ಕೋಗಿಲಬನ ಭಾಗದ ಪಾಶ್ವದ ಗೋಡೆ ಕುಸಿತದ ಭೀತಿ – ಸಾರ್ವಜನಿಕರ ಸುರಕ್ಷತೆಗೆ ತಕ್ಷಣ ಕ್ರಮ ಅಗತ್ಯ.
ದಾಂಡೇಲಿ (ಉತ್ತರ ಕನ್ನಡ) : ದಾಂಡೇಲಿಯ ಕುಳಗಿ ರಸ್ತೆಯಲ್ಲಿರುವ ಕಾಳಿ ನದಿ ಸೇತುವೆಯ ಕೋಗಿಲಬನ ಭಾಗದ ಪಾಶ್ವದಲ್ಲಿನ ರಕ್ಷಣಾ ಗೋಡೆ ಇದೀಗ ಭಾರೀ ಅಪಾಯದ ಸ್ಥಿತಿಗೆ ತಲುಪಿದೆ. ಗೋಡೆಯ ಕಲ್ಲುಗಳು ಒಂದೊಂದಾಗಿ ಉದುರಿ ಬೀಳುತ್ತಿದ್ದು, ಕೆಳಭಾಗದ ಅಡಿಪಾಯ ಕಲ್ಲುಗಳನ್ನು ನದಿಯ ನೀರಿನ ಹೊಡೆತ ಈಗಾಗಲೇ ಕೊಚ್ಚಿಕೊಂಡು ಹೋಗಿದೆ. ಹೀಗಾಗಿ ಈ ರಕ್ಷಣಾ ಗೋಡೆ ಮಳೆಗಾಲದಲ್ಲಿ ಅಥವಾ ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಭೀತಿ ಎದುರಾಗಿದೆ.
ಈ ಅಪಾಯಕಾರಿ ಭಾಗ ಕೋಗಿಲಬನದಿಂದ ಬರುವಾಗ ಕಾಳಿ ನದಿಯ ಬಲಭಾಗದ ಆರಂಭಿಕ ಹಂತದಲ್ಲಿದ್ದು, ಇಲ್ಲಿ ದಿನನಿತ್ಯ ಜನರ ಸಂಚಾರ ಹಾಗೂ ಚಟುವಟಿಕೆ ಹೆಚ್ಚಾಗಿದೆ. ವಿಶೇಷವಾಗಿ ಗ್ರಾಮದ ಮಹಿಳೆಯರು ಬಟ್ಟೆ ತೊಳೆಯಲು, ಪುರುಷರು ಸ್ನಾನ ಮಾಡಲು ಇದೇ ರಕ್ಷಣಾ ಗೋಡೆಯ ಕೆಳಭಾಗದಲ್ಲಿರುವ ಅರಣ್ಯ ಇಲಾಖೆಯ ಮೊಸಳೆ ರಕ್ಷಣಾ ಬೇಲಿಯ ಒಳಗೆ ನದಿನೀರನ್ನು ಬಳಸುತ್ತಾರೆ. ಉಳವಿಗೆ ತೆರಳುವ ಅನೇಕ ಪ್ರಯಾಣಿಕರೂ ಇದೇ ಸ್ಥಳದಲ್ಲಿ ಸ್ನಾನ ಮಾಡುವುದು ಸಾಮಾನ್ಯವಾಗಿದೆ. ಹೀಗಾಗಿ ಇಲ್ಲಿ ಯಾವಾಗಲೂ ಜನರ ಓಡಾಟ ಇರುತ್ತದೆ.
ಕಳೆದ ಮಳೆಗಾಲದಲ್ಲಿ ಈಶ್ವರ ಗುಡಿಯ ಸಮೀಪದ ಮತ್ತೊಂದು ಪಾಶ್ವದ ರಕ್ಷಣಾ ಗೋಡೆ ಕುಸಿದ ಘಟನೆ ಇನ್ನೂ ಜನರ ನೆನಪಿನಲ್ಲಿ ತಾಜಾ ಇದೆ. ಆದರೆ ಅಲ್ಲಿ ಜನರ ಸಂಚಾರ ಕಡಿಮೆ ಇದ್ದುದರಿಂದ ಜೀವಾಪಾಯ ಸಂಭವಿಸಲಿಲ್ಲ. ಇದೀಗ ಕೋಗಿಲಬನ ಭಾಗದ ರಕ್ಷಣಾ ಗೋಡೆ ಕುಸಿದರೆ ಪರಿಸ್ಥಿತಿ ಗಂಭೀರ ಸ್ವರೂಪ ಪಡೆಯುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಡ್ಯಾಂನಿಂದ ನೀರು ಬಿಡುವ ಸಂದರ್ಭಗಳಲ್ಲಿ ನದಿಯ ನೀರಿನ ಮಟ್ಟ ಏರಿಕೆಯಾಗುವುದರಿಂದ ರಕ್ಷಣಾ ಗೋಡೆಯ ಅಡಿಪಾಯದ ಕಲ್ಲುಗಳು ಕೊಚ್ಚಿಹೋಗಿರುವುದು ಗೋಚರಿಸುವುದಿಲ್ಲ. ಆದರೆ ನೀರು ನಿಂತ ನಂತರ ನದಿಯ ಕಲ್ಲುಬಂಡೆಗಳು ಕಾಣಿಸಿಕೊಂಡಾಗ ಸೇತುವೆಯ ಕೆಳಭಾಗದ ನಾಲ್ಕನೇ ಆಧಾರ ಸ್ಥಂಭದ ಅಡಿಪಾಯ ಕಲ್ಲುಗಳೂ ನದಿ ಪಾಲಾಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಇದು ಸೇತುವೆಯ ಸುರಕ್ಷತೆ ಕುರಿತೂ ಪ್ರಶ್ನೆ ಹುಟ್ಟಿಸಿದೆ.
ಕಳೆದ ವರ್ಷ ಇದೇ ಸೇತುವೆಯ ದುಸ್ಥಿತಿಯ ಕುರಿತು “ಸಂಯುಕ್ತ ಕರ್ನಾಟಕ” ವೆಬ್ ನ್ಯೂಸ್ ಹಾಗೂ ಪತ್ರಿಕೆಯಲ್ಲಿ ವರದಿ ಪ್ರಕಟವಾದ ಬಳಿಕ ಜಿಲ್ಲಾಧಿಕಾರಿಗಳು ಸಂಬಂಧಿತ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಅದರ ನಂತರ ಸೇತುವೆಯ ಮೇಲ್ಭಾಗದ ರಸ್ತೆಯ ಎರಡೂ ಬದಿಯ ಹಳೆಯ ರಕ್ಷಣಾ ಗೋಡೆಗಳನ್ನು ತೆರವುಗೊಳಿಸಿ ಹೊಸ ಗೋಡೆ ನಿರ್ಮಾಣ ಮಾಡಲಾಗಿದೆ. ಕಾಂಕ್ರಿಟ್ ರಸ್ತೆ ಕಾಮಗಾರಿ ಹಾಗೂ ಕುಸಿದ ಭಾಗ ಮರುನಿರ್ಮಾಣದ ಸಿದ್ಧತೆ ಕೈಗೊಳ್ಳಲಾಗಿದೆ.
ಕಾಮಗಾರಿ ಪ್ರಾರಂಭಿಕ ಹಂತದಲ್ಲಿದ್ದರೂ, ಜನರ ಚಟುವಟಿಕೆ ಹೆಚ್ಚಿರುವ ಈ ಅಪಾಯಕಾರಿ ಭಾಗಕ್ಕೆ ಇನ್ನೂ ತುರ್ತು ರಕ್ಷಣಾತ್ಮಕ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕ ಅಸಮಾಧಾನಕ್ಕೆ ಕಾರಣವಾಗಿದೆ. ಸ್ಥಳೀಯರು ಹಾಗೂ ಸಾರ್ವಜನಿಕರು ತಕ್ಷಣವೇ ಅಪಾಯಕಾರಿ ಪ್ರದೇಶವನ್ನು ತಾತ್ಕಾಲಿಕವಾಗಿ ಬಂದ್ ಮಾಡಿ, ಎಚ್ಚರಿಕೆ ಫಲಕ ಅಳವಡಿಸಿ, ರಕ್ಷಣಾ ಗೋಡೆಯ ತುರ್ತು ದುರಸ್ತಿ ಹಾಗೂ ಸೇತುವೆಯ ತಾಂತ್ರಿಕ ಪರಿಶೀಲನೆ ನಡೆಸುವಂತೆ ಜಿಲ್ಲಾಡಳಿತ ಮತ್ತು ಸಂಬಂಧಿತ ಇಲಾಖೆಗೆ ಆಗ್ರಹಿಸಿದ್ದಾರೆ.




















