SK Home Ad
Home ಸುದ್ದಿ ರಾಜ್ಯ ಚಿತ್ರರಂಗಕ್ಕೆ ದಳಪತಿ ವಿಜಯ್ ಬಂಪರ್ ಕೊಡುಗೆ: ಹೊಸ ಸಿನಿಮಾ ರಿಲೀಸ್ ಆದ ಮೊದಲ ವಾರ 5...

ಚಿತ್ರರಂಗಕ್ಕೆ ದಳಪತಿ ವಿಜಯ್ ಬಂಪರ್ ಕೊಡುಗೆ: ಹೊಸ ಸಿನಿಮಾ ರಿಲೀಸ್ ಆದ ಮೊದಲ ವಾರ 5 ಶೋಗಳಿಗೆ ಗ್ರೀನ್ ಸಿಗ್ನಲ್!

0
1

ಚೆನ್ನೈ: ತಮಿಳುನಾಡಿನಲ್ಲಿ ಇನ್ಮುಂದೆ ಹೊಸದಾಗಿ ಬಿಡುಗಡೆಯಾಗುವ ಸಿನಿಮಾಗಳು ಮೊದಲ 7 ದಿನಗಳ ಕಾಲ ದಿನಕ್ಕೆ ಐದು ಪ್ರದರ್ಶನಗಳನ್ನು ಕಾಣಲಿವೆ. ಚಿತ್ರರಂಗದ ದೀರ್ಘಕಾಲದ ಬೇಡಿಕೆಗೆ ಸ್ಪಂದಿಸಿರುವ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (ದಳಪತಿ ವಿಜಯ್) ಪ್ರತಿದಿನ 5 ಪ್ರದರ್ಶನಗಳಿಗೆ ಅಧಿಕೃತವಾಗಿ ಅನುಮತಿ ನೀಡಿದ್ದಾರೆ.

ಚಿತ್ರರಂಗದ ಪ್ರತಿನಿಧಿಗಳ ಮನವಿ: ಚಲನಚಿತ್ರ ಮಂಡಳಿಯ ಪದಾಧಿಕಾರಿಗಳು ಹಾಗೂ ಚಿತ್ರೋದ್ಯಮದ ಪ್ರಮುಖ ಪ್ರತಿನಿಧಿಗಳು ಮೇ 16 ರಂದು ಮುಖ್ಯಮಂತ್ರಿ ವಿಜಯ್ ಭೇಟಿ ಮಾಡಿ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರ ಸಲ್ಲಿಸಿದ್ದರು. ಚಿತ್ರಮಂದಿರಗಳ ಆರ್ಥಿಕ ಚೇತರಿಕೆ ಮತ್ತು ಪ್ರೇಕ್ಷಕರ ಅನುಕೂಲಕ್ಕಾಗಿ ದಿನಕ್ಕೆ 5 ಪ್ರದರ್ಶನಗಳನ್ನು ನಡೆಸಲು ಅವಕಾಶ ನೀಡಬೇಕು ಎಂಬುದು ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು. ಈ ಕೋರಿಕೆಯನ್ನು ಪುರಸ್ಕರಿಸಿರುವ ಸಿಎಂ, ಚಿತ್ರೋದ್ಯಮದ ಹಿತದೃಷ್ಟಿಯಿಂದ ಹಸಿರು ನಿಶಾನೆ ತೋರಿದ್ದಾರೆ. ಈ ಕುರಿತು ತಮಿಳುನಾಡು ಮುಖ್ಯಮಂತ್ರಿ ಕಚೇರಿ (CMO) ತನ್ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದೆ.

ಹಳೇ ನಿಯಮ ಬದಲಾವಣೆ: ಚಿತ್ರಮಂದಿರಗಳ ನಿಯಮ 14-ಎ ಪ್ರಕಾರ, ತಮಿಳುನಾಡಿನಲ್ಲಿ ಈವರೆಗೆ ದಿನಕ್ಕೆ ಕೇವಲ ನಾಲ್ಕು ಪ್ರದರ್ಶನಗಳಿಗೆ ಮಾತ್ರ ಅವಕಾಶವಿತ್ತು. ಹಬ್ಬ ಹರಿದಿನಗಳು ಅಥವಾ ಸಾರ್ವಜನಿಕ ರಜಾದಿನಗಳಲ್ಲಿ ಮಾತ್ರ ವಿಶೇಷವಾಗಿ ಒಂದು ಹೆಚ್ಚುವರಿ ಪ್ರದರ್ಶನಕ್ಕೆ (ಒಟ್ಟು 5 ಪ್ರದರ್ಶನ) ಸರ್ಕಾರ ಅನುಮತಿ ನೀಡುತ್ತಿತ್ತು. ಆದ್ರೆ ಈಗಿನ ಹೊಸ ಆದೇಶದ ಪ್ರಕಾರ, ಯಾವುದೇ ಹೊಸ ಸಿನಿಮಾ ಬಿಡುಗಡೆಯಾದ ಮೊದಲ ಒಂದು ವಾರದವರೆಗೆ (7 ದಿನಗಳು) ಪ್ರತಿದಿನ 5 ಪ್ರದರ್ಶನಗಳನ್ನು ಪ್ರದರ್ಶಿಸಬಹುದಾಗಿದೆ.

ಮುಖ್ಯಮಂತ್ರಿಗಳ ಈ ಹೊಸ ನಿರ್ಧಾರದಿಂದಾಗಿ ತಮಿಳು ಚಿತ್ರರಂಗದ ನಿರ್ಮಾಪಕರು, ವಿತರಕರು ಹಾಗೂ ಚಿತ್ರಮಂದಿರಗಳ ಮಾಲೀಕರು ಹರ್ಷ ವ್ಯಕ್ತಪಡಿಸಿದ್ದು, ಇದು ತಮಿಳು ಚಿತ್ರೋದ್ಯಮದ ವ್ಯವಹಾರಕ್ಕೆ ದೊಡ್ಡ ಮಟ್ಟದ ಬೂಸ್ಟರ್ ಡೋಸ್ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.