PGCET : ಎಂಬಿಎ, ಎಂಸಿಎ, ಎಂಇ ಮತ್ತು ಎಂ.ಟೆಕ್ ಕೋರ್ಸ್ಗಳ ಪ್ರವೇಶಕ್ಕಾಗಿ ಕಾಯುತ್ತಿದ್ದ ಪಿಜಿಸಿಇಟಿ (PGCET) ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಸಿಹಿಸುದ್ದಿ ನೀಡಿದೆ. ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಎಲ್ಲ ನಾಲ್ಕು ಚಾಯ್ಸ್ಗಳನ್ನು ದಾಖಲಿಸಲು ಮುಕ್ತ ಅವಕಾಶ ನೀಡಲಾಗಿದ್ದು, ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಸಂಘಟನೆಯ ನಿರಂತರ ಪ್ರತಿಭಟನೆಗೆ ಕೊನೆಗೂ ಮಣಿದಿದೆ.
ಈ ಕುರಿತು ಮಾಹಿತಿ ನೀಡಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ, ಮೊದಲ ಸುತ್ತಿನಲ್ಲಿ ಸೀಟು ಪಡೆದವರು ಅಕ್ಟೋಬರ್ 13ರ ಬೆಳಗ್ಗೆ 10 ಗಂಟೆಯೊಳಗೆ ತಮ್ಮ ಚಾಯ್ಸ್ ದಾಖಲಿಸಬಹುದು ಎಂದು ತಿಳಿಸಿದ್ದಾರೆ.
ಈಗಾಗಲೇ ಕಾಲೇಜು ಪ್ರವೇಶ ಪಡೆದವರು ಹಾಗೂ ಸೀಟು ಖಾತರಿ ಚೀಟಿ ಡೌನ್ಲೋಡ್ ಮಾಡಿಕೊಂಡವರಿಗೂ ಚಾಯ್ಸ್-2 ಆಯ್ಕೆ ಮಾಡಿ ಉತ್ತಮ ಕಾಲೇಜಿಗೆ ಅಪ್ಗ್ರೇಡ್ ಆಗಲು ಅವಕಾಶ ಕಲ್ಪಿಸಲಾಗಿದೆ. ಅಷ್ಟೇ ಅಲ್ಲದೆ, ಅಕ್ಟೋಬರ್ 13ರ ಮಧ್ಯಾಹ್ನ 2ರಿಂದ ಅಕ್ಟೋಬರ್ 15ರ ಬೆಳಗ್ಗೆ 10 ಗಂಟೆಯವರೆಗೆ ಆಪ್ಷನ್ಗಳನ್ನು ಮರುಹೊಂದಿಸಲು (Re-arrange) ಅವಕಾಶ ನೀಡಲಾಗಿದೆ.
ಪಿಜಿಸಿಇಟಿಗೆ ಇನ್ನೂ ಎರಡು ಸುತ್ತಿನ ಕೌನ್ಸೆಲಿಂಗ್ ನಡೆಸಲು ಅನುಮತಿ ಕೋರಿ ಹಾಗೂ ಪ್ರವೇಶ ವೇಳಾಪಟ್ಟಿ ವಿಚಾರವಾಗಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ನ್ಯಾಯಾಲಯದ ಅಂತಿಮ ತೀರ್ಮಾನ ಬರುವವರೆಗೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಸಿಕ್ಕ ಸೀಟು ಅಂತಿಮಗೊಳಿಸಲು ಚಾಯ್ಸ್-1, ಅಪ್ಗ್ರೇಡ್ಗೆ ಚಾಯ್ಸ್-2, ಸೀಟು ತಿರಸ್ಕರಿಸಿ ಮುಂದಿನ ಸುತ್ತಿಗೆ ಹೋಗಲು ಚಾಯ್ಸ್-3 ಹಾಗೂ ಕೌನ್ಸೆಲಿಂಗ್ನಿಂದ ಸಂಪೂರ್ಣ ಹೊರಬರಲು ಚಾಯ್ಸ್-4 ದಾಖಲಿಸಬಹುದಾಗಿದೆ.






















