SK Home Ad
Home ಸುದ್ದಿ ದೇಶ NEET- ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಬಂಧಿತರ ಸಂಖ್ಯೆ 13ಕ್ಕೆ ಏರಿಕೆ

NEET- ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಬಂಧಿತರ ಸಂಖ್ಯೆ 13ಕ್ಕೆ ಏರಿಕೆ

0
64

ಕೋಚಿಂಗ್ ಸೆಂಟರ್ ಜಾಲ ಬಯಲು?: NEET-UG 2026 ಪ್ರಕರಣದಲ್ಲಿ CBI ಭರ್ಜರಿ ಆ್ಯಕ್ಷನ್

ನವದೆಹಲಿ : ದೇಶವ್ಯಾಪಿ ಸಂಚಲನ ಮೂಡಿಸಿದ್ದ NEET-UG 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ CBI ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಒಟ್ಟು ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

ಸಿಬಿಐ ತನಿಖೆಯ ಪ್ರಕಾರ, ಬಂಧಿತರಾದವರಲ್ಲಿ ಒಬ್ಬರಾದ Dr ಮನೋಜ್ ಶಿರೂರೆ ಅವರು ಮಹಾರಾಷ್ಟ್ರದ ಲಾತೂರ್ ಮೂಲದ ವೈದ್ಯರಾಗಿದ್ದಾರೆ. ಮತ್ತೊಬ್ಬ ಆರೋಪಿ ಜಸ್ ಹರ್ಷದ್‌ಕುಮಾರ್ ಶಾ ಪುಣೆ ಮೂಲದ ಕೋಚಿಂಗ್ ಸಂಸ್ಥೆಯಲ್ಲಿ ಭೌತಶಾಸ್ತ್ರ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ಸಿಗಲು ನೆರವಾದ ಆರೋಪ : ಸಿಬಿಐ ಮಾಹಿತಿ ಪ್ರಕಾರ, ಡಾ. ಮನೋಜ್ ಶಿರೂರೆ ಅವರು ಆರೋಪಿ ಪಿವಿ ಕುಲಕರ್ಣಿ ಮೂಲಕ ಸೋರಿಕೆಯಾದ ರಸಾಯನಶಾಸ್ತ್ರ ಪ್ರಶ್ನೆಗಳನ್ನು ಕೆಲವು ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ.

ವಿಶೇಷವಾಗಿ, ಕೋಚಿಂಗ್ ಸೆಂಟರ್ ಮಾಲೀಕರ ಮಗ ಸೇರಿ ಮೂವರು ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಮುನ್ನ ಪ್ರಶ್ನೆಪತ್ರಿಕೆ ಮಾಹಿತಿ ದೊರಕುವಂತೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಮೂಲಕ ವೈದ್ಯರು ಮತ್ತು ಕೋಚಿಂಗ್ ವಲಯದ ಕೆಲವರ ನಡುವೆ ನಡೆದಿದ್ದ ಸಂಚು ತನಿಖಾಧಿಕಾರಿಗಳ ಗಮನ ಸೆಳೆದಿದೆ.

ಭೌತಶಾಸ್ತ್ರ ಪ್ರಶ್ನೆ ಸೋರಿಕೆ ಲಿಂಕ್ ಪತ್ತೆ : ಬಂಧಿತ ಮತ್ತೊಬ್ಬ ಆರೋಪಿ ತೇಜಸ್ ಹರ್ಷದ್‌ಕುಮಾರ್ ಶಾ ಅವರು ಪುಣೆಯ ಪುಣೆ ಮೂಲದ ಕೋಚಿಂಗ್ ಸೆಂಟರ್ ಡಾ. ಅಭಂಗ್ ಪ್ರಭು ಮೆಡಿಕಲ್ ಅಕಾಡೆಮಿ (APMA) ನಲ್ಲಿ ಭೌತಶಾಸ್ತ್ರ ಅಧ್ಯಾಪಕರಾಗಿದ್ದಾರೆ. ಸಿಬಿಐ ತನಿಖೆಯಲ್ಲಿ, ಅವರು ಆರೋಪಿ ಮನೀಶಾ ಹವಾಲ್ದಾರ್ ಅವರಿಂದ ಸೋರಿಕೆಯಾದ ಭೌತಶಾಸ್ತ್ರ ಪ್ರಶ್ನೆಗಳನ್ನು ಪಡೆದಿರುವುದು ಬೆಳಕಿಗೆ ಬಂದಿದೆ. ಪರೀಕ್ಷೆಗೆ ಮುನ್ನ ಪ್ರಶ್ನೆಪತ್ರಿಕೆ ಹಂಚಿಕೆಗಾಗಿ ಕೋಚಿಂಗ್ ನೆಟ್‌ವರ್ಕ್ ಬಳಸಲಾಗಿತ್ತೇ ಎಂಬ ಅನುಮಾನ ಇದೀಗ ಮತ್ತಷ್ಟು ಬಲವಾಗಿದೆ.

49 ಕಡೆ CBI ಶೋಧ : ಈ ಬಹುಮಟ್ಟದ ಪ್ರಕರಣದಲ್ಲಿ ಸಿಬಿಐ ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ 49 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. ದಾಳಿಗಳ ವೇಳೆ ಹಲವು ಮಹತ್ವದ ದಾಖಲೆಗಳು, ಲ್ಯಾಪ್‌ಟಾಪ್‌ಗಳು, ಹಾರ್ಡ್‌ಡಿಸ್ಕ್‌ಗಳು ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಶಪಡಿಸಿಕೊಂಡ ಡಿಜಿಟಲ್ ಸಾಧನಗಳ ತಾಂತ್ರಿಕ ವಿಶ್ಲೇಷಣೆ ನಡೆಯುತ್ತಿದ್ದು, ಪ್ರಶ್ನೆಪತ್ರಿಕೆ ಸೋರಿಕೆಯ ಸಂಪೂರ್ಣ ಸರಪಳಿಯನ್ನು ಪತ್ತೆಹಚ್ಚಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

ದೇಶವ್ಯಾಪಿ ಶಿಕ್ಷಣ ವ್ಯವಸ್ಥೆಗೆ ಆತಂಕ : NEET-UG ಪರೀಕ್ಷೆ ದೇಶದ ಅತ್ಯಂತ ಪ್ರಮುಖ ವೈದ್ಯಕೀಯ ಪ್ರವೇಶ ಪರೀಕ್ಷೆಯಾಗಿರುವುದರಿಂದ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆ ಕುರಿತೂ ಪ್ರಶ್ನೆಗಳು ಎದ್ದಿವೆ.

ಈ ಪ್ರಕರಣದಲ್ಲಿ ಇನ್ನೂ ಹೆಚ್ಚಿನ ಬಂಧನಗಳ ಸಾಧ್ಯತೆ ಇರುವುದಾಗಿ ತನಿಖಾ ಮೂಲಗಳು ತಿಳಿಸಿವೆ. ಪ್ರಶ್ನೆಪತ್ರಿಕೆ ಸೋರಿಕೆ ಹೇಗೆ ನಡೆದಿದೆ, ಯಾರ್ಯಾರು ಭಾಗಿಯಾಗಿದ್ದರು ಮತ್ತು ಎಷ್ಟು ವಿದ್ಯಾರ್ಥಿಗಳಿಗೆ ಪ್ರಶ್ನೆಗಳು ತಲುಪಿದ್ದವು ಎಂಬುದರ ಕುರಿತು ಸಿಬಿಐ ತನಿಖೆ ಮುಂದುವರಿಸಿದೆ.