Home Advertisement
Home ನಮ್ಮ ಜಿಲ್ಲೆ ಧಾರವಾಡ ಪ್ರತ್ಯೇಕ ಪಾಲಿಕೆಗೆ ಅನುಮೋದನೆ ನೀಡಿ: ರಾಜ್ಯಪಾಲರಿಗೆ ಲಾಡ್ ಮನವಿ

ಪ್ರತ್ಯೇಕ ಪಾಲಿಕೆಗೆ ಅನುಮೋದನೆ ನೀಡಿ: ರಾಜ್ಯಪಾಲರಿಗೆ ಲಾಡ್ ಮನವಿ

0
54

ಧಾರವಾಡ: ಹು-ಧಾ ಮಹಾನಗರ ಪಾಲಿಕೆ ವಿಭಜಿಸಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆ ಪ್ರಸ್ತಾವಕ್ಕೆ ಅನುಮೋದನೆ ನೀಡಬೇಕು ಎಂದು ರಾಜ್ಯಪಾಲರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಮನವಿ ಮಾಡಿದರು.

ಧಾರವಾಡ ಶಾಸಕರು ಮತ್ತು ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟಗಾರರ ನಿಯೋಗದೊಂದಿಗೆ ಬುಧವಾರ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಲೋಕಭವನದಲ್ಲಿ ಭೇಟಿ ಮಾಡಿ ಮಾತನಾಡಿ, ಪ್ರತ್ಯೇಕ ಮಹಾನಗರ ಪಾಲಿಕೆ ಧಾರವಾಡದ ಜನತೆಯ ಬಹುದಿನಗಳ ಬೇಡಿಕೆಯಾಗಿದೆ. ಈಗಾಗಲೇ ಅಲ್ಲಿಯ ಜನರು ಪ್ರತಿಭಟನೆಗೆ ಮುಂದಾಗಿದ್ದು, ದಿನದಿಂದ ದಿನಕ್ಕೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಅದಕ್ಕಾಗಿ ಜನರ ಭಾವನೆಗಳಿಗೆ ಸ್ಪಂದಿಸಿ ಶೀಘ್ರವೇ ಅನುಮೋದನೆ ನೀಡಬೇಕು ಎಂದು ಮನವಿ ಮಾಡಿದರು.

ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಮಾತನಾಡಿ, ಕಳೆದ ಐದು ತಿಂಗಳ ಹಿಂದಷ್ಟೇ ನನ್ನ ಬಳಿ ಕಡತ ಬಂದಿದೆ. ಅಲ್ಲದೇ ಇನ್ನೂ ಪಾಲಿಕೆ ಸದಸ್ಯರ ಅವಧಿ ಪೂರ್ಣಗೊಳ್ಳದೇ ಪ್ರತ್ಯೇಕ ಪಾಲಿಕೆ ಮಾಡಿದರೆ ಅವರ ಅಧಿಕಾರ ಮೊಟಕುಗೊಳಿಸಿದಂತಾಗುತ್ತದೆ ಎಂಬ ಕಾರಣದಿಂದ ಸಹಿ ಹಾಕಿದ್ದಿಲ್ಲ. ಈಗ ಕಾನೂನು ವಿಭಾಗದ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು ಎನ್ನಲಾಗಿದೆ.

ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ ಹೋರಾಟಗಾರರು, ಸರಕಾರದಿಂದ ಆದೇಶವಾಗಿ ತಮ್ಮ ಬಳಿ 2025ರ ಏ. 28ರಂದು ಕಡತ ಬಂದಿದೆ. ಆದರೆ, ಇಲ್ಲಿಯ ವರೆಗೆ ಸಹಿಯಾಗದೇ ಹಾಗೆಯೇ ಉಳಿದಿದೆ. ಜನರ ಭಾವನೆಗಳಿಗೆ ಸ್ಪಂದನೆ ನೀಡಿ ನಮಗೆ ಶೀಘ್ರವೇ ಅನುಮೋದನೆ ನೀಡಬೇಕು ಎಂದು ಮನವಿ ಮಾಡಿದರು ಎನ್ನಲಾಗಿದೆ.