SK Home Ad
Home ನಮ್ಮ ಜಿಲ್ಲೆ ಬಳ್ಳಾರಿ ಸಚಿವ ಸಂಪುಟ ಬದಲಾವಣೆ ಚರ್ಚೆ ನಡುವೆ ನಾಗೇಂದ್ರ ಪರ ಬ್ಯಾಟಿಂಗ್

ಸಚಿವ ಸಂಪುಟ ಬದಲಾವಣೆ ಚರ್ಚೆ ನಡುವೆ ನಾಗೇಂದ್ರ ಪರ ಬ್ಯಾಟಿಂಗ್

0
99

ಸಚಿವ ಸಂಪುಟ ಪುನರ್ರಚನೆ ಆದರೆ ಬಿ. ನಾಗೇಂದ್ರಗೆ ಸ್ಥಾನ ಸಿಗಲಿ: ಶಾಸಕ ನಾರಾ ಭರತ್ ರೆಡ್ಡಿ

ಬಳ್ಳಾರಿ: ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ಪುನರ್ರಚನೆ ಮತ್ತು ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗಳು ಜೋರಾಗಿರುವ ನಡುವೆಯೇ, ನಾರಾ ಭರತ್ ರೆಡ್ಡಿ ಮಹತ್ವದ ಹೇಳಿಕೆ ನೀಡಿದ್ದಾರೆ. ಸಚಿವ ಸಂಪುಟ ಪುನರ್ರಚನೆಯಾದರೆ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಬೇಕು ಎಂಬುದು ತಮ್ಮ ಹಾಗೂ ಜಿಲ್ಲೆಯ ಶಾಸಕರ ಅಭಿಪ್ರಾಯ ಎಂದು ಅವರು ತಿಳಿಸಿದ್ದಾರೆ.

ಬುಧವಾರ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿ. ನಾಗೇಂದ್ರ ಅವರು ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಅರ್ಹರು ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಹೀಟ್‌ವೇವ್ ಸಂಕಷ್ಟ: ಜನರಿಗೆ ಪ್ರಧಾನಿ ಮೋದಿ ಮಹತ್ವದ ಸಲಹೆ

“ಜಿಲ್ಲೆಯ ಶಾಸಕರ ಅಭಿಪ್ರಾಯವೂ ಇದೇ” : “ಹೊಸದಾಗಿ ಸಚಿವ ಸಂಪುಟ ಪುನರ್ರಚನೆಯಾದರೆ ಬಿ. ನಾಗೇಂದ್ರ ಅವರಿಗೆ ಸಚಿವ ಸ್ಥಾನ ಸಿಗಬೇಕು. ಇದು ಕೇವಲ ನನ್ನ ಅಭಿಪ್ರಾಯ ಮಾತ್ರವಲ್ಲ, ಜಿಲ್ಲೆಯ ಇತರ ಶಾಸಕರ ಅಭಿಪ್ರಾಯವೂ ಇದೇ” ಎಂದು ನಾರಾ ಭರತ್ ರೆಡ್ಡಿ ಹೇಳಿದರು. ರಾಜಕೀಯ ವಲಯದಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತ ಚರ್ಚೆಗಳು ನಡೆಯುತ್ತಿರುವ ಸಮಯದಲ್ಲಿ ಈ ಹೇಳಿಕೆ ಗಮನ ಸೆಳೆದಿದೆ.

ಸಿಎಂ ಬದಲಾವಣೆ ಬಗ್ಗೆ ಪ್ರತಿಕ್ರಿಯೆ : ಮುಖ್ಯಮಂತ್ರಿ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ತಮ್ಮ ಬಳಿ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು. “ಶಾಸಕಾಂಗ ಪಕ್ಷದ ಸಭೆ ಕುರಿತೂ ನನಗೆ ಯಾವುದೇ ಕರೆ ಬಂದಿಲ್ಲ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನಾನು ಏನೂ ಹೇಳಲು ಸಾಧ್ಯವಿಲ್ಲ” ಎಂದರು.

“ಹೈಕಮಾಂಡ್ ತೀರ್ಮಾನವೇ ಅಂತಿಮ” : ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಅಥವಾ ಸಚಿವ ಸಂಪುಟ ಪುನರ್ರಚನೆ ಕುರಿತ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಹೈಕಮಾಂಡ್‌ಗೆ ಸೇರಿದ್ದು, ಅದರಂತೆ ತಾವು ನಡೆದುಕೊಳ್ಳುತ್ತೇವೆ ಎಂದು ಶಾಸಕ ಹೇಳಿದರು. “ಸಚಿವ ಸಂಪುಟ ಪುನರ್ರಚನೆ ಅಥವಾ ಸಿಎಂ ಬದಲಾವಣೆ ವಿಷಯದಲ್ಲಿ ಮಲ್ಲಿಕಾರ್ಜುನ್‌ ಖರ್ಗೆ ಮತ್ತು ರಾಹುಲ್‌ ಗಾಂಧಿ ಅವರ ತೀರ್ಮಾನವೇ ಅಂತಿಮ. ಅವರು ಹೇಳಿದಂತೆ ನಾವು ನಡೆದುಕೊಳ್ಳುತ್ತೇವೆ” ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಮಾಜಿ CM ಪಿಣರಾಯಿ ವಿಜಯನ್ ನಿವಾಸ ಸೇರಿ 10 ಕಡೆ ED ದಾಳಿ

ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆ ಜೋರು : ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ, ಸಚಿವ ಸಂಪುಟ ಪುನರ್ರಚನೆ ಮತ್ತು ಅಸಮಾಧಾನಗೊಂಡ ಶಾಸಕರ ಸಮಾಧಾನ ಕುರಿತು ರಾಜಕೀಯ ಚರ್ಚೆಗಳು ಹೆಚ್ಚಾಗಿವೆ. ಈ ಹಿನ್ನೆಲೆ ನಾರಾ ಭರತ್ ರೆಡ್ಡಿ ಅವರ ಹೇಳಿಕೆ ಕಾಂಗ್ರೆಸ್ ಒಳರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಅಯಾಜ್ ಅಹ್ಮದ್, ಸುಬ್ಬರಾಯುಡು, ಮೊಹಮ್ಮದ್ ಭಾಯ್, ಡಿ.ಸೂರಿ, ಬಿಆರೆಲ್ ಸೀನಾ, ಅಲ್ಲಾಬಕಷ್, ಹೊನ್ನಪ್ಪ, ಕಣೇಕಲ್ ಮೆಹಬೂಬಸಾಬ, ಪಾಲಿಕೆಯ ಸದಸ್ಯ ಜಬ್ಬಾರ್ ಮತ್ತಿತರರು ಹಾಜರಿದ್ದರು.