SK Home Ad
Home ಕ್ರೀಡೆ IPL 2026: ಫೈನಲ್‌ಗೇರಲು ರಾಜಸ್ಥಾನಕ್ಕೆ ಇನ್ನೊಂದೇ ಮೆಟ್ಟಿಲು

IPL 2026: ಫೈನಲ್‌ಗೇರಲು ರಾಜಸ್ಥಾನಕ್ಕೆ ಇನ್ನೊಂದೇ ಮೆಟ್ಟಿಲು

0
6

ಚಂಡೀಗಢ: ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಭರ್ಜರಿ ಜಯ ದಾಖಲಿಸುವ ಮೂಲಕ ರಾಜಸ್ಥಾನ ರಾಯಲ್ಸ್‌ ಐಪಿಎಲ್‌ನ ಎರಡನೇ ಕ್ವಾಲಿಫೈಯರ್‌ ಪಂದ್ಯಕ್ಕೆ ಅರ್ಹತೆ ಪಡೆಯಿತು.

ರಾಜಸ್ಥಾನ ರಾಯಲ್ಸ್‌ ನೀಡಿದ್ದ 244 ರನ್‌ಗಳ ಬೃಹತ್‌ ಗುರಿ ಬೆನ್ನಟ್ಟಿದ ಎಸ್‌ಆರ್‌ಎಚ್‌ 19.2 ಓವರ್‌ಗಳಲ್ಲಿಯೇ 196 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡು ಸೋಲಿಗೆ ಶರಣಾಯಿತು.

ಆರಂಭದಲ್ಲಿಯೇ ಅಭಿಷೇಕ ಶರ್ಮಾ ಖಾತೆ ತೆರೆಯದೇ ಔಟಾದರು. ಇಶಾನ್‌ ಕಿಶನ್‌ (33) ಮತ್ತು ಸ್ಮರಣ್ ರವಿಚಂದ್ರನ್ (1) ಮತ್ತು ಟ್ರಾವಿಸ್‌ ಹೆಡ್‌ (17) ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್‌ ಪರೇಡ್‌ ನಡೆಸಿದರು.

ಹೈದ್ರಾಬಾದ್‌ ಕೇವಲ 4.4 ಓವರ್‌ಗಳಲ್ಲಿಯೇ 57 ರನ್‌ಗಳಿಗೆ ಪ್ರಮುಖ ನಾಲ್ಕು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಳಿಕ ಹೆನ್ರಿಕ್ ಕ್ಲಾಸೆನ್ (18) ಅಲ್ಪ ಕಾಣಿಕೆ ನೀಡಿ ಹೊರನಡೆದರು.

ನಿತೀಶ್ ಕುಮಾರ್ ರೆಡ್ಡಿ ಮತ್ತು ಸಲಿಲ್ ಅರೋರಾ ಜೋಡಿ ಕೇವಲ 24 ಎಸೆತದಲ್ಲಿ 56 ರನ್‌ಗಳ ಜತೆಯಾಟ ನಡೆಸಿ ತಂಡಕ್ಕೆ ಆಸರೆಯಾದರಾದರೂ ತಂಡವನ್ನು ಸಂಕಷ್ಟದಿಂದ ಪಾರು ಮಾಡಲಾಗಲಿಲ್ಲ.

ನಿತೀಶ್ ಕುಮಾರ್ ರೆಡ್ಡಿ 20 ಎಸೆತದಲ್ಲಿ 38 ರನ್‌ಗಳಿಸಿ ಔಟಾಗುತ್ತಿದ್ದಂತೆ ಮತ್ತೆ ಒಂದರ ಹಿಂದೆ ಒಂದರಂತೆ ವಿಕೆಟ್‌ ಉರುಳಲು ಶುರುವಾಯಿತು. ಕೊನೆಯಲ್ಲಿ ಶಿವಂಗ್ ಕುಮಾರ್ ತಂಡದ ಸೋಲಿನ ಅಂತರವನ್ನು ಕಡಿಮೆ ಮಾಡಿದರು.

ರಾಜಸ್ಥಾನ ಪರ ಜೋಫ್ರಾ ಆರ್ಚರ್ 58ಕ್ಕೆ 3 ವಿಕೆಟ್‌ ಉರುಳಿಸಿದರೆ, ನಾಂಡ್ರೆ ಬರ್ಗರ್, ರವೀಂದ್ರ ಜಡೇಜಾ ತಲಾ ಎರಡು ವಿಕೆಟ್‌ ಪಡೆದರು.

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲ ಬ್ಯಾಟಿಂಗ್‌ ಮಾಡಿದ ಆರ್‌ಆರ್‌ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 243 ರನ್‌ ಗಳಿಸಿತು.

ಆರಂಭದಲ್ಲಿಯೇ ಹೈದರಾಬಾದ್‌ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ವೈಭವ್‌ ಕೇವಲ 29 ಎಸೆತದಲ್ಲಿ 5 ಬೌಂಡರಿ, 12 ಸಿಕ್ಸರ್‌ ಸೇರಿದಂತೆ 97 ರನ್‌ಗಳಿಸಿ ಪ್ರಫುಲ್ ಹಿಂಗೆ ಎಸೆತದಲ್ಲಿ ಸ್ಮರಣ್ ರವಿಚಂದ್ರನ್‌ಗೆ ಕ್ಯಾಚ್‌ ನೀಡಿ ಔಟಾದರು.

ವೈಭವ್‌ ಔಟಾಗುವ ಹೊತ್ತಿಗೆ ರಾಜಸ್ಥಾನ ಕೇವಲ 8 ಓವರ್‌ಗಳಲ್ಲಿಯೇ 125 ರನ್‌ ಕಲೆಹಾಕಿತ್ತು. ತಂಡದ ಮೊತ್ತ 12 ಸೇರುವಷ್ಟರಲ್ಲಿಯೇ ಯಶಸ್ವಿ ಜೈಸ್ವಾಲ್‌ (29) ಕೂಡ ಪೆವಿಲಿಯನ್‌ ಕಡೆಗೆ ಸಾಗಿದರು.

ಮೂರನೇ ವಿಕೆಟ್‌ಗೆ ಧ್ರುವ್ ಜುರೆಲ್ ಮತ್ತು ರಿಯಾನ್ ಪರಾಗ್ ಜೋಡಿ ಕೇವಲ 21 ಎಸೆತದಲ್ಲಿ 55 ರನ್‌ಗಳ ಜತೆಯಾಟ ನಡೆಸಿ ತಂಡದ ಮೊತ್ತವನ್ನು 13.5 ಓವರ್‌ಗಳಲ್ಲಿ 192ಕ್ಕೆ ಕೊಂಡೊಯ್ದರು. ಆದರೆ, ಆಗ ಪ್ರಫುಲ್ ಹಿಂಗೆ ಈ ಜೋಡಿಯನ್ನು ಬೇರ್ಪಡಿಸಿದರು.

ಜುರೆಲ್ 21 ಎಸೆತದಲ್ಲಿ 5 ಬೌಂಡರಿ, 3 ಸಿಕ್ಸರ್‌ನಿಂದ 50 ರನ್‌ಗಳಿಸಿ ಔಟಾದರೆ, ರಿಯಾನ್‌ ಪರಾಗ್‌ 12 ಎಸೆತದಲ್ಲಿ 26 ರನ್‌ಗಳಿಸಿ ಹೊರನಡೆದರು. ಬಳಿಕ ಡೊನೊವನ್ ಫೆರೀರಾ (12), ದಾಸುನ್ ಶನಕ (5) ಅಲ್ಪ ಕಾಣಿಕೆ ನೀಡಿ ಔಟಾದರು.

ಸನ್‌ರೈಸರ್ಸ್‌ ಹೈದರಾಬಾದ್‌ ಪರ ಪ್ರಫುಲ್ ಹಿಂಗೆ 54ಕ್ಕೆ 3 ವಿಕೆಟ್‌ ಉರುಳಿಸಿದರು. ನಿತೀಶ್ ಕುಮಾರ್ ರೆಡ್ಡಿ 12ಕ್ಕೆ 1, ಶಿವಂಗ್ ಕುಮಾರ್ 19ಕ್ಕೆ 1 ಮತ್ತು ಈಶಾನ್ ಮಾಲಿಂಗ 40ಕ್ಕೆ 1 ವಿಕೆಟ್‌ ಪಡೆದರು.