ಲಖನೌ: ಮಿಚೆಲ್ ಮಾರ್ಷ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ.
ಚೆನ್ನೈ ನೀಡಿದ್ದ 188 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಲಖನೌ 20 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ಗುರಿ ತಲುಪಿತು.
ಲಖನೌ ಪರ ಆರಂಭಿಕರಾದ ಮಿಚೆಲ್ ಮಾರ್ಷ್ ಮತ್ತು ಜೋಶ್ ಇಂಗ್ಲಿಸ್ ಜೋಡಿ 135 ರನ್‌ಗಳ ಬೃಹತ್ ಜತೆಯಾಟ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಜೋಶ್ ಇಂಗ್ಲಿಸ್ 32 ಎಸೆತದಲ್ಲಿ 3 ಬೌಂಡರಿ, 1 ಸಿಕ್ಸರ್‌ನಿಂದ 36 ರನ್‌ಗಳಿಸಿ ವಿಕೆಟ್ ಒಪ್ಪಿಸದರೆ, ಮುಂದಿನ ಎಸೆತದಲ್ಲಿಯೇ ಮಿಚೆಲ್ ಮಾರ್ಷ್ ಕೇವಲ 38 ಎಸೆತದಲ್ಲಿ 9 ಬೌಂಡರಿ ಮತು 7 ಸಿಕ್ಸರ್‌ನಿಂದ 90 ರನ್‌ಗಳಿಸಿ ರನೌಟ್ ಆದರು.
ವಿಕೆಟ್ ನಷ್ಟವಿಲ್ಲದೇ 135 ರನ್‌ಗಳಿಸಿದ್ದ ಲಖನೌ ಎರಡು ಎಸೆತದಲ್ಲಿಯೇ 2 ವಿಕೆಟ್ ಕಳೆದುಕೊಂಡಿತು. ಆದರೆ, ಬಳಿಕ ಕ್ರಿಸ್‌ಗೆ ಬಂದಿದ್ದ ಅಬ್ದುಲ್ ಸಮದ್ ಕೇವಲ 7 ರನ್ ಗಳಿಸಿ ಹೊರನಡೆದರು.
ನಿಕೋಲಸ್ ಪೂರನ್ ಕೇವಲ 17 ಎಸೆತದಲ್ಲಿ 1 ಬೌಂಡರಿ, 4 ಸಿಕ್ಸರ್ ಸಿಡಿಸಿ ಅಜೇಯ 32 ರನ್ ಗಳಿಸಿದರೆ, ಮುಕುಲ್ ಚೌಧರಿ 13 ರನ್‌ಗಳಿಸಿ ಅಜೇಯರಾಗಿ ಉಳಿದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಲಖನೌ ಸೂಪರ್ ಜೈಂಟ್ಸ್ ಲೆಕ್ಕಾಚಾರದಂತೆ ಆರಂಭದಲ್ಲಿಯೇ ಚೆನ್ನೈ ಬ್ಯಾಟ್ಸಮನ್‌ಗಳನ್ನು ನಿಯಂತ್ರಿಸುವಲ್ಲಿ ಯಶ ಕಂಡಿತು.
ಸಂಜು ಸ್ಯಾಮನ್ಸ್ (20) ರುತುರಾಜ್ ಗಾಯಕ್ವಾಡ (13) ಮತ್ತು ಉರ್ವಿಲ್ ಪಟೇಲ್ (6) ಮೂವರು ಆಕಾಶ್‌ಗೆ ವಿಕೆಟ್ ಒಪ್ಪಿಸಿದರು. 7.2 ಓವರ್‌ಗಳಲ್ಲಿಯೇ 52 ರನ್‌ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡ ಚೆನ್ನೈ ಸಂಕಷ್ಟಕ್ಕೆ ಸಿಲುಕಿತ್ತು.
ಈ ವೇಳೆ ಕಾರ್ತಿಕ್ ಶರ್ಮಾ ಮತ್ತು ಡೆವಾಲ್ಡ್ ಬ್ರೆವಿಸ್ ಜೋಡಿ 70 ರನ್‌ಗಳ ಜತೆಯಾಟ ನಡೆಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿತು. ಆಗ ಮೊಹಮ್ಮದ ಶಮಿ ಎಸೆತದಲ್ಲಿ ಬ್ರೆವಿಸ್ (25) ಆಕಾಶ್‌ಗೆ ಕ್ಯಾಚ್ ನೀಡಿ ಔಟಾದರು.
ಕಾರ್ತಿಕ್ ಶರ್ಮಾ 42 ಎಸೆತದಲ್ಲಿ 6 ಬೌಂಡರಿ, 5 ಸಿಕ್ಸರ್‌ನಿಂದ 71 ರನ್‌ಗಳಿಸಿ ಶಹಬಾಜ್ ಅಹ್ಮದ್ ಎಸೆತದಲ್ಲಿ ಐಡೆನ್ ಮಾರ್ಕ್ರಾಮ್‌ಗೆ ಕ್ಯಾಚ್ ನೀಡಿ ಹೊರನಡೆದರು. ಕೊನೆಯಲ್ಲಿ ಶಿವಂ ದುಬೆ ಕೇವಲ 16 ಎಸೆತದಲ್ಲಿ 3 ಬೌಂಡರಿ, 2 ಸಿಕ್ಸರ್‌ನಿಂದ ಅಜೇಯ 32 ರನ್‌ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.
ಲಖನೌ ಪರ ಆಕಾಶ್ ಮಹಾರಾಜ್ ಸಿಂಗ್ 26ಕ್ಕೆ 3 ವಿಕೆಟ್ ಪಡೆದರೆ, ಮೊಹಮ್ಮದ ಶಮಿ, ಶಹಬಾಜ್ ಅಹಮದ್ ತಲಾ ಒಂದು ವಿಕೆಟ್ ಪಡೆದರು.























