SK Home Ad
Home ಕ್ರೀಡೆ RCB vs SRH: ವಿರಾಟ್ ಕೊಹ್ಲಿ – ಟ್ರಾವಿಸ್ ಹೆಡ್ ನಡುವೆ ಬಿಸಿಬಿಸಿ ಮಾತಿನ ಚಕಮಕಿ!

RCB vs SRH: ವಿರಾಟ್ ಕೊಹ್ಲಿ – ಟ್ರಾವಿಸ್ ಹೆಡ್ ನಡುವೆ ಬಿಸಿಬಿಸಿ ಮಾತಿನ ಚಕಮಕಿ!

0
138

ಬೆಂಗಳೂರು: ನಿನ್ನೆ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ನಡುವಿನ ಹೈವೋಲ್ಟೇಜ್ ಪಂದ್ಯವು ಕೇವಲ ರನ್ ಮಳೆಯಿಂದ ಮಾತ್ರವಲ್ಲದೆ, ಆಟಗಾರರ ನಡುವಿನ ಉದ್ವಿಗ್ನ ಕ್ಷಣಗಳಿಂದಲೂ ಭಾರೀ ಸದ್ದು ಮಾಡುತ್ತಿದೆ. ಪಂದ್ಯದ ವೇಳೆ ಆರ್‌ಸಿಬಿ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಾಗೂ ಎಸ್‌ಆರ್‌ಎಚ್‌ ತಂಡದ ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್ ನಡುವೆ ಮೈದಾನದಲ್ಲೇ ತೀವ್ರ ಮಾತಿನ ಚಕಮಕಿ ನಡೆದಿದೆ.
ಇನ್ನಿಂಗ್ಸ್‌ನ ಪ್ರಮುಖ ಘಟ್ಟದಲ್ಲಿ ವಿರಾಟ್ ಕೊಹ್ಲಿ ಔಟಾಗುತ್ತಿದ್ದಂತೆ ಮೈದಾನದಲ್ಲಿ ನಾಟಕೀಯ ಬೆಳವಣಿಗೆಯೊಂದು ನಡೆಯಿತು.

ಕೊಹ್ಲಿ ವಿಕೆಟ್ ಪತನದ ಬೆನ್ನಲ್ಲೇ ಟ್ರಾವಿಸ್ ಹೆಡ್ ಕೊಹ್ಲಿಯನ್ನು ಕೆಣಕುವ ರೀತಿಯಲ್ಲಿ ಕೀಟಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಇದರಿಂದ ಕೆರಳಿದ ವಿರಾಟ್ ಕೊಹ್ಲಿ ಮತ್ತು ಹೆಡ್ ನಡುವೆ ಮೈದಾನದಲ್ಲೇ ತೀವ್ರ ವಾಗ್ವಾದ ನಡೆದಿದ್ದು, ಇಬ್ಬರೂ ಬಿಸಿ-ಬಿಸಿ ಮಾತುಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಈ ದೃಶ್ಯಾವಳಿಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಅಭಿಮಾನಿಗಳ ನಡುವೆ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಹಾಗೆ ಮೈದಾನದಲ್ಲಿ ಆರಂಭವಾದ ಈ ಜಗಳ ಪಂದ್ಯ ಮುಗಿದ ನಂತರವೂ ತಣ್ಣಗಾಗಲಿಲ್ಲ. ಪಂದ್ಯ ಮುಕ್ತಾಯಗೊಂಡ ಬಳಿಕ ಸಾಂಪ್ರದಾಯಿಕವಾಗಿ ಎರಡೂ ತಂಡಗಳ ಆಟಗಾರರು ಪರಸ್ಪರ ಕೈಕುಲುಕುವ (Handshake) ಸಮಯದಲ್ಲೂ ಈ ಉದ್ವಿಗ್ನತೆ ಸ್ಪಷ್ಟವಾಗಿ ಕಂಡುಬಂದಿದೆ.

ಇದಾದ ಬಳಿಕ ಆಟಗಾರರು ಲೈನ್‌ನಲ್ಲಿ ಬಂದು ಪರಸ್ಪರ ಹಸ್ತಲಾಘವ ಮಾಡುತ್ತಿದ್ದಾಗ, ವಿರಾಟ್ ಕೊಹ್ಲಿ ತಮ್ಮ ಮುಂದಿದ್ದ ಟ್ರಾವಿಸ್ ಹೆಡ್‌ನ್ನ ಸಂಪೂರ್ಣವಾಗಿ ನಿರ್ಲಕ್ಷಿಸಿ, ಮುಂದಿರು ಬೇರೆ ಆಟಗಾರನನ್ನು ಕೈಕುಲುಕಿ ತೀವ್ರ ಕೋಪದಿಂದಲೇ ಮುಂದೆ ಸಾಗಿದ್ದಾರೆ. ವಿರಾಟ್ ಈ ಆಕ್ರೋಶದ ನಡವಳಿಕೆ ಮೈದಾನದಲ್ಲಿದ್ದ ಇಬ್ಬರ ನಡುವಿನ ವೈಷಮ್ಯ ಎಷ್ಟು ತೀವ್ರವಾಗಿತ್ತು ಎಂಬುದನ್ನು ಸಾಬೀತುಪಡಿಸಿದೆ.

ಅಭಿಮಾನಿಗಳ ಆಕ್ರೋಶ ಮತ್ತು ಕಮೆಂಟ್‌ಗಳ ಸುರಿಮಳೆ: ಈ ಘಟನೆಯ ವಿಡಿಯೋಗಳು ಮತ್ತು ಫೋಟೋಗಳು ವೈರಲ್ ಆಗುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಮೆಂಟ್‌ಗಳ ಸುರಿಮಳೆಗೈಯುತ್ತಿದ್ದಾರೆ. ವಿರಾಟ್ ಕೊಹ್ಲಿ ಔಟಾದ ತಕ್ಷಣ ಟ್ರಾವಿಸ್ ಹೆಡ್ ಅನಗತ್ಯವಾಗಿ ಕೀಟಲೆ ಮಾಡಿ ಸ್ಲೆಡ್ಜಿಂಗ್‌ಗೆ ಇಳಿದಿದ್ದೇ ಈ ಎಲ್ಲಾ ಗೊಂದಲಗಳಿಗೆ ಮೂಲ ಕಾರಣ ಎಂದು ಆರ್‌ಸಿಬಿ ಅಭಿಮಾನಿಗಳು ಹೆಡ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಒಟ್ಟಾರೆಯಾಗಿ, ನಿನ್ನೆಯ ಆರ್‌ಸಿಬಿ ಮತ್ತು ಎಸ್‌ಆರ್‌ಎಚ್‌ ಪಂದ್ಯವು ಕೇವಲ ಕ್ರಿಕೆಟ್ ಆಟದಿಂದ ಮಾತ್ರವಲ್ಲದೆ, ಈ ಸ್ಟಾರ್ ಆಟಗಾರರ ನಡುವಿನ ಮುನಿಸಿನಿಂದಾಗಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೆಂಡಿಂಗ್‌ನಲ್ಲಿದೆ.