Home Advertisement
Home ಸುದ್ದಿ ದೇಶ NEET ಮರು ಪರೀಕ್ಷೆ ದಿನಾಂಕ ನಿಗದಿ: ವದಂತಿಗಳಿಗೆ ಕಿವಿಗೊಡದಂತೆ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ NTA ಸೂಚನೆ

NEET ಮರು ಪರೀಕ್ಷೆ ದಿನಾಂಕ ನಿಗದಿ: ವದಂತಿಗಳಿಗೆ ಕಿವಿಗೊಡದಂತೆ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ NTA ಸೂಚನೆ

0
57

ನವದೆಹಲಿ: ವೈದ್ಯಕೀಯ ಶಿಕ್ಷಣ ಪ್ರವೇಶಾತಿಗಾಗಿ NEET ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ನಿರಾಸೆವುಂಟಾಗಿತ್ತು. ಆದ್ರೆ ಇದೀಗ ಅಭ್ಯರ್ಥಿಗಳಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಭಾರತ ಸರ್ಕಾರದ ಅನುಮೋದನೆಯ ಮೇರೆಗೆ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) NEET (UG) 2026 ರ ಮರು ಪರೀಕ್ಷೆಯ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.

ಪ್ರಕಟಣೆಯ ಪ್ರಕಾರ, NEET (UG) ಮರು ಪರೀಕ್ಷೆಯು 2026ರ ಜೂನ್ 21ರ ಭಾನುವಾರದಂದು ದೇಶಾದ್ಯಂತ ವಿವಿಧ ಕೇಂದ್ರಗಳಲ್ಲಿ ನಡೆಯಲಿದೆ. ಈ ಮೊದಲು ನಡೆದ ಪರೀಕ್ಷಾ ಪ್ರಕ್ರಿಯೆಗಳ ನಂತರ ಉಂಟಾದ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಸರ್ಕಾರವು ಮರು ಪರೀಕ್ಷೆ ನಡೆಸಲು ಹಸಿರು ನಿಶಾನೆ ತೋರಿಸಿದ್ದು, ಈಗ ಪರೀಕ್ಷಾ ಸಂಸ್ಥೆಯು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಪರೀಕ್ಷೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಡಬಹುದಾದ ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಎನ್.ಟಿ.ಎ (NTA) ಅಭ್ಯರ್ಥಿಗಳಿಗೆ ಮತ್ತು ಪೋಷಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪರೀಕ್ಷಾ ಕೇಂದ್ರ, ಪ್ರವೇಶ ಪತ್ರ (Admit Card) ಮತ್ತು ಇತರ ಪ್ರಮುಖ ಬದಲಾವಣೆಗಳಿಗಾಗಿ ಕೇವಲ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಹಾಗೂ ಅಧಿಕೃತ ಮಾಧ್ಯಮ ಚಾನೆಲ್‌ಗಳನ್ನು ಮಾತ್ರ ಅವಲಂಬಿಸಬೇಕೆಂದು ವಿನಂತಿಸಲಾಗಿದೆ.

ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಜೂನ್ 21ರಂದು ನಡೆಯಲಿರುವ ಈ ಪರೀಕ್ಷೆಯು ಅಭ್ಯರ್ಥಿಗಳ ಶೈಕ್ಷಣಿಕ ವೃತ್ತಿಜೀವನದಲ್ಲಿ ನಿರ್ಣಾಯಕವಾಗಿದ್ದು, ವಿದ್ಯಾರ್ಥಿಗಳು ಈಗಿನಿಂದಲೇ ತಯಾರಿ ನಡೆಸಲು ಪರೀಕ್ಷಾ ದಿನಾಂಕವು ನೆರವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ನಿಯಮಿತವಾಗಿ ಇಲಾಖೆಯ ವೆಬ್‌ಸೈಟ್ ಪರಿಶೀಲಿಸುವುದು ಸೂಕ್ತ.