Home Advertisement
Home ನಮ್ಮ ಜಿಲ್ಲೆ ಕಲಬುರಗಿ ಕಲಬುರಗಿಯಲ್ಲಿ ಭೀಕರ ಅಪಘಾತ: ಒಂದೇ ಕುಟುಂಬದ ಐವರು ಸಾವು

ಕಲಬುರಗಿಯಲ್ಲಿ ಭೀಕರ ಅಪಘಾತ: ಒಂದೇ ಕುಟುಂಬದ ಐವರು ಸಾವು

0
125

ರಾಷ್ಟ್ರೀಯ ಹೆದ್ದಾರಿಯಲ್ಲಿ ದಾರುಣ ದುರಂತ; ಐವರು ಸ್ಥಳದಲ್ಲೇ ಮೃತ್ಯು

ಸಂ.ಕ. ಸಮಾಚಾರ ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಸಮೀಪ ಶುಕ್ರವಾರ ಮಧ್ಯರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಕ್ರೂಸರ್ ವಾಹನ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪ್ರಯಾಣಿಸುತ್ತಿದ್ದ ಐವರು ದಾರುಣ ಅಂತ್ಯ ಕಂಡಿದ್ದಾರೆ. ಮೃತರನ್ನು ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದ ನಿವಾಸಿಗಳಾದ ತೋಲುಸಾಬ್, ಹುಸೇನ್ ಷಾ, ಮೈಬೂಬ್ ಅಲಿ, ರಸೂಲ್ ಬೀ ಮತ್ತು ಫಾತೀಮಾ ಅಲಿ ಎಂದು ಗುರುತಿಸಲಾಗಿದೆ. ಈ ಘಟನೆ ಇಂಗಳಗಿ ಗ್ರಾಮದಲ್ಲಿ ಆಘಾತ ಮತ್ತು ಶೋಕದ ವಾತಾವರಣ ಸೃಷ್ಟಿಸಿದೆ.

ಯಾದಗಿರಿಯಿಂದ ಮರಳುವಾಗ ದುರ್ಘಟನೆ : ಮಾಹಿತಿಯ ಪ್ರಕಾರ, ಕುಟುಂಬದ ಸದಸ್ಯರು ವೈಯಕ್ತಿಕ ಕೆಲಸದ ನಿಮಿತ್ತ ಯಾದಗಿರಿಗೆ ತೆರಳಿ ಕ್ರೂಸರ್ ವಾಹನದಲ್ಲಿ ಮರಳಿ ಬರುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿವೇಗವಾಗಿ ಬಂದ ಲಾರಿ ಕ್ರೂಸರ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಕ್ರೂಸರ್ ಸಂಪೂರ್ಣ ಜಖಂಗೊಂಡಿದ್ದು, ವಾಹನದಲ್ಲಿದ್ದವರಿಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಪೊಲೀಸರ ಭೇಟಿ : ಘಟನೆಯ ಮಾಹಿತಿ ತಿಳಿದ ತಕ್ಷಣ ವಾಡಿ ಪೊಲೀಸ ಠಾಣೆಯ ವ್ಯಾಪ್ತಿಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ಸಂತಾಪ : ಈ ದುರ್ಘಟನೆ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ. “ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ರೂಸರ್ ಮತ್ತು ಲಾರಿ ನಡುವಿನ ಭೀಕರ ಅಪಘಾತದಲ್ಲಿ ಇಂಗಳಗಿ ಗ್ರಾಮದ ಐವರು ಸ್ಥಳದಲ್ಲೇ ಮೃತಪಟ್ಟಿರುವ ಸುದ್ದಿ ಮನಸ್ಸಿಗೆ ತೀವ್ರ ನೋವುಂಟುಮಾಡಿದೆ” ಎಂದು ಅವರು ತಿಳಿಸಿದ್ದಾರೆ.

ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿರುವ ಅವರು, ಕುಟುಂಬಸ್ಥರು ಧೈರ್ಯ ಕಳೆದುಕೊಳ್ಳಬಾರದು ಎಂದು ಸಮಾಧಾನದ ಮಾತು ಹೇಳಿದ್ದಾರೆ. ಜಿಲ್ಲಾ ಪೊಲೀಸ್ ಇಲಾಖೆಯೊಂದಿಗೆ ಮಾತನಾಡಿರುವುದಾಗಿ ತಿಳಿಸಿರುವ ಸಚಿವರು, ಜಿಲ್ಲಾಡಳಿತದೊಂದಿಗೆ ಸೇರಿ ಮೃತರ ಕುಟುಂಬಗಳಿಗೆ ಅಗತ್ಯ ಸಹಕಾರ ಮತ್ತು ನೆರವು ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.