Home Advertisement
Home ನಮ್ಮ ಜಿಲ್ಲೆ ಬೆಳಗಾವಿ ಕರ್ನಾಟಕ ಪರ ಗೊತ್ತುವಳಿ ಅಂಗೀಕರಿಸದಿದ್ದರೆ ಪಾಲಿಕೆ ಸೂಪರ್‌ಸೀಡ್‌ಗೆ ಒತ್ತಾಯ

ಕರ್ನಾಟಕ ಪರ ಗೊತ್ತುವಳಿ ಅಂಗೀಕರಿಸದಿದ್ದರೆ ಪಾಲಿಕೆ ಸೂಪರ್‌ಸೀಡ್‌ಗೆ ಒತ್ತಾಯ

0
26

ಬೆಳಗಾವಿ: ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬ ಒಂದು ಸಾಲಿನ ಕರ್ನಾಟಕ ಪರ ಗೊತ್ತುವಳಿಯನ್ನು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅಂಗೀಕರಿಸಬೇಕು ಎಂಬ ಬೇಡಿಕೆ ಈಗ ರಾಜ್ಯ ರಾಜಕೀಯದ ಕೇಂದ್ರಬಿಂದುವಾಗುತ್ತಿದೆ. ಮಾರ್ಚ್ 26ರಿಂದ ಬೆಳಗಾವಿಯಲ್ಲಿ ಹೋರಾಟ ನಡೆಸುತ್ತಿರುವ ಕನ್ನಡ ಪರ ಸಂಘಟನೆಗಳ ಆಕ್ರೋಶ ಶುಕ್ರವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಬಾಗಿಲಿಗೆ ತಲುಪಿದೆ.

ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ರಾಜ್ಯಾಧ್ಯಕ್ಷ ಎಲ್. ಶಿವರಾಮೇಗೌಡ ಅವರು ಬೆಂಗಳೂರಿನಲ್ಲಿ ವಿಜಯೇಂದ್ರ ಅವರನ್ನು ಭೇಟಿ ಮಾಡಿ, ಬೆಳಗಾವಿ ಪಾಲಿಕೆಯಲ್ಲಿ ನಡೆದ ಬೆಳವಣಿಗೆಗಳ ಕುರಿತು ಸಮಗ್ರ ಚರ್ಚೆ ನಡೆಸಿದರು. ಕರ್ನಾಟಕ ಪರ ಗೊತ್ತುವಳಿ ಅಂಗೀಕರಿಸಲು ಬೆಳಗಾವಿ ಮಹಾಪೌರರು ಹಾಗೂ ಉಪ ಮಹಾಪೌರರಿಗೆ ಪಕ್ಷದ ಮಟ್ಟದಲ್ಲೇ ಸ್ಪಷ್ಟ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.

ಕನ್ನಡ ನಾಡು, ನುಡಿ ಮತ್ತು ಗಡಿ ಹಿತಾಸಕ್ತಿಯ ವಿಚಾರದಲ್ಲಿ ಬಿಜೆಪಿ ಬದ್ಧವಾಗಿದೆ. ಬೆಳಗಾವಿ ವಿಷಯದಲ್ಲಿ ತಾವು ಮಧ್ಯಪ್ರವೇಶಿಸುವುದಾಗಿ ವಿಜಯೇಂದ್ರ ಭರವಸೆ ನೀಡಿದ್ದಾರೆ ಎಂದು ಕರವೇ ಮುಖಂಡರು ತಿಳಿಸಿದ್ದಾರೆ.

ಇನ್ನೊಂದೆಡೆ, ಈ ವಿಚಾರದಲ್ಲಿ ರಾಜ್ಯದ ಪ್ರಮುಖ ಸಾಹಿತಿಗಳು, ಚಿಂತಕರು ಮತ್ತು ನಾಡಪರ ಹೋರಾಟಗಾರರೂ ಪಾಲಿಕೆಯ ನಿಲುವನ್ನು ಖಂಡಿಸಿ ಧ್ವನಿ ಎತ್ತಿದ್ದಾರೆ. ಡಾ. ಕೆ. ಮರುಳಸಿದ್ಧಪ್ಪ, ಡಾ. ಜಿ. ರಾಮಕೃಷ್ಣ, ಪ್ರೊ. ಎಸ್.ಜಿ. ಸಿದ್ಧರಾಮಯ್ಯ, ಡಾ. ವಿಜಯಾ ಜಾಣಗೆರೆ, ವೆಂಕಟರಾಮಯ್ಯ, ಡಾ. ಬಂಜಗೆರೆ ಜಯಪ್ರಕಾಶ್, ಆರ್.ಜಿ. ಹಳ್ಳಿ ನಾಗರಾಜ್ ಹಾಗೂ ಡಾ. ವಸುಂಧರಾ ಭೂಪತಿ ಅವರು ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬ ಠರಾವು ಹೊರಡಿಸಲು ಪಾಲಿಕೆಗೆ ಆಗ್ರಹಿಸಿದ್ದಾರೆ.

ಮಹಾಜನ್ ಆಯೋಗ ಬೆಳಗಾವಿ ಕರ್ನಾಟಕದ ಭಾಗವೆಂದು ಸ್ಪಷ್ಟಪಡಿಸಿ ದಶಕಗಳೇ ಕಳೆದಿದ್ದರೂ, ಬೆಳಗಾವಿ ಪಾಲಿಕೆಯಲ್ಲಿರುವ ಜನಪ್ರತಿನಿಧಿಗಳಿಗೆ ಈ ಐತಿಹಾಸಿಕ ಮತ್ತು ಭಾವನಾತ್ಮಕ ಸತ್ಯ ಅರ್ಥವಾಗದಿರುವುದು ವಿಷಾದನೀಯ ಎಂದು ಅವರು ಹೇಳಿದ್ದಾರೆ. ಕನ್ನಡ ನಾಡು, ನುಡಿ ಮತ್ತು ಗಡಿಯ ಹಿತಾಸಕ್ತಿಯ ಪ್ರಶ್ನೆಯಲ್ಲಿ ಪಾಲಿಕೆಯ ಜಾಣ ಕಿವುಡುತನ ನಾಚಿಕೆಗೇಡಿನ ಸಂಗತಿ ಎಂದು ಸಾಹಿತಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದ್ದರೂ, ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂದು ಹೇಳುವ ಧೈರ್ಯ ತೋರದೆ ಕಾನೂನು ನೆಪ ಮುಂದಿಡುತ್ತಿರುವ ಮೇಯರ್–ಉಪಮೇಯರ್ ನಿಲುವು ಕನ್ನಡ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. “ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು” ಎಂಬ ಠರಾವುಗಳನ್ನು ಎಂಇಎಸ್ ಆಡಳಿತದ ಕಾಲದಲ್ಲಿ ಪಾಲಿಕೆಯಲ್ಲಿ ಮಂಡಿಸಲಾಗಿತ್ತು. ಆದರೆ ಇಂದು ಕರ್ನಾಟಕ ಪರ ಠರಾವಿಗೆ ಮೀನಮೇಷ ಎಣಿಸುವುದು ನಾಡದ್ರೋಹಿ ಧೋರಣೆ ಎಂದು ಸಂಘಟನೆಗಳು ಕಿಡಿಕಾರಿವೆ.

“ಯಾರಾದರೂ ನ್ಯಾಯಾಲಯದ ಬಾಗಿಲು ತಟ್ಟಿದರೆಂದು ರಾಜ್ಯದ ಭಾಗವಾಗಿರುವ ನಗರ ಕುರಿತು ಮೌನ ವಹಿಸುವುದು ಸರಿಯಲ್ಲ. ಕೋರ್ಟ್ ನೆಪ ಹೇಳಿ ಕರ್ನಾಟಕ ಪರ ನಿಲುವಿನಿಂದ ಹಿಂದೆ ಸರಿಯುವುದು ಪಾಲಿಕೆಗೆ ಶೋಭೆ ತರುವುದಿಲ್ಲ” ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಈ ಕೂಡಲೇ ಬೆಳಗಾವಿ ಮಹಾನಗರ ಪಾಲಿಕೆ ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬ ಗೊತ್ತುವಳಿಯನ್ನು ಅಂಗೀಕರಿಸಬೇಕು. ವಿಫಲವಾದರೆ ಪಾಲಿಕೆಯನ್ನು ಸೂಪರ್‌ಸೀಡ್ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಕನ್ನಡ ಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.

ವಿಜಯೇಂದ್ರ ಅವರನ್ನು ಭೇಟಿಯಾದ ನಿಯೋಗದಲ್ಲಿ ಕರವೇ ಬೆಂಗಳೂರು ನಗರ ಅಧ್ಯಕ್ಷ ಶಂಕರ್, ಸಮರ ಸೇನೆಯ ಅಧ್ಯಕ್ಷ ಜಗದೀಶ್ ಗೌಡ್ರ, ರಾಜ್ಯ ಮಾಧ್ಯಮ ಸಂಚಾಲಕ ಜೈ ಕುಮಾರ್, ರಾಜ್ಯ ಯುವ ಘಟಕದ ಅಧ್ಯಕ್ಷ ಕನ್ನಡ ಕುಮಾರ್, ರಾಜ್ಯ ವಿದ್ಯಾರ್ಥಿ ಘಟಕದ ಅಧ್ಯಕ್ಷ ಯಲಹಂಕ ಗುರು ಸೇರಿದಂತೆ ಹಲವರು ಉಪಸ್ಥಿತರಿದ್ದರು.