SK Home Ad
Home ಕ್ರೀಡೆ India vs Pakistan Final: ಭಾರತೀಯ ಪಾಳಯದಲ್ಲಿ ಆತಂಕ: ಪಾಕ್ ಗೆಲುವಿಗೆ ಕೊನೆ 18 ಎಸೆತಗಳಲ್ಲಿ...

India vs Pakistan Final: ಭಾರತೀಯ ಪಾಳಯದಲ್ಲಿ ಆತಂಕ: ಪಾಕ್ ಗೆಲುವಿಗೆ ಕೊನೆ 18 ಎಸೆತಗಳಲ್ಲಿ 52 ರನ್ ಅಗತ್ಯ

0
19

ಐಚಿ-ನಗೋಯಾ ಏಷ್ಯನ್ ಗೇಮ್ಸ್ 2026ರ ಪುರುಷರ ಕ್ರಿಕೆಟ್‌ನ ಹೈವೋಲ್ಟೇಜ್ ಫೈನಲ್ ಕದನ ಉಸಿರುಬಿಗಿಹಿಡಿದು ನೋಡುವ ಹಂತ ತಲುಪಿದೆ. ಭಾರತ ನೀಡಿದ 212 ರನ್‌ಗಳ ಬೃಹತ್ ಸವಾಲನ್ನು ಬೆನ್ನಟ್ಟುತ್ತಿರುವ ಪಾಕಿಸ್ತಾನ ತಂಡಕ್ಕೆ ಸ್ಪೋಟಕ ಬ್ಯಾಟರ್ ಹಸನ್ ನವಾಜ್ ಬಲ ತುಂಬಿದ್ದು, ಪಂದ್ಯ ತೀವ್ರ ರೋಚಕತೆಗೆ ಸಾಕ್ಷಿಯಾಗಿದೆ. 17 ಓವರ್‌ಗಳ ಮುಕ್ತಾಯಕ್ಕೆ ಪಾಕಿಸ್ತಾನ 4 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿದ್ದು, ಗೆಲುವಿಗೆ ಕೊನೆಯ 3 ಓವರ್‌ಗಳಲ್ಲಿ (18 ಎಸೆತ) 52 ರನ್‌ಗಳ ಅಗತ್ಯವಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ, ಅಭಿಷೇಕ್ ಶರ್ಮಾ (61 ರನ್, 28 ಎಸೆತ) ಮತ್ತು ಅಂತಿಮ ಹಂತದಲ್ಲಿ ಅಬ್ಬರಿಸಿದ ತಿಲಕ್ ವರ್ಮಾ (ಅಜೇಯ 51 ರನ್, 22 ಎಸೆತ) ಹಾಗೂ ಶಿವಂ ದುಬೆ (27) ಅವರ ಬಿರುಸಿನ ಬ್ಯಾಟಿಂಗ್ ಬಲದಿಂದ 20 ಓವರ್‌ಗಳಲ್ಲಿ 211/6 ರನ್ ಪೇರಿಸಿತ್ತು.

ಬಳಿಕ ಗುರಿ ಬೆನ್ನಟ್ಟಿದ ಪಾಕಿಸ್ತಾನ 39 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ 9ನೇ ಓವರ್‌ನಲ್ಲಿ ಜೀವದಾನ ಪಡೆದ ಹಸನ್ ನವಾಜ್ ಭಾರತೀಯ ಬೌಲರ್‌ಗಳ ಮೇಲೆ ಅಕ್ಷರಶಃ ಸವಾರಿ ಮಾಡಿದರು. ಕೇವಲ 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ನವಾಜ್, ಸದ್ಯ 40 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 4 ಬೌಂಡರಿಗಳೊಂದಿಗೆ 79 ರನ್ ಸಿಡಿಸಿ ಕ್ರೀಸ್‌ನಲ್ಲಿದ್ದಾರೆ. 4ನೇ ವಿಕೆಟ್‌ಗೆ ಸೈಮ್ ಅಯೂಬ್ (29) ಜೊತೆಗೂಡಿ ಭರ್ಜರಿ ಜೊತೆಯಾಟವಾಡಿದ ನವಾಜ್, ಅಯೂಬ್ ನಿರ್ಗಮನದ ಬಳಿಕವೂ ಅಬ್ದುಲ್ ಸಮದ್ ಜೊತೆಗೂಡಿ ರನ್ ವೇಗವನ್ನು ಕಾಯ್ದುಕೊಂಡಿದ್ದಾರೆ.

ಪ್ರಮುಖ ಹಂತದಲ್ಲಿ ಶಿವಂ ದುಬೆ ಅಯೂಬ್ ವಿಕೆಟ್ ಕಿತ್ತು ಭಾರತಕ್ಕೆ ಕೊಂಚ ನಿರಾಳತೆ ತಂದರೂ, ಡೆತ್ ಓವರ್‌ಗಳಲ್ಲಿ ನವಾಜ್ ಆರ್ಭಟ ಭಾರತೀಯ ಪಾಳಯದಲ್ಲಿ ಆತಂಕ ಹುಟ್ಟಿಸಿದೆ. ಚಿನ್ನ ಯಾರ ಕೊರಳಿಗೆ ಬೀಳಲಿದೆ ಎಂಬುದು ಕೊನೆಯ 18 ಎಸೆತಗಳ ಡೆತ್ ಬೌಲಿಂಗ್ ಮೇಲೆ ನಿಂತಿದೆ.