನೆ ಮುಖ್ಯವಾಗಿ ಉರ್ದು ಭಾಷಿಕರದ್ದು. ಉರ್ದು ಮತ್ತು ಇಂಗ್ಲಿಷ್‌ಗಳನ್ನು ಕ್ರಮವಾಗಿ ಕಲಿತ ನಂತರ ಕನ್ನಡ ಕಲಿಕೆಯಿಂದಲೇ ಈ ಮಕ್ಕಳು ದೂರವಾಗುವ ಆತಂಕ ಎದುರಾಗಿದೆಯಲ್ಲ, ಇದಕ್ಕೇನು ಮಾಡುವುದು? ಕರ್ನಾಟಕದಲ್ಲಿ ಕನ್ನಡ ಕಲಿಯಬೇಕೆನ್ನುವ ಆಕಾಂಕ್ಷೆ ಇವರಿಗೂ ಇರುತ್ತದಲ್ಲವೇ? ಹಾಗೇ ತಮಿಳು, ತೆಲಗು, ಮಲಯಾಳಿ ಅಥವಾ ಹಿಂದಿ ಭಾಷಿಕರು; ಹೊರ ರಾಜ್ಯಗಳಿಂದ ಬಂದವರು, ಅಥವಾ ಇಲ್ಲಿಯೇ ಇದ್ದು ಮಾತೃಭಾಷೆ ಬೇರೆ ಇರುವವರು ಕನ್ನಡ ಕಲಿಯದಿದ್ದರೂ ನಡೆದೀತು ಎಂದಂತಾಯಿತಲ್ಲವೇ?

ಕನ್ನಡ ಪರ ಹೋರಾಟಗಾರರು `ಅನ್ಯ ಭಾಷಿಕರಿಗೆ ಕನ್ನಡ ಕಲಿಕೆಗೆ ಅವಕಾಶವೇ ಇಲ್ಲ’ದಿರುವ ಕುರಿತು ಈಗ ಪ್ರತಿಕ್ರಿಯಿಸುತ್ತಿಲ್ಲ. ದ್ವಿಭಾಷಾ ನೀತಿಯೇ ಸರಿ ಎಂದು ರಾಜಕೀಯ ಕಾರಣಗಳಿಗೋ, ಇನ್ಯಾವುದೋ ಪ್ರತಿಷ್ಠೆಗೋ ಹೇಳುತ್ತಿದ್ದಾರೆ. ಮಕ್ಕಳ ಮೇಲಿನ ಓದಿನ ಒತ್ತಡ ಕಡಿಮೆಯಾಗುತ್ತದೆ ಎನ್ನುವುದನ್ನು ಒಪ್ಪಿಕೊಂಡರೂ ಕೂಡ ರಾಜ್ಯದಲ್ಲಿ ಅನ್ಯಭಾಷಿಕರು ಕನ್ನಡ ಕಲಿಯದೇ ಬದುಕಬಹುದು ಎಂದು ಒಪ್ಪಿಕೊಂಡಂತೆ ಆಗುತ್ತದಲ್ಲವೇ?

ದ್ವಿಭಾಷಾ ಸೂತ್ರವನ್ನು ಒಪ್ಪಿಕೊಂಡವರು ಈಗ ಕನ್ನಡಕ್ಕೆ ಕುತ್ತು ಬರುವುದರ ಬಗ್ಗೆ ಗಂಭೀರವಾಗಿ ಆಲೋಚಿಸಿದಂತೆ ಕಾಣುತ್ತಿಲ್ಲ. ಈ ಎಲ್ಲ ತಳಮಳಗಳು – ಗೋಜಲುಗಳ ಮಧ್ಯೆ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ತಾವೇನು ಕಲಿಯಬೇಕೆನ್ನುವುದೇ ಈಗ ದೊಡ್ಡ ಪ್ರಶ್ನೆಯಾಗಿದೆ. ಇವೆಲ್ಲವುಗಳನ್ನು ಹೊತ್ತು ವಿದ್ಯಾರ್ಥಿಗಳು ನಾಳೆ ಶಾಲೆ ಮೆಟ್ಟಿಲೇರಲಿರಬೇಕಿದೆ.

ಇದೆಲ್ಲದರ ನಡುವೆ ಈಗ ಮತ್ತೊಂದು ಪ್ರಶ್ನೆ ಮೂಡಿದೆ… ಅದೆಂದರೆ ಈಗಿನ ಶಿಕ್ಷಣ ಮಂತ್ರಿಗಳೇ ನಾಳೆಯೂ ಇರಲಿದ್ದಾರಾ ಎನ್ನುವುದು. ಮಕ್ಕಳಿಗೆ ಶಾಲಾ ಬದಲಾವಣೆಯೇ; ಇದೇ ಶಿಕ್ಷಣ ಮಂತ್ರಿಗಳಿಂದ ಮುಂದಿನ ಶೈಕ್ಷಣಿಕ ವರ್ಷದ ಪ್ರಕ್ರಿಯೆಗಳು ನಡೆದು ಎದ್ದಿರುವ ಈ ಎಲ್ಲ ಗೊಂದಲಗಳಿಗೆ ಉತ್ತರ ದೊರೆಯುತ್ತದೆಯೇ ಗೊತ್ತಿಲ್ಲ !!