15 ವರ್ಷದ ಯುವ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ ಅದ್ಭುತ ಫಾರ್ಮ್‌ನಲ್ಲಿದ್ದರೂ ಟಿ20 ಪ್ಲೇಯಿಂಗ್ ಇಲೆವೆನ್‌ನಲ್ಲಿ ನಿರಂತರ ಅವಕಾಶ ಸಿಗದಿರುವ ಕುರಿತು ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಸ್ಪಷ್ಟನೆ ನೀಡಿದ್ದಾರೆ. ಸೋಷಿಯಲ್ ಮೀಡಿಯಾದ ಕೂಗು ಅಥವಾ ಹೊರಗಿನ ಚರ್ಚೆಗಳು ಭಾರತ ತಂಡದ ಅಂತಿಮ ಹನ್ನೊಂದನ್ನು ನಿರ್ಧರಿಸುವುದಿಲ್ಲ ಎಂದು ಅವರು ಖಡಕ್ ಆಗಿ ಹೇಳಿದ್ದಾರೆ.
ಸೂರ್ಯವಂಶಿಗೆ ಅವಕಾಶ ನೀಡದಿರುವ ಬಗ್ಗೆ ಸ್ವತಃ ಆತನ ಜೊತೆ ಮಾತನಾಡಿದ್ದೇನೆ ಎಂದ ಗಂಭೀರ್, “ಕಳೆದ ಒಂದೂವರೆ-ಎರಡು ವರ್ಷಗಳಿಂದ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಆರಂಭಿಕರಾಗಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಎರಡೋ ಮೂರೋ ವೈಫಲ್ಯಗಳ ಕಾರಣಕ್ಕೆ ಅವರನ್ನು ದಿಢೀರ್ ಕೈಬಿಟ್ಟು ಹೊಸ ಆಟಗಾರನಿಗೆ ಅವಕಾಶ ನೀಡಿದರೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಭದ್ರತೆಯ ಭಾವನೆ ನಾಶವಾಗುತ್ತದೆ. ಉತ್ತಮ ಫಾರ್ಮ್‌ನಲ್ಲಿದ್ದರೂ ತಂಡದ ಸಮತೋಲನದ ದೃಷ್ಟಿಯಿಂದ ಕೆಲವೊಮ್ಮೆ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ ಎಂಬುದನ್ನು ವೈಭವ್‌ಗೆ ಮನವರಿಕೆ ಮಾಡಿದ್ದೇನೆ” ಎಂದು ತಿಳಿಸಿದರು.
ಕೋಚ್ ಹಾಗೂ ನಾಯಕ ಯಾವ ಆಟಗಾರ ಪಂದ್ಯ ಗೆಲ್ಲಿಸಬಲ್ಲ ಎಂಬುದನ್ನು ನೋಡಿ ನಿರ್ಧಾರ ಕೈಗೊಳ್ಳುತ್ತಾರೆ ಹೊರತು ಜನಪ್ರಿಯತೆಗಲ್ಲ ಎಂದ ಗಂಭೀರ್, “ಜನಪ್ರಿಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ತುಂಬಾ ಸುಲಭ, ಆದರೆ ತಂಡದ ಹಿತದೃಷ್ಟಿಯಿಂದ ಸರಿಯಾದ ನಿರ್ಧಾರ ಕೈಗೊಳ್ಳುವುದು ಕಷ್ಟಕರ. ಸದ್ಯದ ಆರಂಭಿಕ ಜೋಡಿಗೆ ನಾವು ಬೆಂಬಲವಾಗಿ ನಿಲ್ಲುವುದು ಅನಿವಾರ್ಯ” ಎಂದು ತಮ್ಮ ಆಯ್ಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.





















